ಮೂಗಿ ಪತ್ನಿ, ಮಕ್ಕಳಿಗೆ ಕೈಕೊಟ್ಟು ಬೇರೆ ಮದುವೆಯಾದ ಪತಿರಾಯ: ಆರೋಪ

Update: 2018-01-15 15:55 GMT

ಕೊಣಾಜೆ,ಜ.15: ಮೂಗಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು, ಅನ್ಯ ಧರ್ಮದ ಯುವತಿಯನ್ನು ಮದುವೆಯಾಗಿರುವ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳಾ ಸಂಘಟನೆ ಹಾಗೂ ಆಶಾ ಕಾರ್ಯಕರ್ತೆಯರು ಕೊಣಾಜೆ ಠಾಣಾ ಮೆಟ್ಟಿಲೇರಿ ಮಹಿಳೆ ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

15 ವರ್ಷಗಳ ಹಿಂದೆ ಮೂಗಿ ಹಾಗೂ ಕಿವುಡಿಯಾಗಿರುವ ಹಫ್ಸಾ ಎಂಬಾಕೆಯನ್ನು ಬೋಳಿಯಾರ್ ಗ್ರಾಮದ ಆಸಿಫ್ ಎಂಬಾತ ವಿವಾಹವಾಗಿದ್ದ. ಇವರಿಗೆ ಹತ್ತನೇ ತರಗತಿಯಲ್ಲಿರುವ ಓರ್ವ ಪುತ್ರಿ ಹಾಗೂ ಆರನೇ ತರಗತಿಯಲ್ಲಿರುವ ಒಬ್ಬ ಪುತ್ರನಿದ್ದಾನೆ. 12 ವರ್ಷ ಪತ್ನಿಯ ಮನೆಯಲ್ಲೇ ವಾಸವಿದ್ದ ಆಸಿಫ್ ನಂತರ ಪತ್ನಿ, ಮಕ್ಕಳಿಂದ ಅಂತರ ಕಾಯ್ದುಕೊಂಡಿದ್ದ. ಇದರಿಂದಾಗಿ ಹಫ್ಸಾ ಹಾಗೂ ಇಬ್ಬರು ಮಕ್ಕಳ ಸಲಹುವ ಜವಾಬ್ದಾರಿ ಅಜ್ಜಿ ನಫಿಸಾ ಮೇಲೆ ಬಿದ್ದಿದ್ದು, ಬೀಡಿ ಕಟ್ಟುವ ಮೂಲಕ ಜೀವನ ಸಾಗಿಸಬೇಕಾಗಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಮಹಿಳೆಯ ತಾಯಿ ನಫಿಸಾ ಅವರು ಕೊಣಾಜೆ ಠಾಣೆಗೆ ನೀಡಿದ ದೂರಿನಂತೆ ರಾಜಿ ಪಂಚಾಯಿತಿ ನಡೆದು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಯನ್ನು ಪತ್ನಿ, ಮಕ್ಕಳ ಖರ್ಚಿಗೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ಆಸಿಫ್ ಪಾಲಿಸಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆ ಮೀನುಗಾರಿಕೆ ವೃತ್ತಿಗೆ ಹೋಗಿದ್ದ ಆತ ವರ್ಷದ ಹಿಂದೆ ಬಳ್ಳಾರಿಯ ಮಾರಾಡ್ ಎಂಬಲ್ಲಿ ಅದೇ ವೃತ್ತಿಯಲ್ಲಿದ್ದ ಅನ್ಯ ಧರ್ಮದ ಯುವತಿಯನ್ನು ಮದುವೆಯಾಗಿದ್ದು, ಒಂದು ಮಗುವಿದೆ. ಮಾರಾಡ್‍ನಿಂದ ಊರಿಗೆ ಬಂದರೂ  ಪತ್ನಿ, ಮಕ್ಕಳನ್ನು ನೋಡಲು ಬಂದಿರಲಿಲ್ಲ. ಆಸಿಫ್ ಹಫ್ಸಾಳನ್ನು ಮದುವೆಯಾಗುವ ಮೊದಲೇ ಒಂದು ಮದುವೆಯಾಗಿ ಪತ್ನಿ, ಮಗಳನ್ನು ತೊರೆದಿದ್ದ ಎನ್ನಲಾಗಿದೆ.

ಈ ಬಗ್ಗೆ ನಫೀಸಾ ಅವರು ಸ್ತ್ರೀಶಕ್ತಿ ಸಂಘದ ಸಭೆಯಲ್ಲಿ ದೂರು ನೀಡಿದ್ದರು. ಇದನ್ನು ಪರಿಗಣಿಸಿ ಸೋಮವಾರ ಸ್ತ್ರೀಶಕ್ತಿ ಹಾಗೂ ಆಶಾ ಕಾರ್ಯಕರ್ತೆಯರು ಕೊಣಾಜೆ ಠಾಣೆಗೆ ದೂರು ನೀಡಿ ಮಹಿಳೆ ಮತ್ತು ಮಕ್ಕಳಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿದ್ದಾರೆ.

ಬೀಡಿ ಕಟ್ಟಿ ಸಾಕುತ್ತಿದ್ದೇನೆ:

"ಅಳಿಯ ತನ್ನ ಮಗಳು, ಮೊಮ್ಮಕ್ಕಳನ್ನು ಕಡೆಗಣಿಸಿದ್ದರಿಂದ ಬೀಡಿ ಕಟ್ಟಿ ಅವರನ್ನು ಸಾಕುತ್ತಿದ್ದೇನೆ. ತಾನು ಜೀವಂತ ಇರುವವರೆಗೆ ಅವರನ್ನು ನೋಡಿಕೊಳ್ಳಬಹುದು, ನಂತರ ಅವರ ಗತಿಯೇನು" ಎಂದು ನಫೀಸಾ ಅಳಲು ತೋಡಿಕೊಂಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಪಾವೂರು ಗ್ರಾಪಂ ಮಾಜಿ ಸದಸ್ಯೆ ಪ್ರಮೀಳಾ, ಸ್ತ್ರೀಶಕ್ತಿ ಸಂಘಟನೆಯ ನೂರ್‍ಜಹಾನ್, ಮೈಮೂನ, ಹಲೀಮಮ್ಮ, ಬೇಬಿ, ಕಾಂಚನ, ಭವಾನಿ, ಚಂದ್ರಾವತಿ ಮೊದಲಾದವರು ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News