×
Ad

ಉಡುಪಿ ಪರ್ಯಾಯ: ಜ.18ರಂದು ಶ್ರೀಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರ

Update: 2018-01-17 19:33 IST

ಉಡುಪಿ, ಜ. 17: ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕ ಶ್ರೀ ಮಧ್ವಾಚಾರ್ಯರು ಸುಮಾರು 750 ವರ್ಷಗಳ ಹಿಂದೆ (1285ರಲ್ಲಿ) ಉಡುಪಿಯಲ್ಲಿ ಸ್ಥಾಪಿಸಿದ ಶ್ರೀಕೃಷ್ಣನ ಪೂಜೆಯ ಅಧಿಕಾರ ಹಸ್ತಾಂತರದ ಮತ್ತೊಂದು ಅಧ್ಯಾಯ ಜ. 18ರಂದು ಮುಂಜಾನೆ ಹಕ್ಕಿಗಳು ಚಿಲಿಪಿಲಿಗುಟ್ಟುವ ಹೊತ್ತು 6:35ಕ್ಕೆ ಸರಿಯಾಗಿ ನಡೆಯಲಿದೆ. ಇದೇ ಪರ್ಯಾಯ ಮಹೋತ್ಸವ.

ಈ ಬಾರಿ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಮ್ಮ ದಾಖಲೆಯ ಐದನೇ ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಸಂತೃಪ್ತಿಯೊಂದಿಗೆ ತಮ್ಮ ಎರಡನೇ ಪರ್ಯಾಯಕ್ಕೆ ಸಜ್ಜಾಗಿ ಬಂದಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಮಠದ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಪರ್ಯಾಯ ಎಂಬುದು ಮಧ್ವಾಚಾರ್ಯರು ಆರಂಭಿಸಿದ ಅಷ್ಟಮಠಗಳ ಆಡಳಿತಕ್ಕೆ ಸಂಬಂಧ ಪಟ್ಟ ವ್ಯವಸ್ಥೆ. ಆರಂಭದಲ್ಲಿ ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ವ್ಯವಸ್ಥೆಯನ್ನು ಎರಡು ವರ್ಷಗಳಿಗೆ ನಡೆಯುವಂತೆ ಮಾಡಿದವರು ಸೋದೆ ಮಠದ ಶ್ರೀವಾದಿರಾಜ ಗುರುಗಳು. ಇದು ಪ್ರಾರಂಭಗೊಂಡಿದ್ದು 1522ರಲ್ಲಿ ಅಂದರೆ ಇಂದಿಗೆ ಸರಿಯಾಗಿ 496 ವರ್ಷಗಳ ಹಿಂದೆ.

ಇದರೊಂದಿಗೆ ಶ್ರೀಕೃಷ್ಣ ಮಠದ ಪರ್ಯಾಯ ಪೂಜಾ ಸರಣಿಯಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಎರಡು ವರ್ಷಗಳ ಅವಧಿ ಇಂದಿಗೆ ಮುಗಿದು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರ ದ್ವೈವಾರ್ಷಿಕ ಅವಧಿ ಪ್ರಾರಂಭಗೊಳ್ಳುತ್ತದೆ. ಇದು ಉಡುಪಿ ಸಾಕ್ಷಿಯಾಗು ತ್ತಿರುವ 249ನೇ ದ್ವೈವಾರ್ಷಿಕ ಪರ್ಯಾಯ ಮಹೋತ್ಸವ. ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ, ಕರಾವಳಿ ಜಿಲ್ಲೆಗಳ ನಾಡಹಬ್ಬವೆಂದೇ ಕರೆಯ ಲಾಗುವ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಉತ್ಸವಕ್ಕೆ ಉಡುಪಿ ಮತ್ತೊಮ್ಮೆ ಸಜ್ಜಾಗಿದೆ.

ಶ್ರೀಕೃಷ್ಣ ಮಠದ 750 ವರ್ಷಗಳ ಇತಿಹಾಸದಲ್ಲೇ ಮೊದಲನೇಯವರಾಗಿ ತಮ್ಮ ಐದನೇ ಪರ್ಯಾಯಾವಧಿಯನ್ನು ಯಶಸ್ವಿಯಾಗಿ ಮುಗಿಸಿರುವ ಪೇಜಾವರಶ್ರೀಗಳು ಮುಂಜಾನೆ ಶ್ರೀಕೃಷ್ಣನ ಪೂಜೆಯ ಅಧಿಕಾರ ಹಸ್ತಾಂತರದ ದ್ಯೋತಕವಾದ ಅಕ್ಷಯ ಪಾತ್ರೆ, ಸಟುಗ ಹಾಗೂ ಮಠದ ಕೀಲಿಕೈಯನ್ನು ಪಲಿಮಾರು ಶ್ರೀಗಳಿಗೆ ಹಸ್ತಾಂತರಿಸಲಿದ್ದಾರೆ. 6:35ಕ್ಕೆ ಸರಿಯಾಗಿ ಪಲಿಮಾರು ಶ್ರೀಗಳು ತಮ್ಮ 62ರ ಹರೆಯದಲ್ಲಿ ಎರಡನೇ ಬಾರಿ ಮಧ್ವ (ಸರ್ವಜ್ಞ) ಪೀಠಾರೋಹಣ ಮಾಡುವರು. ಇದರೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಪಲಿಮಾರು ಶ್ರೀಗಳೇ ಶ್ರೀಕೃಷ್ಣನ ಪೂಜೆಗೆ ಅಧಿಕೃತ ಅಧಿಕಾರ ಪಡೆದಂತಾಗುತ್ತದೆ.

ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತಿದ್ದ ಪೇಜಾವರ ಶ್ರೀಗಳ ಪರ್ಯಾಯದ ಸಮಾರೋಪ ಬುಧವಾರ ರಾತ್ರಿ ರಥಬೀದಿಯಲ್ಲಿ ಅವರಿಗೆ ಪಲಿಮಾರು ಮಠದ ಪರ್ಯಾಯ ಸಮಿತಿ ವತಿಯಿಂದ ಅಭಿನಂದಿಸುವ ಮೂಲಕ ಮುಕ್ತಾಯಗೊಂಡಿದೆ. ಪೇಜಾವರ ಶ್ರೀಗಳ ಕಳೆದೆರಡು ವರ್ಷಗಳ ಪರ್ಯಾಯಾವಧಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಗಾಗ ಎದುರಿಸಿದರೂ ಶ್ರೀಕೃಷ್ಣ ಪೂಜಾ ಕೈಕಂರ್ಯವನ್ನು ತಮ್ಮ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರ ಮೂಲಕ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಅಲ್ಲದೇ ಪೇಜಾವರಶ್ರೀಗಳ ಕಳೆದೆರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಕೆಲವಾರು ವಿವಾದಗಳು ಹುಟ್ಟಿಕೊಂಡರೂ, ತಮ್ಮ ಅಪಾರ ಅನುಭವದ ಮೂಲಕ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ತಾವು ಹಾಕಿಕೊಂಡ ಯೋಜನೆಗಳೆಲ್ಲವೂ ಪೂರ್ಣಗೊಂಡಿದ್ದು, ಬೇರೆ ಕೆಲವು ಯೋಜನೆಗಳು ಬಾಕಿ ಇದ್ದು, ಅದನ್ನು ಮುಂದೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ತಮ್ಮ ಐದನೇ ಪರ್ಯಾಯದಲ್ಲಿ ಸುಮಾರು 10 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯ ಡೆಸಿರುವುದಾಗಿ ಅವರು ಹೇಳಿದ್ದಾರೆ.

ಪರ್ಯಾಯ ಪೀಠವೇರಿದ ಶ್ರೀವಿದ್ಯಾಧೀಶ ತೀರ್ಥ ಶ್ರೀ 2002-04ರಲ್ಲಿ ಮೊದಲ ಬಾರಿ ಪರ್ಯಾಯವನ್ನು ಏರಿದ್ದು, ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಚಿಣ್ಣರ ಸಂತರ್ಪಣೆಯಂಥ ಉಪಯುಕ್ತ ಯೋಜನೆ ಪ್ರಾರಂಭಿಸಿದ್ದು, ಅದು ಈಗಲೂ ಮುಂದುವರಿದು ಕೊಂಡು ಬಂದಿದೆ. ಈ ಬಾರಿ ಅದನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ಶ್ರೀಗಳು ಹಾಕಿಕೊಂಡಿದ್ದಾರೆ.

ಅದೇ ರೀತಿ ಕಳೆದ ಬಾರಿ ಶ್ರೀಕೃಷ್ಣನಿಗೆ ವಜ್ರಕವಚ ತೊಡಿಸಿದ ಪಲಿಮಾರು ಶ್ರೀಗಳು ಈ ಬಾರಿ ಶ್ರೀಕೃಷ್ಣನ ಗರ್ಭಗುಡಿಯ ಮೇಲ್ಚಾವಣಿಗೆ ಚಿನ್ನದ ಹೊದಿಕೆ (ಸುಮಾರು 100ಕೆ.ಜಿ.ಚಿನ್ನದಿಂದ), ಚಿಣ್ಣರ ಸಂತರ್ಪಣೆ ಇನ್ನಷ್ಟು ಶಾಲೆಗಳಿಗೆ ವಿಸ್ತರಣೆ,ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ಚಿಣ್ಣರ ಮಾಸ, ಪ್ರತಿದಿನ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ, ನಿರಂತರ ಭಜನೆಯಂಥ ಸಂಕಲ್ಪಗಳನ್ನು ಮಾಡಿದ್ದಾರೆ.

ಬಿಗುಭದ್ರತೆ: ಪರ್ಯಾಯದ ಸಂಭ್ರಮಕ್ಕಾಗಿ ಉಡುಪಿ ನಗರ ಸಂಪೂರ್ಣ ಸಜ್ಜಾಗಿ ನಿಂತಿದೆ. ನಗರದ ಪ್ರತಿಯೊಂದು ಕಟ್ಟಡಗಳು ರಂಗುರಂಗಿನ ಬಣ್ಣ ತಳೆದು ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಮದುಮಗಳಂತೆ ಸಿಂಗರಿಸಿಕೊಂಡಿದೆ. ಪರ್ಯಾಯ ಶಾಂತಿಯುತವಾಗಿ ನಡೆಯಲು ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.

ಆಸುಪಾಸಿನ ಐದು ಜಿಲ್ಲೆಗಳಿಂದ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಸರಗಳ್ಳರು, ಜೇಬುಗಳ್ಳರು ಹಾಗೂ ಕಿಡಿಗೇಡಿಗಳ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಗರದಲ್ಲಿ ಗಸ್ತು ತಿರುಗುತಿದ್ದಾರೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು, ಪ್ರವಾಸಿಗರು ಈ ಬಾರಿಯ ಪರ್ಯಾಯವನ್ನು ವೀಕ್ಷಿಸುವ ನಿರೀಕ್ಷೆಯನ್ನು ಪರ್ಯಾಯ ಸ್ವಾಗತ ಸಮಿತಿ ವ್ಯಕ್ತಪಡಿಸಿದೆ.

32ನೆ ಪರ್ಯಾಯ ಚಕ್ರದ ಆರಂಭ

ಉಡುಪಿಯ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು (1238-1317) 1285ರ ಮಕರ ಸಂಕ್ರಮಣ ದಿನದಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಮಧ್ವಾಚಾರ್ಯರೇ ಎಂಟು ಮಂದಿ ಶಿಷ್ಯರಿಗೆ ಎಂಟು ಮಠಗಳನ್ನು ನೀಡಿ ಅವರ ಮೂಲಕ ಶ್ರೀಕೃಷ್ಣನಿಗೆ ಎರಡೆರಡು ತಿಂಗಳ ಅವಧಿಯ ಸರದಿ ಪೂಜೆಯ ಅವಕಾಶ ಕಲ್ಪಸಿದ್ದರೆಂದು ಹೇಳಲಾಗುತ್ತಿದೆ.

ಆದರೆ ಸೋದೆ ಮಠಾಧೀಶರಾದ ಶ್ರೀವಾದಿರಾಜ ಗುರುಗಳು (1480-1600) ತಮ್ಮ ಕಾಲಾವಧಿಯಲ್ಲಿ ಎರಡು ತಿಂಗಳ ಪರ್ಯಾಯ ಅವಧಿಯನ್ನು ಎರಡು ವರ್ಷಗಳಿಗೆ ಬದಲಿಸಿದರು. ಅವರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಪದ್ಧತಿ 1522-24ರಿಂದ ಇದುವರೆಗೆ ಚಾಚೂ ತಪ್ಪದೇ ನಡೆದುಕೊಂಡು ಬಂದಿದೆ. ಅಂದು ವಾದಿರಾಜ ಗುರುಗಳು ಹಾಕಿಕೊಟ್ಟ ಕ್ರಮದಲ್ಲೇ ಅವು ಮುಂದುವರಿಯುತ್ತಿದೆ. ಪ್ರತಿ 16 ವರ್ಷಗಳಿಗೆ ಅಷ್ಟಮಠಗಳ ಪರ್ಯಾಯದ ಒಂದೊಂದು ಚಕ್ರ ಪೂರ್ಣಗೊಳ್ಳುತ್ತಿದೆ.

ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಮಧ್ವ ಶಿಷ್ಯರ ಆಶ್ರಮ ಜ್ಯೇಷ್ಠತೆ ಯಂತೆ ಪಲಿಮಾರು ಮಠದೊಂದಿಗೆ 1522ರಲ್ಲಿ ಪ್ರಾರಂಭಗೊಂಡು ಅದರ ಬಳಿಕ ಅನುಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಹಾಗೂ ಕೊನೆಯಲ್ಲಿ ಪೇಜಾವರ ಮಠದೊಂದಿಗೆ ಪರ್ಯಾಯದ ಒಂದು ಚಕ್ರ ಮುಗಿಯುತ್ತದೆ. ಇವುಗಳಲ್ಲಿ ಎರಡೆರಡು ಮಠಗಳು ದ್ವಂದ್ವಮಠಗಳಾಗಿ ಪರಿಗಣಿಸಲ್ಪಡುತ್ತವೆ. ಪಲಿಮಾರು-ಅದಮಾರು, ಕೃಷ್ಣಾಪುರ-ಪುತ್ತಿಗೆ, ಶೀರೂರು-ಸೋದೆ ಹಾಗೂ ಕಾಣಿಯೂರು-ಪೇಜಾವರ ಮಠಗಳು ದ್ವಂದ್ವ ಮಠಗಳಾಗಿವೆ.

ಹೀಗೆ ಸಾಗಿಬಂದ ಪರ್ಯಾಯ 2018ರಲ್ಲಿ ತನ್ನ 31ನೇ ಚಕ್ರವನ್ನು ಪೂರ್ಣಗೊಳಿಸಿದೆ. 2016-2018ರಲ್ಲಿ ಪೇಜಾವರ ಮಠದ ಪರ್ಯಾಯ ದವರೆಗೆ ಎಲ್ಲಾ ಮಠಗಳು ಸರದಿಯಂತೆ 31 ಪರ್ಯಾಯಗಳನ್ನು ಪೂರ್ಣ ಗೊಳಿಸಿವೆ. 2018 ಜ.18ರಿಂದ 32ನೇ ಪರ್ಯಾಯ ಚಕ್ರ ಪ್ರಾರಂಭ ಗೊಂಡಿದೆ.

1522ರಿಂದ ಪ್ರಾರಂಭಗೊಂಡು ಇಂದಿನವರೆಗೆ 496 ವರ್ಷಗಳು ಕಳೆದಿದ್ದು 248 ಪರ್ಯಾಯಗಳು ಮುಕ್ತಾಯಗೊಂಡಿವೆ. ಇಂದು ಪಲಿಮಾರು ಶ್ರೀಗಳು ಆರಂಭಿಸಿರುವ ತನ್ನ ದ್ವಿತೀಯ ಪರ್ಯಾಯ ಒಟ್ಟಾರೆಯಾಗಿ 249ನೇ ಪರ್ಯಾಯವಾಗಿದೆ. 2020ರಲ್ಲಿ ಪರ್ಯಾಯ ಪೀಠವೇರುವ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀ 250ನೇ ಪರ್ಯಾಯ ನಡೆಸುವ ಸುಯೋಗ ಹೊಂದಿದ್ದಾರೆ.

ಪಲಿಮಾರು ಮಠದ ಯತಿ ಪರಂಪರೆ

ಆಚಾರ್ಯ ಮಧ್ವರು 800 ವರ್ಷಗಳ ಹಿಂದೆ ಸ್ಥಾಪಿಸಿದ ಎಂಟು ಮಠಗಳ ಪೈಕಿ ಪಲಿಮಾರು ಮಠದ 30ನೇ ಯತಿಗಳು ಇಂದು ಸರ್ವಜ್ಞ ಪೀಠಲೇರಿದ ಶ್ರೀವಿದ್ಯಾಧೀಶ ತೀರ್ಥ ಶ್ರೀ. ಮಧ್ವರ ಶಿಷ್ಯರಲ್ಲಿ ಆಶ್ರಮ ಜ್ಯೇಷ್ಠತೆಯಲ್ಲಿ ಮೊದಲಿಗರಾದ ಶ್ರೀಹೃಷಿಕೇಶತೀರ್ಥರು (1250-1330) ಶ್ರೀಮಠದ ಮೊದಲ ಯತಿಗಳು.

ಪಲಿಮಾರು ಮಠದ ಮೂಲ ಮಠ ಪಡುಬಿದ್ರಿ ಸಮೀಪದ ಪಲಿಮಾರಿನಲ್ಲಿ ಶಾಂಭವಿ ನದಿಯ ತಟದಲ್ಲಿದೆ. ಈ ಮಠದ ಮೂಲ ದೇವರು ಸೀತಾ, ಲಕ್ಷ್ಮಣ ರೊಂದಿಗಿರುವ ಕೋದಂಡ ರಾಮ. ಈ ಪರಂಪರೆಯಲ್ಲಿ ಶ್ರೇಷ್ಠ ಯತಿಗಳೆಂದು ಎಲ್ಲರಿಂದ ಮಾನ್ಯತೆ ಪಡೆದ 29ನೇ ಯತಿಗಳಾದ ಶ್ರೀವಿದ್ಯಾಮಾನ್ಯ ತೀರ್ಥರು ಇವರ ಗುರುಗಳು.

ಪರಿಚಯ: ಗುರುವಾರ ಎರಡನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪೂರ್ವಾಶ್ರಮದ ಹೆಸರು ರಮೇಶ ತಂತ್ರಿ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪದ ಶಿಬರೂರಿನಲ್ಲಿ ಹಯಗ್ರೀವ ತಂತ್ರಿ ಹಾಗೂ ಕಸ್ತೂರಿ ದಂಪತಿಗಳ ಮಗನಾಗಿ ಜನಿಸಿ, ಕಡಂದಲೆ ಹಿರಿಯ ಪ್ರಾಥಮಿಕ ಶಾಲೆ, ಕಟೀಲು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಹಾಗೂ ಉಡುಪಿಯ ಸಂಸ್ಕೃತ ಮಹಾಪಾಠ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ. 1979ರ ಜೂ.10ರಂದು ಸನ್ಯಾಸದೀಕ್ಷೆ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News