×
Ad

ಭಟ್ಕಳ: ನ್ಯೂ ಶಮ್ಸ್ ಸ್ಕೂಲ್‍ನಲ್ಲಿ ಲ್ಯಾಂಗ್ವೇಜ್ ಲ್ಯಾಬ್ ಉದ್ಘಾಟನೆ

Update: 2018-01-16 19:51 IST

ಭಟ್ಕಳ,ಜ.16: ವಿದ್ಯಾರ್ಥಿಗಳಿಗೆ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಮತ್ತು ಭಾಷೆಯನ್ನು ಸುಲಭದಲ್ಲಿ ಕಲಿಯುವಂತಾಗಲು ತಂತ್ರಜ್ಞಾನದ ಬಳಕೆ ಪೂರಕವಾಗಿದೆ ಎಂದು ಮುಂಬೈ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಮುಹಮ್ಮದ್ ಶಕೀಲ್ ಹೇಳಿದರು. 

ಅವರು ಮಂಗಳವಾರ ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಸೈಯದ್ ಅಲಿ ಕ್ಯಾಂಪಸ್ ನ ನ್ಯೂಶಮ್ಸ್ ಸ್ಕೂಲ್ ನ ಆಂಗ್ಲ ಭಾಷಾ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು. 

ತಂತ್ರಜ್ಞಾನದ ಸಮರ್ಪಕ ಬಳಕೆ ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿಯನ್ನು ಮೂಡಿಸುತ್ತದೆ. ನಮ್ಮ ಬಾಲ್ಯದಲ್ಲಿ ಇಂತಹ ಯಾವುದೇ ಸೌಲಭ್ಯಗಳು ಇದ್ದಿಲ್ಲ, ಆದರೂ ನಾನು ನಮ್ಮ ಗುರುಗಳ ಮುತುವರ್ಜಿ, ಮಾತಾಪಿತರ ಸೇವೆಯಿಂದ ನಮಗೆ ಶಿಕ್ಷಣ ಲಭಿಸುವಂತಾಯಿತು. ನಿಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿ ಎಂದು ಕರೆ ನೀಡಿದ ಅವರು ತಮ್ಮ ಶಾಲಾ ದಿನಗಳನ್ನು ನೆನಸಿಕೊಂಡರು. 

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸೈಯ್ಯದ್ ಹಸನ್ ಬರ್ಮಾವರ್, ಕಾದಿರ್ ಮೀರಾ ಪಟೇಲ್, ತಲ್ಹಾ ಸಿದ್ದಿಬಾಪ, ಸಲಾಹುದ್ದೀನ್ ಎಸ್.ಕೆ, ಸೈಯ್ಯದ್ ಅಶ್ರಫ್ ಬರ್ಮಾವರ್, ಹಳೆ ವಿದ್ಯಾರ್ಥಿ ಸಂಘದ ಅಬ್ದುಲ್ ಮುನೀಮ್ ರುಕ್ನುದ್ದೀನ್, ಅಬ್ದುಲ್ ಗನಿ ರುಕ್ನುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಂ.ಆರ್. ಮಾನ್ವಿ ವಂದಿಸಿದರು. ಅಬ್ದುಸ್ಸುಭಾನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News