ಕಳವುಗೈದು ಮೊಬೈಲ್ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ : ನ್ಯಾಯಾಂಗ ಬಂಧನದಲ್ಲಿದ್ದ ಪ್ರಮುಖ ಆರೋಪಿಗೆ ಜಾಮೀನು

Update: 2018-01-16 18:24 GMT

ಪುತ್ತೂರು,ಜ.16: ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ  ಮೊಬೈಲ್ ಅಂಗಡಿಯಲ್ಲಿ ಕಳವು ನಡೆಸಿ ಬಳಿಕ ಅಂಗಡಿಗೆ ಬೆಂಕಿ ಹಚ್ಚಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಪೆರ್ವ ನಿವಾಸಿ ಉಮರ್ ಫಾರೂಕ್(24)ಗೆ ಮಂಗಳೂರಿನ 4ನೇ ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿರುವ ಕಳಿಯ ಗ್ರಾಮದ ಗೋವಿಂದೂರು ಮನೆಯ ಮಹಮ್ಮದ್ ಶಮೀರ್ ಎಂಬವರ ಮಾಲಕತ್ವದ ಓರೆಂಜ್ ಮೊಬೈಲ್ ಕೇರ್ ಅಂಗಡಿಗೆ 2017ರ ನವೆಂಬರ್ 7ರಂದು ನುಗ್ಗಿದ್ದ ಕಳ್ಳರು ಅಂಗಡಿಯ ಶಟರ್ ಮುರಿದು ವಿವಿಧ ಕಂಪೆನಿಯ 27 ಮೊಬೈಲ್ ಫೋನ್ ಸೆಟ್‍ಗಳನ್ನು ಕಳವು ಮಾಡಿ ಬಳಿಕ ಅಂಗಡಿಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಅಂಗಡಿಯಲ್ಲಿದ್ದ ಪೀಠೋಪಕರಣಗಳು, ಮೊಬೈಲ್ ಫೋನ್ ಸೆಟ್‍ಗಳು, ಮೊಬೈಲ್ ಬಿಡಿಭಾಗಗಳು, ಕಂಪ್ಯೂಟರ್ ಸಿಸ್ಟಮ್,ಲ್ಯಾಪ್‍ಟಾಪ್ ಕಂಪ್ಯೂಟರ್, ರಿಪೇರಿಗಾಗಿ ಇಡಲಾಗಿದ್ದ ವಿವಿಧ ಕಂಪೆನಿಯ ಮೊಬೈಲ್ ಫೋನ್‍ಗಳು, ಅಂಗಡಿಯ  ಸಲಕರಣೆಗಳು ಮತ್ತು ಮೊಬೈಲ್ ಅಂಗಡಿಗೆ ಸಂಬಂಧಸಿದ ದಾಖಲೆ ಪತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಸುಟ್ಟು ಹೋದ ಸೊತ್ತುಗಳ ಒಟ್ಟು ಮೌಲ್ಯ ಐದು ಲಕ್ಷ ರೂ ಎಂದು ಅಂದಾಜಿಸಲಾಗಿತ್ತು. 

ಇದೇ ಮೊಬೈಲ್ ಅಂಗಡಿಯ ಪಕ್ಕದಲ್ಲಿರುವ ಶ್ರೀಗುರು ಚಿಕನ್ ಸೆಂಟರ್‍ಗೂ ನುಗ್ಗಿದ್ದ ಕಳ್ಳರು ಸೊತ್ತುಗಳನ್ನು ಹಾನಿಗೊಳಿಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರ ತಂಡವು ಬಂಟ್ವಾಳ ತಾಲೂಕಿನ ಸಜಿಪಮೂಡ ಪೆರ್ವದ ಉಮರ್ ಫಾರೂಕ್(24ವ), ಇರಾ ಗ್ರಾಮದ ತಾಳಿಪಡ್ಪು ನಿವಾಸಿ ಫಾರೂಕ್(24ವ) ಮತ್ತು ಸಜಿಪಮುನ್ನೂರು ಗ್ರಾಮದ ಸಲಫಿ ಮಸೀದಿ ಬಳಿಯ ನಂದಾವರ ಕೋಟೆ ಮನೆಯ ಉಬೈದುಲ್ಲಾ ಯಾನೆ ಉಬೈ(24ವ) ಎಂಬವರನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 

ನ್ಯಾಯಾಂಗ ಬಂಧನಕ್ಕೋಳಗಾದ ಮೂವರ ಪೈಕಿ ಫಾರೂಕ್ ಮತ್ತು ಉಬೈದುಲ್ಲಾನಿಗೆ ಕೆಲವು ದಿನಗಳ ಹಿಂದೆ ಜಾಮೀನು ಮಂಜೂರಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ವಿವಿದೆಡೆಯ ಪೊಲೀಸ್ ಠಾಣೆಗಳಲ್ಲಿ 13 ಕ್ರಿಮಿನಲ್ ಕೇಸ್‍ಗಳ ಆರೋಪಿಯಾಗಿರುವ ಉಮರ್ ಫಾರೂಕ್‍ಗೆ ಮಂಗಳೂರಿನ 4ನೇ ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಪ್ರಸಾದ್ ಕುಮಾರ್ ರೈ ಉಪ್ಪಿನಂಗಡಿ, ಸುರಕ್ಷಿತ್ ರೈ ಸಿ.ಎಚ್ ಮತ್ತು ಶ್ರೀಹರಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News