ವಚನಕಾರ ಶಿವಯೋಗಿ ಶ್ರೀಸಿದ್ಧರಾಮ ಜಯಂತಿ

Update: 2018-01-16 15:11 GMT

ಉಡುಪಿ, ಜ.16: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶಿವಯೋಗಿ ಶ್ರೀಸಿದ್ಧ ರಾಮ ಜಯಂತಿಯನ್ನು ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ನಳಂದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, 12ನೆ ಶತಮಾನದಲ್ಲಿಯೇ ಕೆರೆಗಳನ್ನು ಕಟ್ಟಿ ಅಭಿವೃದ್ಧಿಯ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿವಯೋಗಿ ಶ್ರೀಸಿದ್ಧ ರಾಮ ಕರ್ಮಯೋಗಿ ಎನಿಸಿಕೊಂಡರು. ಇಂಥ ಶ್ರೇಷ್ಠ ವಚನಕಾರರ ಜೀವನ ಚರಿತ್ರೆಗಳು ನಮಗೆ ವಾದರಿಯಾಗಬೇಕು ಎಂದು ಹೇಳಿದರು.

ಅವರು ಕೇವಲ ಅಭಿವೃದ್ಧಿಯ ಕೆಲಸಗಳನ್ನು ಮಾತ್ರ ಮಾಡಿದ್ದಲ್ಲದೆ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮೂಡಿಸಲು ಶ್ರಮಿಸಿದರು. ಅವರ ಜೀವನ ಸಾಧನೆ, ಕಾಯಕ, ಅಭಿವೃದ್ಧಿ ಕೆಲಸಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ನಮ್ಮ ವ್ಯಕ್ತಿತ್ವವ್ನು ರೂಪಿಸಿಕೊಳ್ಳ ಬೇಕು ಎಂದರು.
ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ರಾಜೇಂದ್ರ ಎಸ್.ನಾಯಕ್ ಶಿವಯೋಗಿ ಶ್ರೀಸಿದ್ದರಾಮರ ಕುರಿತು ಉಪನ್ಯಾಸ ನೀಡಿ, ಸಂವಿಧಾನದ ಆಶಯದಂತೆ, ಸಮಾನತೆಯ ಬದುಕನ್ನು ನಮಗೆ ವಚನ ಕಾರರು 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ವಚನ ಚಳವಳಿ ಗಳಿಂದ ನಮ್ಮ ಸಾಮಾಜಿಕ ಬದುಕು ಅಂದಿನಿಂದಲೇ ಸುಧಾರಣೆಯತ್ತ ಸಾಗುತ್ತ ಬರುತ್ತಿದೆ ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ನಗರಸಭೆ ಸದಸ್ಯೆ ಗೀತಾ ಶೇಟ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ದೇವದಾಸ ಪೈ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ನಿರ್ಮಲ ಬಿ. ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ವಿದೂಷಿ ಎಸ್.ಎಂ.ಮೀನಾಕ್ಷಿ ಅವರಿಂದ ವಚನಗಾಯನ ಕಾರ್ಯ ಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News