​ಕೆ.ನಾರಾಯಣಗೆ ಶಿವರಾಮ ಕಾರಂತ ಪುರಸ್ಕಾರ

Update: 2018-01-15 16:55 GMT

ಮೂಡುಬಿದಿರೆ, ಜ.15: ಖ್ಯಾತ ಚಿಂತನಾಶೀಲ ಲೇಖಕರಾಗಿದ್ದ ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಮೂಡುಬಿದಿರೆಯಲ್ಲಿ ಸ್ಥಾಪಿತವಾಗಿರುವ ಶಿವರಾಮ ಕಾರಂತ ಪ್ರತಿಷ್ಠಾನ ಕಳೆದ ಇಪ್ಪತ್ತು ವರ್ಷಗಳಿಂದ ಪ್ರಕಟವಾದ ಉತ್ತಮ ಕೃತಿಗೆ ಹತ್ತು ಸಾವಿರ ರೂ.ಗೌರವ ಸಂಭಾವನೆಯೊಂದಿಗೆ ನೀಡುತ್ತಾ ಬಂದಿರುವ ಶಿವರಾಮ ಕಾರಂತ ಪುರಸ್ಕಾರವನ್ನು ಈ ವರ್ಷ ಕಂನಾಡಿಗಾ ನಾರಾಯಣ ಅವರ ‘ದ್ವಾಪರ’ ಕೃತಿಗೆ ನೀಡಲಾಗಿದೆ.

ಕಂನಾಡಿಗಾ ನಾರಾಯಣ ಅವರು 1986ರಿಂದ ಬರವಣಿಗೆ ಆರಂಭಿಸಿ ಮಂಡಲ, ಕ್ಷುದ್ರ ನಕ್ಷತ್ರದ ಕಪ್ಪು ರಂಧ್ರ, ಹಸಿರು ಕಣ್ಣಿನ ಹುಡುಗಿ, ನರವಿಂಧ್ಯ, ತಲ್ಲಣದ ಆಕ್ಷಣ, ಜೀ ಗಾಂಧಿ, ಇಹದ ಪರಿಮಳ ಕಥಾ ಸಂಕಲನಗಳನ್ನು, ಆನೆ ಬಂತೊಂದಾನೆ, ಹುಲಿಯ ಹೆಜ್ಜೆ, ನವಿಲು ಗರಿ ಮಕ್ಕಳ ಪುಸ್ತಕಗಳನ್ನು, ಕಾಂಡ, ಆಕಾಶ, ಭೂಮಿ, ಕಾದಂಬರಿಗಳನ್ನು ಹಾಗೂ ಮನದ ಮೊನೆ ಎಂಬ ವಿಮರ್ಶಾ ಗ್ರಂಥವನ್ನು ಬರೆದಿದ್ದಾರೆ. ಅವರ ಮಹಾಭಾರತವನ್ನು ಆಧುನಿಕ ಮನಸ್ಸಿನಿಂದ ತಳಸ್ಪರ್ಶಿ ಅಧ್ಯಯನ ಮಾಡಿ ಬರೆದಿರುವ ದ್ವಾಪರ ಕೃತಿಗೆ ಕಾರಂತ ಪುರಸ್ಕಾರ ಲಭಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಫೆ.3ರಂದು ಎಂಸಿಎಸ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಮತ್ತು ಪ್ರದಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News