ಸಂತ ಜೋಸೆಫ್ ವಾಝ್‌ರ ವಲಯ ಮಟ್ಟದ ವಾರ್ಷಿಕ ಮಹೋತ್ಸವ
ಕುಂದಾಪುರ, ಜ.15: ಸಂತ ಜೋಸೆಫ್ ವಾಝ್ ಅವರ ಕುಂದಾಪುರ ವಲಯ ಮಟ್ಟದ ವಾರ್ಷಿಕ ಮಹೋತ್ಸವವು ರವಿವಾರ ಕುಂದಾಪುರ ಹೋಲಿ ರೋಜರಿ ಚರ್ಚ್‌ನಲ್ಲಿ ಜರಗಿತು.
ಪವಿತ್ರ ಬಲಿಪೂಜೆಯನ್ನು ನೆರವೇರಿಸಿದ ಮಂಗಳೂರು ಸಂತ ಜೋಸೆಫ್ ಸೆಮನರಿಯ ಪ್ರಾಧ್ಯಾಪಕ ವಂ.ಕ್ಲಿಫರ್ಡ್ ಫೆರ್ನಾಂಡಿಸ್ ಮಾತನಾಡಿ, ದೇವರು ಕೆಲವರಿಗೆ ವಿಶೇಷ ಚೈತನ್ಯವನ್ನು ಕರುಣಿಸುತ್ತಾರೆ. ಅಂತಹವರ ಸಾಲಿಗೆ ಸೇರಿದವರು ಜೋಸೆಫ್ ವಾಝ್. ಇವರು ಕರಾವಳಿಯಲ್ಲಿ ಯೇಸು ಸ್ವಾಮಿಯ ಸಂದೇಶವನ್ನು ಸಾರುವುದರೊಂದಿಗೆ ಸರ್ವರಿಗೂ ಮಾದರಿಯಾದ ಜೀವನ ನಡೆಸಿ ಇಂದು ಸಂತರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂತ ಜೋಸೆಫ್ ವಾಝ್ ಅವರ ವಿಶೇಷ ನೊವೆನಾ ಪ್ರಾರ್ಥನೆ ಜರುಗಿತು. ಸಂತ ಜೋಸೆಫ್ ವಾಝ್ ಅವರು ಜೀವನ ಕಥನದ ಮೇಲೆ ಲೇಖಕ ವಿನೋದ್ ಗಂಗೊಳ್ಳಿ ಅವರು ನಿರ್ಮಿಸಿದ ಕೊಂಕಣಿ ಕಿರುಚಿತ್ರ ಜಿಣ್ಯೆದರ್ಶನ್ ಅನಾವರಣಗೊಳಿಸಲಾಯಿತು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜ, ಸಹಾಯಕ ಧರ್ಮಗುರು ವಂ.ಸಂದೀಪ್ ಜೆರಾಲ್ಡ್ ಡಿಮೆಲ್ಲೊ, ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ವಂ.ಪ್ರವೀಣ್ ಅಮೃತ್ ಮಾರ್ಟಿಸ್, ಅತಿಥಿ ಧರ್ಮಗುರುಗಳಾದ ವಂ.ವಿಶಾಲ್ ಲೋಬೊ, ವಂ.ಆಲ್ಬರ್ಟ್ ಕ್ರಾಸ್ತಾ, ವಂ.ಜೋನ್ ಎ.ಬಾರ್ಬೋಜಾ, ವಂ.ಲಿಯೋ ಉಪಸ್ಥಿತರಿದ್ದರು.
ಕುಂದಾಪುರ ವಲಯ ಪಾಲನಾ ಸಮಿತಿಯ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು. ಕುಂದಾಪುರ ಪಾಲನಾ ಸಮಿತಿಯ ಉಪಾಧ್ಯಕ್ಷ ಜಾಕೋಬ್ ಡಿಸೋಜ, ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜ ಸಹಕರಿಸಿದರು.