×
Ad

ದೀಪಕ್ ರಾವ್ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ

Update: 2018-01-15 21:09 IST

ಮಂಗಳೂರು, ಜ. 15: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಟಿಪಳ್ಳ 2ನೆ ಬ್ಲಾಕ್ ನಿವಾಸಿ ಅಬ್ದುಲ್ ಅಝೀಝ್ ಯಾನೆ ಅಝೀಝ್ (42) ಮತ್ತು ಮೂಲತಃ ಕಾಟಿಪಳ್ಳ 2ನೆ ಬ್ಲಾಕ್‌ನ ನಿವಾಸಿ ಪ್ರಸ್ತುತ ಕೃಷ್ಣಾಪುರ 6ನೆ ಬ್ಲಾಕ್‌ನಲ್ಲಿ ವಾಸವಾಗಿರುವ ಅಬ್ದುಲ್ ಅಝೀಮ್ ಯಾನೆ ಅಝೀಮ್ (34) ಬಂಧಿತ ಆರೋಪಿಗಳು.

ಪಣಂಬೂರು ಪೊಲೀಸ್ ಠಾಣಾ ನಿರೀಕ್ಷಕ ರಫೀಕ್ ಮತ್ತು ಸಿಬ್ಬಂದಿ ಹಾಗೂ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶಾಂತರಾಂ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಕಿನ್ನಿಗೋಳಿಯ ಮುಹಮ್ಮದ್ ನೌಷಾದ್ (22), ಕೃಷ್ಣಾಪುರ 4ನೆ ಬ್ಲಾಕ್‌ನ ಮುಹಮ್ಮದ್ ಇರ್ಷಾನ್ ಯಾನೆ ಇರ್ಶಾ (21) ಎಂಬವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಲ್ಲಿದ್ದಾರೆ. ಆರೋಪಿಗಳಾದ ಕೃಷ್ಣಾಪುರ 7ನೆ ಬ್ಲಾಕ್‌ನ ಮುಹಮ್ಮದ್ ನವಾಝ್ ಯಾನೆ ಪಿಂಕಿ ನವಾಝ್ (23), ಕೃಷ್ಣಾಪುರ 4ನೆ ಬ್ಲಾಕ್‌ನ ರಿಝ್ವಾನ್ ಯಾನೆ ಇಜ್ಜು ಯಾನೆ ರಿಜ್ಜು (24) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೀಪಕ್ ಹತ್ಯೆ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳು ಒಳಗೊಂಡಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.

ಜ.3ರಂದು ಮಧ್ಯಾಹ್ನ 1:15ಕ್ಕೆ ಕಾಟಿಪಳ್ಳ 2ನೆ ಬ್ಲಾಕ್‌ನ ಅಬ್ದುಲ್ ಮಜೀದ್ ಅವರ ಮೊಬೈಲ್ ಕರೆನ್ಸಿಯ ಹಣವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ದೀಪಕ್ ರಾವ್ (30)ರನ್ನು ಮಜೀದ್ ಅವರ ಮನೆಯ ಎದುರೇ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕು ಮಂದಿ ಏಕಾಏಕಿ ಕಾರಿನಿಂದ ದೀಪಕ್‌ರ ಬೈಕ್‌ನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ಗಂಭೀರ ಹಲ್ಲೆ ನಡೆಸಿದ್ದರು. ಬಳಿಕ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News