ಹಲ್ಲೆ ಪ್ರಕರಣ: ಅಪರಾಧಿಗಳಿಗೆ ಶಿಕ್ಷೆ
ಮಂಗಳೂರು, ಜ. 17: ಉಳ್ಳಾಲದ ಅಲೇಕಳದಲ್ಲಿ 2014ರ ಜೂನ್ 17ರಂದು ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇತ್ತಂಡದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಲೇಕಳದ ಝಾಕಿರ್ ಹುಸೈನ್ (50 ), ವಿ.ಎಚ್. ಉಮರ್ ಫಾರೂಕ್(49 ), ಮುಹಮ್ಮದ್ ಶಾಹಿದ್ (35), ಫೈಝಲ್ ಯಾನೆ ಮುಹಮ್ಮದ್ ಫೈಝಲ್ (29), ಫಾರೂಕ್ (38), ನಝೀರ್ (38), ಇಕ್ಬಾಲ್ (38), ಶಫೀಕ್ ಫಕ್ರುದ್ದೀನ್ (30), ರಝಾಕ್ ಸನಾ (40) ಶಿಕ್ಷೆಗೊಳಗಾದ ಅಪರಾಧಿಗಳು.
2014 ಜೂನ್ 17 ರಂದು ನಡೆದುಕೊಂಡು ಹೋಗುತ್ತಿದ್ದ ಅಲೇಕಳದ ಜಾಕೀರ್ ಹುಸೈನ್ ಮತ್ತು ಉಮರ್ ಫಾರೂಕ್ ಎಂಬವರನ್ನು ಆರೋಪಿಗಳಾದ ಮಹಮ್ಮದ್ ಶಾಹಿದ್, ಫೈಝಲ್, ಫಾರೂಕ್, ನಝೀರ್, ಇಕ್ಬಾಲ್, ಶಫೀಕ್ ಫಕ್ರುದ್ದೀನ್, ರಝಾಕ್ ಸನಾ ಅವರು ತಡೆದು ನಿಲ್ಲಿಸಿ ನಿಂದಿಸಿ, ಬಳಿಕ ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಮತ್ತು ಕಬ್ಬಿಣದ ಪಂಚ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಮಹಮ್ಮದ್ ಶಾಹಿದ್ ಮತ್ತು ಇತರರು ಅಲೇಕಳ ಮದನಿ ಜೂನಿಯರ್ ಕಾಲೇಜು ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ಝಾಕಿರ್ ಹುಸೈನ್ ಮತ್ತು ಉಮರ್ ಫಾರೂಕ್ ತಡೆದು ನಿಲ್ಲಿಸಿ ನಿಂದಿಸಿ, ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ದೂರು ದಾಖಲಾಗಿತ್ತು.
ಸಬ್ ಇನ್ಸ್‌ಪೆಕ್ಟರ್ ರಮೇಶ್ ಎಚ್. ಹಾನಾಪುರ ಮತ್ತು ಭಾರತಿ ಜೆ. ಅವರು ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಕೆ.ಎಸ್. ಬೀಳಗಿ ಅವರು ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಿ, ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಗಳಾದ ಮುಹಮ್ಮದ್ ಶಾಹಿದ್, ಫೈಝಲ್ , ಶಫೀಕ್ ಫಕ್ರುದ್ದೀನ್ ಮತ್ತು ರಝಾಕ್ ಸನಾ ಅವರಿಗೆ ತಲಾ 1000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 10 ದಿನಗಳ ಸೆರೆಮನೆ ವಾಸ, ಆರೋಪಿಗಳಾದ ಫಾರೂಕ್ ಮತ್ತು ಇಕ್ಬಾಲ್ ಅವರಿಗೆ ಎರಡು ವರ್ಷ ಕಠಿನ ಕಾರಾಗೃಹ ವಾಸ ಮತ್ತು ತಲಾ 10,000 ರೂ. ದಂಡ ಹಾಗೂ ಆರೋಪಿ ನಝೀರ್‌ನಿಗೆ 20,000 ರೂ. ದಂಡ ಮತ್ತು ದಂಡ ತೆರಲು ತಪ್ಪಿದರೆ 60 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಅಡ್ಯಂತಾಯ ಅವರು ವಾದಿಸಿದ್ದರು. ಪ್ರತಿ ದೂರು ಪ್ರಕರಣದಲ್ಲಿ ಆರೋಪಿಗಳಾದ ಝಾಕಿರ್ ಹುಸೈನ್ ಮತ್ತು ಉಮರ್ ಫಾರೂಕ್ ಅವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಇಬ್ಬರಿಗೂ ತಲಾ 6000 ರೂ. ದಂಡ ಮತುತಿ ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದರೆ 40 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ಅವರು ವಾದಿಸಿದ್ದರು.