×
Ad

ಸಾಹಿತಿ-ಕಲಾವಿದರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ

Update: 2018-01-17 20:02 IST

ಮಂಗಳೂರು, ಜ.17: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಸಾಹಿತಿ ಕಲಾವಿದರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅಕಾಡಮಿಯ ಸಿರಿಚಾವಡಿಯಲ್ಲಿ ಚಾಲನೆ ನೀಡಲಾಯಿತು.

ಸರಣಿಯ ಪ್ರಥಮ ಕಾರ್ಯಕ್ರಮದಲ್ಲಿ ಯಕ್ಷಗಾನ ದಿಗ್ಗಜ ಅಳಿಕೆ ರಾಮಯ್ಯ ರೈ ಸಂಸ್ಮರಣೆ ಮಾಡಲಾಯಿತು. ಪ್ರಾಧ್ಯಾಪಕ, ತುಳು ಸಾಹಿತ್ಯ ಅಕಾಡಮಿ ಹಾಗೂ ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ ಮೆರೆದ ಅಳಿಕೆ ರಾಮಯ್ಯ ರೈ ತನ್ನ 11ನೆ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದರು. ತುಳುನಾಡಿನ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದವರು. 64 ವರ್ಷಗಳ ಯಕ್ಷಸೇವೆಯಲ್ಲಿ 3 ತಲೆಮಾರುಗಳ ಕಲಾವಿದರು ಹಾಗೂ ಮೇಳಗಳ ಯಜಮಾನರುಗಳ ಜತೆಯಲ್ಲಿ ದುಡಿದರು. ತನ್ನ ಅಮೋಘ ಪಾತ್ರಗಳ ಮೂಲಕ ಪೌರಾಣಿಕ ಪಾತ್ರಗಳಿಗೆ ಜೀವಂತಿಕೆ ತಂದು ಕೊಟ್ಟವರು ಎಂದು ಭಾಸ್ಕರ್‌ರೈ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡಮಿಯ ಅಧ್ಯಕ್ಷ ಎ.ಸಿ ಭಂಡಾರಿ ತುಳು ಭಾಷಾ ಬೆಳವಣಿಗೆಗೆ ಯಕ್ಷಗಾನ ಮತ್ತು ತುಳು ರಂಗಭೂಮಿಯವರು ವಿಶೇಷ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಯಕ್ಷಗಾನ - ನಾಟಕ ಕ್ಷೇತ್ರದ ಹಿರಿಯರನ್ನು ಅಕಾಡಮಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಶಿಲೇಖಾ ಬಿ. ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳೆ ಮತ್ತು ಯಕ್ಷಗಾನ ವಿಷಯದ ಬಗ್ಗೆ ಹೊಸದಿಲ್ಲಿಯ ಯಕ್ಷ ಮಂಜೂಷದ ನಿರ್ದೇಶಕಿ ವಿದ್ಯಾ ಕೋಳ್ಯೂರು ವಿಚಾರ ಮಂಡಿಸಿದರು.

ಅಳಿಕೆ ರಾಮಯ್ಯ ರೈಯ ಪುತ್ರ, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮೆನೇಜರ್ ಬಾಲಕೃಷ್ಣ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸದಸ್ಯರಿಂದ ಡಾ.ದಿನಕರ ಎಸ್. ಪಚ್ಚನಾಡಿ ನಿರ್ದೇಶನದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ತಾಳಮದ್ದಳೆ ಕೂಟ ನಡೆಯಿತು.

ಕಾರ್ಯಕ್ರಮದ ಸಂಚಾಲಕ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿದರು. ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಸ್ತಾವನೆಗೈದರು. ಸದಸ್ಯ ಗೋಪಾಲ್ ಅಂಚನ್ ವಂದಿಸಿದರು.ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News