ಎಂಐಟಿ ಮಾರ್ಸ್‌ ರೋವರ್ಸ್‌ಗೆ ‘ಇಂಡಿಯನ್ ಚಾಲೆಂಜ್’

Update: 2018-01-15 16:07 GMT

ಮಣಿಪಾಲ, ಜ.15: ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಮಾರ್ಸ್‌ ಟೋವರ್ಸ್‌ ಮಣಿಪಾಲ ತಂಡ ತಮಿಳುನಾಡು ವೆಲ್ಲೂರಿನ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಚೊಚ್ಚಲ ‘ಇಂಡಿಯನ್ ರೋವರ್ಸ್‌ ಚಾಲೆಂಜ್’ನ್ನು ಗೆದ್ದುಕೊಂಡಿದೆ.

ವಿವಿಧ ವಿಭಾಗಗಳ 22 ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ಎಂಐಟಿ ತಂಡ, ಎರಡು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2016 ಮತ್ತು 2017ರ ಅಮೆರಿಕದ ಉಟಾಹದ ಮಾರ್ಸ್‌ ಡೆಸರ್ಟ್ ರಿಸರ್ಚ್ ಸ್ಟೇಶನ್‌ನಲ್ಲಿ ನಡೆದ ಯುನಿವರ್ಸಿಟಿ ರೋವರ್ ಚಾಲೆಂಚ್‌ನಲ್ಲಿ ಎಂಐಟಿ ಗಮನಾರ್ಹ ಸಾಧನೆ ಮಾಡಿತ್ತು.
2016ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಶ್ವದ 63 ತಂಡಗಳಲ್ಲಿ 13ನೇ ಹಾಗೂ 2017ರಲ್ಲಿ ಭಾಗವಹಿಸಿದ್ದ 82 ತಂಡಗಳಲ್ಲಿ 8ನೇ ಸ್ಥಾನವನ್ನು ಇದು ಪಡೆದಿತ್ತು. ತಂಡ ಸದ್ಯಕ್ಕೆ ಇದೇ ವರ್ಷದ ಜೂನ್ ತಿಂಗಳಲ್ಲಿ ಉಟಾಹದಲ್ಲಿ ನಡೆಯುವ ಯುನಿವರ್ಸಿಟಿ ರೋವರ್ ಚಾಲೆಂಜ್‌ಗೆ ಹೊಸ ರೋವರ್ ವಿನ್ಯಾಸದಲ್ಲಿ ನಿರತವಾಗಿದೆ.

ಎಂಐಟಿಯ ಇಎಂಡ್‌ಸಿ, ಇಎಂಡ್‌ಇ, ಮೆಕ್ಯಾನಿಕಲ್, ಕಂಪ್ಯೂಟರ್ ಸಾಯನ್ಸ್, ಮೆಕಟ್ರಾನಿಕ್ಸ್ ಹಾಗೂ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ಗಳು ಈ ಎಂಐಟಿ ರೋವರ್ ತಂಡದಲ್ಲಿದ್ದಾರೆ. ವೆಲ್ಲೂರಿನಲ್ಲಿ ನಡೆದ ಭಾರತದಲ್ಲಿ ಮೊದಲ ಇಂಡಿಯನ್ ರೋವರ್ ಚಾಲೆಂಜ್‌ನಲ್ಲಿ ಎಂಐಟಿ ಅಗ್ರಸ್ಥಾನದೊಂದಿಗೆ 40,000ರೂ. ನಗದು ಬಹುಮಾನವನ್ನೂ ಪಡೆದಿದೆ.

ಎಂಐಟಿ ತಂಡ ಗರಿಷ್ಠ 730 ಅಂಕಗಳಲ್ಲಿ 616 ಅಂಕಗಳನ್ನು ಸಂಗ್ರಹಿಸಿದ್ದು, ಎರಡನೇ ಸ್ಥಾನಿ ತಂಡಕ್ಕಿಂತ 129 ಅಂಕಗಳ ಮುನ್ನಡೆ ಪಡೆದಿತ್ತು. ಭಾರತ ಹಾಗೂ ಬಾಂಗ್ಲಾ ದೇಶದ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲೂ ಮಣಿಪಾಲದ ವಿದ್ಯಾರ್ಥಿಗಳು ಸ್ಪಷ್ಟ ಮೇಲುಗೈ ಪಡೆದಿದ್ದರು.
ಶಾಂತಂ ಶೋರ್‌ವಾಲ ತಂಡದ ನಾಯಕರಾಗಿದ್ದು, ಡಾ.ವೈ.ಶ್ರೀಹರಿ ಅವರು ಅಧ್ಯಾಪಕ ಸಲಹೆಗಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News