ಪುತ್ತೂರು ಧರ್ಮಪ್ರಾಂತ್ಯದ ಪ್ರಥಮ ಬಿಷಪ್ ವಿಧಿವಶ
ಪುತ್ತೂರು, ಜ.16: ಮಲಂಕರ ಕ್ಯಾಥೋಲಿಕ್ ಚರ್ಚಿನ ಪುತ್ತೂರು ಧರ್ಮಪ್ರಾಂತ್ಯದ ಪ್ರಥಮ ಹಾಗೂ ಮಾಜಿ ಬಿಷಪ್ ಡಾ.ಗೀವರ್ಗೀಸ್ ಮಾರ್ ದಿವಾನ್ನಾಸಿಯೋಸ್(67) ಅವರು ಕೇರಳದ ತಿರುವಲ್ಲಾದ ಪುಷ್ಪಗಿರಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 2.45ರ ವೇಳೆಗೆ ಅನಾರೋಗ್ಯದಿಂದ ವಿಧಿವಶರಾದರು.
ಪುತ್ತೂರು ಧರ್ಮಪ್ರಾಂತ್ಯದ ಪ್ರಥಮ ಬಿಷಪ್ ಆಗಿದ್ದ ಅವರು, ಕಳೆದ ವರ್ಷ ಜನವರಿ 24ರಂದು ವಯೋಸಹಜ ಅನಾರೋಗ್ಯದ ನಿಮಿತ್ತ ನಿವೃತ್ತಿ ಪಡೆದು ಕೇರಳದ ತಿರುವಲ್ಲಾದ ಪಳ್ಳಿಮಲ ಆಶ್ರಮದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. 1950ರ ನವೆಂಬರ್ 1ರಂದು ಕೇರಳದ ತಲವಡಿ ಎಂಬಲ್ಲಿ ಹುಟ್ಟಿದ ಇವರು, ಕೇವಲ 6 ವರ್ಷ ವಯಸ್ಸಿರುವಾಗ ದಕ್ಷಿಣ ಕನ್ನಡದ ನೆಲ್ಯಾಡಿಗೆ ಸಮೀಪದ ಲಾವತ್ತಡ್ಕ ಎಂಬಲ್ಲಿ ತಮ್ಮ ಚಿಕ್ಕಪ್ಪನೊಂದಿಗೆ ಕೆಲಕಾಲ ವಾಸವಿದ್ದರು. ತದನಂತರ ಕುಟುಂಬವು ಇಲ್ಲಿಗೆ ಸಮೀಪದ ಇಚಿಲಂಪಾಡಿ ಎಂಬಲ್ಲಿ ನೆಲೆಸಿತು.
ಕಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ನೇಲಿಯಡ್ಕ ಶಾಲೆಯಲ್ಲಿ ಪಡೆದು, ಮುಂದೆ ಪ್ರೌಢಶಾಲೆಯವರೆಗೆ ದೂರದ ಅರಸಿನಮಕ್ಕಿ ಶಾಲೆಗೆ ನಡೆದುಕೊಂಡೇ ಹೋಗಿ ಓದಿದರು. ನಂತರ ಧಾರ್ಮಿಕ, ಸಮಾಜಸೇವೆಯಲ್ಲಿ ಉನ್ನತ ಮಟ್ಟಕ್ಕೇರಿದ್ದರಲ್ಲದೆ ಅಪಾರ ಸಾಹಿತ್ಯಾಸಕ್ತಿಯೂ ಹೊಂದಿದ್ದರು. ಕನ್ನಡ, ತುಳು, ಸೇರಿದಂತೆ ಹಲವು ಭಾಷೆಗಳನ್ನು ಬಲ್ಲವರಾಗಿದ್ದು, ಮಲಯಾಳಂನಲ್ಲಿ ಒಂದು ಕಥಾ ಸಂಕಲನವನ್ನು ಬರೆದು ಪ್ರಕಟಿಸಿದ್ದಾರೆ.
1978ರ ಎಪ್ರಿಲ್ 20ರಂದು ಗುರುದೀಕ್ಷೆ ಹೊಂದಿದ ನಂತರ ಕೇರಳದ ನಿಲಂಬೂರ್ ಎಂಬಲ್ಲಿ ಸೇವೆ ಸಲ್ಲಿಸಿ 1980ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ರೋಮ್‌ಗೆ ತೆರಳಿದರು. 7 ವರ್ಷಗಳ ನಂತರ ದೇವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಎರಡು ಬಾರಿ ಬತ್ತೇರಿ ಧರ್ಮಪ್ರಾಂತ್ಯದ ಧಮಾಧ್ಯಕ್ಷರಾಗಿ, ಧಾರ್ಮಿಕ ವಿಶ್ವವಿದ್ಯಾಲಯದ ಮೇಜರ್ ರೆಕ್ಟರ್ ಆಗಿ, ಕರ್ದಿನಾಲ್ ಮಾರ್ ಬಸೇಲಿಯೋಸ್ ಕ್ಲೀಮಿಸ್ ಕ್ಯಾಥೋಲಿಕ್ ಬಾವಾ ಅವರನ್ನು ಮಲಂಕರ ಕ್ಯಾಥೋಲಿಕ್ ಚರ್ಚಿನ ಭಾರತೀಯ ಧರ್ಮಾಧ್ಯಕ್ಷರಾಗಿ ಆಯ್ಕೆ ಮಾಡಿದ ಸುನ್ನಹದೋಸ್ ಅಧ್ಯಕ್ಷತೆಯನ್ನು ಗೀವರ್ಗೀಸ್ ಮಾರ್ ದಿವಾನ್ನಾಸಿಯೋಸ್ ಅವರೇ ವಹಿಸಿದ್ದರು.
ಅಂತ್ಯಕ್ರಿಯೆಯು, ಗುರುವಾರ ಮಧ್ಯಾಹ್ನ ಕೇರಳದ ತಿರುವಲ್ಲಾದಲ್ಲಿ ಸೈಂಟ್ ಜಾನ್ಸ್ ಮೆಟ್ರೋಪಾಲಿಟನ್ ಕಥೀಡ್ರಲ್‌ನಲ್ಲಿ ನಡೆಯಲಿದೆ. ಇಲ್ಲಿ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶವಿರುತ್ತದೆ.