×
Ad

ಲೈಟ್ ಮೀನುಗಾರಿಕಾ ಬೋಟುಗಳ ಜನರೇಟರ್ ತೆರವಿಗೆ ಗಡುವು: ಪಾರ್ಶ್ವನಾಥ್

Update: 2018-01-16 19:28 IST

ಮಲ್ಪೆ, ಜ.16: ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಕಳೆದ 10 ದಿನಗಳಿಂದ ಮುಷ್ಕರ ನಡೆಸುತ್ತಿರುವ ಮಲ್ಪೆ ಆಳ ಸಮುದ್ರ ಟ್ರಾಲ್ ಬೋಟು ಮೀನುಗಾರರ ಸಂಘದ ನೇತೃತ್ವದಲ್ಲಿ ನೂರಾರು ಮೀನುಗಾರರು, ಈವರೆಗೆ ಯಾವುದೇ ಕಾನೂನು ಕ್ರಮ ಜರಗಿಸದ ಮಲ್ಪೆ ಬಂದರಿನಲ್ಲಿರುವ ಮೀನುಗಾರಿಕೆ ಇಲಾಖೆಯ ಕಚೇರಿಗೆ ಇಂದು ಮತ್ತೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಉಡುಪಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್, ಅವೈಜ್ಞಾನಿಕ ಲೈಟ್ ಮೀನುಗಾರಿಕೆ ನಡೆಸುವ 49 ಬೋಟುಗಳಲ್ಲಿನ ಜನರೇಟ್‌ಗಳನ್ನು ತೆರವುಗೊಳಿಸಲು 10 ದಿನಗಳ ಗಡುವು ನೀಡಿ ಈಗಾಗಲೇ ನೋಟೀಸು ಜಾರಿ ಮಾಡಲಾಗಿದೆ. ಇದನ್ನು ತೆರವುಗೊಳಿಸದಿದ್ದರೆ ಆ ಬೋಟುಗಳ ವಿರುದ್ಧ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಧರಣಿ ನಿರತ ಮೀನುಗಾರರಿಗೆ ತಿಳಿಸಿದರು.

ಲೈಟ್ ಮೀನುಗಾರಿಕೆಗೆ ಜನರೇಟ್ ಬಳಸುವ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಪ್ರಥಮ ಹಂತದಲ್ಲಿ 49 ಬೋಟುಗಳಿಗೆ ನೋಟೀಸು ಜಾರಿ ಮಾಡಲಾಗಿದೆ. ಉಳಿದವರಿಗೆ ನೋಟೀಸ್ ಜಾರಿ ಮಾಡಲು ಬೇಕಾದ ಎಲ್ಲ ರೀತಿಯ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಜ.11ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಲೈಟ್ ಮೀನುಗಾರಿಕೆ ಮಾಡುವ ಬೋಟುಗಳನ್ನು ಸೀಜ್ ಮಾಡಿ ಮೀನುಗಾರಿಕೆ ಇಲಾಖೆ ಒಪ್ಪಿಸುವಂತೆ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಆದೇಶ ನೀಡಿದ್ದಾರೆ ಎಂದರು.

ಮೀನುಗಾರಿಕೆ ಇಲಾಖೆಯವರಿಗೆ ಸಮುದ್ರಕ್ಕೆ ಹೋಗಿ ಲೈಟ್ ಮೀನುಗಾರಿಕೆ ಮಾಡುವ ಬೋಟುಗಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಆ ಕೆಲಸವನ್ನು ಕರಾವಳಿ ಕಾವಲು ಪಡೆಯವರು ಮಾಡಬೇಕು. ಆದರೆ ಅವರು ಈವರೆಗೆ ಯಾವುದೇ ಬೋಟುಗಳನ್ನು ಸೀಜ್ ಮಾಡಿಲ್ಲ ಎಂದು ಉಪನಿರ್ದೇಶಕ ಪಾರ್ಶ್ವ ನಾಥ್ ಹೇಳಿದರು.
ನಾವು ನೀಡಿದ ಗಡುವಿನೊಳಗೆ ಜನರೇಟರ್ ತೆರವುಗೊಳಿಸದ ಬೋಟುಗಳಿಗೆ ಡಿಸೇಲ್ ನೀಡದಂತೆ ಮಲ್ಪೆ ಬಂದರಿನ ಪೆಟ್ರೋಲ್ ಬಂಕ್‌ಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೆ ಇಲಾಖೆಯ ನಿಯಮಗಳ ಪ್ರಕಾರ ಆ ಬೋಟು ಗಳಿಗೆ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ, ನಮಗೆ ಆ ಬೋಟುಗಳಿಗೆ ದಂಡ ವಿಧಿಸುವುದು ಮತ್ತು ಡಿಸೇಲ್ ನೀಡದಿರುವುದು ಮುಖ್ಯವಲ್ಲ. ಅದರಲ್ಲಿ ರುವ ಜನರೇಟರ್‌ಗಳು ಹಾಗೂ ಲೈಟ್‌ಗಳನ್ನು ತೆಗಿಸಬೇಕೆಂದು ಹೇಳಿದರು.

ಬಳಿಕ ಮೀನುಗಾರರ ನಿಯೋಗ ಮಲ್ಪೆ ಬಂದರಿನಲ್ಲಿರುವ ಕರಾವಳಿ ಕಾವಲು ಪಡೆಯ ಕಚೇರಿಗೆ ತೆರಳಿ ಡಿವೈಎಸ್ಪಿ ಜಯಶಂಕರ್ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವ ನಾಥ್ ಹಾಜರಿದ್ದರು. ಮೀನುಗಾರಿಕೆ ಇಲಾಖೆಯವರು ತೆಗೆದುಕೊಳ್ಳುವ ಯಾವುದೇ ಕಾನೂನು ಕ್ರಮಕ್ಕೆ ನಾವು ಸಂಪೂರ್ಣ ಭದ್ರತೆ ಒದಗಿಸುತ್ತೇವೆ ಎಂದು ಜಯಶಂಕರ್ ತಿಳಿಸಿದರು.

ಧರಣಿಯಲ್ಲಿ ಸಂಘದ ಕಾರ್ಯದರ್ಶಿ ಭುವನೇಶ್ ಕೋಟ್ಯಾನ್, ಮಲ್ಪೆ ಆಳ ಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಗೋಪಾಲ ಕುಂದರ್, ಕರುಣಾಕರ ಸಾಲ್ಯಾನ್, ಪಾಂಡುರಂಗ ಕರ್ಕೇರ, ಕಿಶೋರ್ ಪಡುಕೆರೆ, ವಿಠಲ ಕರ್ಕೇ, ರಾಮ ಅಮೀನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News