×
Ad

ಇರಾನ್ ತೈಲ ಹಡಗು ಮುಳುಗಡೆ: 109 ಚ.ಕಿ.ಮೀ. ವ್ಯಾಪ್ತಿಯಲ್ಲಿ ತೈಲ ಸೋರಿಕೆ

Update: 2018-01-17 19:43 IST

ಬೀಜಿಂಗ್, ಜ. 17: ಪೂರ್ವ ಚೀನಾ ಸಮುದ್ರದಲ್ಲಿ ಮುಳುಗಿರುವ ಇರಾನ್ ತೈಲ ಹಡಗಿನಿಂದ ಸೋರಿಕೆಯಾಗಿರುವ ತೈಲ 109 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದೆ ಎಂದು ಚೀನಾ ಸರಕಾರ ಮಂಗಳವಾರ ತಿಳಿಸಿದೆ.

ಎರಡು ಪ್ರತ್ಯೇಕ ಸ್ಥಳಗಳಲ್ಲಿ ತೈಲ ಸೋರಿಕೆಯಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಒಂದು ಸ್ಥಳದಲ್ಲಿ ಸೋರಿಕೆಯಾಗಿರುವ ತೈಲ 69 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿದರೆ, ಇನ್ನೊಂದು ಸ್ಥಳದಲ್ಲಿ ಸೋರಿಕೆಯಾಗಿರುವ ತೈಲ 40 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹಬ್ಬಿದೆ ಎಂದು ಚೀನಾದ ಸರಕಾರಿ ಸಾಗರ ಆಡಳಿತ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತೈಲ ಟ್ಯಾಂಕರ್ ‘ಸಾಂಚಿ’ ರವಿವಾರ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸಾಗರ ಪರಿಸರ ವ್ಯವಸ್ಥೆಯ ಮೇಲೆ ಅದು ಬೀರಬಹುದಾದ ಪರಿಣಾಮದ ಬಗ್ಗೆ ವಿಜ್ಞಾನಿಗಳು ಚಿಂತಿತರಾಗಿದ್ದಾರೆ.

ಕಳೆದ ವಾರ ಹಾಂಕಾಂಗ್‌ನ ಸರಕು ಹಡಗೊಂದಕ್ಕೆ ಢಿಕ್ಕಿ ಹೊಡೆದ ಬಳಿಕ ತೈಲ ಹಡಗಿಗೆ ಬೆಂಕಿ ಹೊತ್ತಿಕೊಂಡಿತ್ತು.

ತೈಲ ಟ್ಯಾಂಕರ್‌ನಿಂದ ಇಬ್ಬರು ನಾವಿಕರ ಶವಗಳನ್ನು ಹೊರದೆಗೆಯಲಾಗಿದೆ. ಇನ್ನೊಂದು ಶವ ಹಡಗಿನ ಸಮೀಪದ ಸಮುದ್ರದಲ್ಲಿ ಪತ್ತೆಯಾಗಿದೆ. ಉಳಿದ 29 ಸಿಬ್ಬಂದಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಹಡಗಿನ ಅವಶೇಷವು ಸಮುದ್ರ ಮಟ್ಟದಿಂದ 115 ಮೀಟರ್ ಆಳದಲ್ಲಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಬುಧವಾರ ಬಿಡುಗಡೆಗೊಂಡ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News