ಮುಳುಗಿರುವ ತೈಲ ಹಡಗು: 10 ಮೈಲಿ ವ್ಯಾಪ್ತಿಯಲ್ಲಿ ಮಾಲಿನ್ಯ

Update: 2018-01-15 17:32 GMT

ಟೋಕಿಯೊ/ಬೀಜಿಂಗ್, ಜ. 15: ಪೂರ್ವ ಚೀನಾ ಸಮುದ್ರದಲ್ಲಿ ರವಿವಾರ ಮುಳುಗಿರುವ ಇರಾನ್‌ನ ತೈಲ ಹಡಗಿನಿಂದ ಸೋರಿಕೆಯಾಗುತ್ತಿರುವ ತೈಲವು ಸುತ್ತಲಿನ 10 ಮೈಲಿ ವ್ಯಾಪ್ತಿಯಲ್ಲಿ ಮಾಲಿನ್ಯ ಉಂಟು ಮಾಡಿದೆ ಹಾಗೂ ಈ ಸ್ಥಳದಿಂದ ಕಪ್ಪು ಹೊಗೆಯು ಇನ್ನೂ ಹೊರಬರುತ್ತಿದೆ ಎಂದು ಜಪಾನ್ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಮಾಲಿನ್ಯವು 1ರಿಂದ 4 ನಾಟಿಕಲ್ ಮೈಲಿ ವೇಗದಲ್ಲಿ ಹರಡಿದೆ ಹಾಗೂ ರವಿವಾರದ ಬಳಿಕ ಅದು ಗಾತ್ರದಲ್ಲಿ ಹಲವು ಪಟ್ಟು ಹಿಗ್ಗಿದೆ ಎಂದು ಚೀನಾದ ಸರಕಾರಿ ಟಿವಿ ಸಿಸಿಟಿವಿ ಹೇಳಿದೆ.

ಮಾಲಿನ್ಯವು ಈ ಸಮುದ್ರ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುವ ಮೀನು ಮತ್ತು ಹಕ್ಕಿಗಳ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.

 ಸಮುದ್ರದ ಮೇಲ್ಪದರವನ್ನು ಶುದ್ಧ ಮಾಡುವ ಪ್ರಯತ್ನಗಳು ಆರಂಭಗೊಂಡಿವೆ ಹಾಗೂ ಅದೇ ವೇಳೆ, ತೈಲ ಹಡಗಿನ ಬದುಕುಳಿದಿರಬಹುದಾದ ಸಿಬ್ಬಂದಿಗಾಗಿ ನಡೆಸಲಾಗುತ್ತಿರುವ ಬೃಹತ್ ಪ್ರಮಾಣದ ಶೋಧ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ಸಿಸಿಟಿವಿ ತಿಳಿಸಿದೆ.

1.36 ಲಕ್ಷ ಟನ್, ಅಂದರೆ ಸುಮಾರು 10 ಲಕ್ಷ ಬ್ಯಾರಲ್ ಅತಿ ದಹನಶೀಲ ತೈಲವನ್ನು ಹೊತ್ತಿರುವ ಉರಿಯುತ್ತಿದ್ದ ಹಡಗು ರವಿವಾರ ಸಂಜೆ ಮುಳುಗಿದೆ. ಇದಕ್ಕೂ ಮುನ್ನ ಹಡಗಿನ ತಳದಿಂದ ಹಲವಾರು ಸ್ಫೋಟಗಳು ಕೇಳಿ ಬಂದಿದ್ದವು.

ಇರಾನ್‌ನಿಂದ ದಕ್ಷಿಣ ಕೊರಿಯಕ್ಕೆ ತೈಲ ಸಾಗಿಸುತ್ತಿದ್ದ ಹಡಗು ಹಾಂಕಾಂಗ್‌ನ ಸರಕು ಹಡಗೊಂದಕ್ಕೆ ಕಳೆದ ವಾರ ಢಿಕ್ಕಿ ಹೊಡೆದ ಬಳಿಕ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತೈಲ ಹಡಗಿನ 30 ಸಿಬ್ಬಂದಿ ಪೈಕಿ ಓರ್ವನ ಶವ ಈಗಾಗಲೇ ಪತ್ತೆಯಾಗಿದೆ. ಇತರ 29 ಮಂದಿ ಕೂಡ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News