ಜಲ್ಲಿಕಟ್ಟು ಜಯಿಸಿದವರಿಗೆ ಈ ವೃದ್ಧ ಘೋಷಿಸಿದ ಬಹುಮಾನವೇನು ಗೊತ್ತಾ?

Update: 2018-01-16 16:00 GMT

   ಚೆನ್ನೈ, ಜ. 16: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮತ್ತೆ ವಿವಾದಕ್ಕೆ ಗುರಿಯಾಗಿದೆ. ಜಲ್ಲಿಕಟ್ಟಿನಲ್ಲಿ ವಿಜೇತರಾದವರಿಗೆ ಬಹುಮಾನದ ಒಂದು ಭಾಗವಾಗಿ 21 ವರ್ಷದ ಯುವತಿಯನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಜಲ್ಲಿಕಟ್ಟು ಉದ್ಘೋಷಕ ಪ್ರಕಟಿಸಿದ ಇತ್ತೀಚೆಗಿನ ವೀಡಿಯೊ ದೃಶ್ಯ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಗೂಳಿ ಹಿಡಿದು ವಿಜಯಿಯಾದವರಿಗೆ ಗೂಳಿ ತರುವ ಯುವತಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಉದ್ಘೋಷಕ 70 ವರ್ಷದ ಪಳನಿಸಾಮಿ ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ ಎಂದು ನ್ಯೂಸ್ ವೆಬ್‌ಸೈಟ್ ‘ದಿ ನ್ಯೂಸ್ ಮಿನಿಟ್’ ಹೇಳಿದೆ.

 ‘‘ಮುಂದಿನ ರವಿವಾರ ಪೆರಿಯಾ ಅನೈಕಾರೈಪಟ್ಟಿಯಲ್ಲಿ ಮೆಗಾ ಜಲ್ಲಿಕಟ್ಟು ನಡೆಯಲಿದೆ. ಮೆಟ್ಟುಪಟ್ಟಿಯ 21ರ ಹರೆಯದ ಅವಿವಾಹಿತೆ ಯುವತಿ ಗೂಳಿ ತರಲಿದ್ದಾರೆ. ಆ ಗೂಳಿಯನ್ನು ಹಿಡಿದವರಿಗೆ ಗೂಳಿ ಹಾಗೂ ಯುವತಿ ಉಚಿತವಾಗಿ ನೀಡಲಾಗುವುದು’’ ಎಂದು ಪಳನಿಸ್ವಾಮಿ ವೀಡಿಯೊದಲ್ಲಿ ಹೇಳಿರುವುದು ದಾಖಲಾಗಿದೆ.

ಆದಾಗ್ಯೂ, ವೃದ್ಧನ ಘೋಷಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಜಲ್ಲಿಕಟ್ಟಿನಲ್ಲಿ ವಿಜಯಿಯಾದವರಿಗೆ ಯುವತಿಯನ್ನು ಬಹುಮಾನವಾಗಿ ನೀಡುವುದಾಗಿ ನಾವು ಹೇಳಿಲ್ಲ ಎಂದು ಜಲ್ಲಿಕಟ್ಟಿನ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News