19ರಂದು ಪುರಭವನ ಹುಡುಕಿಕೊಡಿ ಅಹೋರಾತ್ರಿ ಧರಣಿ

Update: 2018-01-16 15:28 GMT

ಉಡುಪಿ, ಜ.16: ನಾಲ್ಕು ವರ್ಷಗಳ ಹಿಂದೆ ಗುದ್ದಲಿ ಪೂಜೆ ನಡೆಸಿರುವ ಪುರಭವನದ ಕಾಮಗಾರಿಯನ್ನು ಆರಂಭಿಸದಿರುವುದನ್ನು ವಿರೋಧಿಸಿ ಕಾರ್ಕಳ ಬಿಜೆಪಿ ವತಿಯಿಂದ ಪುರಭವನ ಹುಡುಕಿಕೊಡಿ ಅಹೋರಾತ್ರಿ 24ಗಂಟೆಗಳ ಧರಣಿ ಸತ್ಯಾಗ್ರಹವನ್ನು ಜ.19ರಂದು ಬಂಡಿಮಠ ಸಮೀಪ ಹಮ್ಮಿಕೊಳ್ಳಲಾಗಿದೆ.

2014ರ ಜ.19ರಂದು ಕಾರ್ಕಳ ಬಂಡಿಮಠ ಬಳಿ ಆಗಿನ ಕೇಂದ್ರ ಸಚಿವ ವೀರಪ್ಪ ಮೊಲಿ ಎರಡು ಕೋಟಿ ರೂ. ವೆಚ್ಚದ ಪುರಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಅದರ ಕಾಮಗಾರಿ ಇನ್ನು ಆರಂಭಿಸಿಲ್ಲ. ಅದೇ ರೀತಿ ಮಿಯ್ಯೆರು ಕಂಬಳದ ಗ್ಯಾಲರಿ ನಿರ್ಮಾಣ ಕಾಮಗಾರಿಗಳು ಪ್ರಾರಂಭ ಗೊಂಡಿಲ್ಲ ಎಂದು ಕಾರ್ಕಳ ಶಾಸಕ, ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಬೆಳಗ್ಗೆ ಕಾರ್ಕಳ ಮಾರಿಗುಡಿಯಿಂದ ಮೆರವಣಿಗೆ ನಡೆಸಿ ಬೆಳಗ್ಗೆ 11ಗಂಟೆಗೆ ಸತ್ಯಾಗ್ರಹವನ್ನು ಆರಂಭಿಸಲಾಗುವುದು. ಅಹೋರಾತ್ರಿ ಧರಣಿಯು ಮರುದಿನ ಬೆಳಗ್ಗೆ 10ಗಂಟೆಯವರೆಗೆ ನಡೆಯಲಿದೆ ಎಂದು ಅವರು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News