ಕೌಶಲ್ಯ ಆಧಾರಿತ ಶಿಕ್ಷಣ ಇಂದಿನ ಅಗತ್ಯ: ಪ್ರೊ.ಅನಿಲ್ ಸಹಸ್ರಬುದ್ಧೆ

Update: 2018-01-17 17:19 GMT

ಮಣಿಪಾಲ, ಜ.17: ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಕೈಗಾರಿಕೆಗೆ ಬೇಕಾದ ಉದ್ಯೋಗ ಸಾಮರ್ಥ್ಯ ಇಲ್ಲವಾಗಿದೆ. ಆದುದರಿಂದ ಕೌಶಲ್ಯ ಆಧಾರಿತ ಶಿಕ್ಷಣ ಇಂದಿನ ಅಗತ್ಯ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದ್ಧೆ ಹೇಳಿದ್ದಾರೆ.

ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್ಟಿಟ್ಯೂಟ್(ಟ್ಯಾಪ್ಮಿ) ಹಾಗೂ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಜಂಟಿ ಆಶ್ರಯದಲ್ಲಿ ಬುಧವಾರ ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಗೋಲ್ಡನ್ ಜ್ಯುಬಿಲಿ ಹಾಲ್ ನಲ್ಲಿ ಆಯೋಜಿಸಲಾದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು 35ನೆ ಟಿ.ಎ.ಪೈ ಸ್ಮಾರಕ ಉಪನ್ಯಾಸ ನೀಡಿ ಮಾತನಾಡುತಿದ್ದರು.

ಭಾರತದಲ್ಲಿ ಇಂದು ಶೇ.52ರಷ್ಟು 25ವರ್ಷದೊಳಗಿನವರಿದ್ದರೆ, ಶೇ.65ರಷ್ಟು 18ರಿಂದ 69ವರ್ಷ ವಯಸ್ಸಿನವರಿದ್ದಾರೆ. ಆದರೆ ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಶೇ.25. ಅದೇ ಅಭಿವೃದ್ಧಿಶೀಲ ದೇಶದಲ್ಲಿ ಶೇ.35, ಅಭಿವೃದ್ಧಿ ಹೊಂದಿದ ದೇಶದಲ್ಲಿ ಶೇ.50 ಹಾಗೂ ಮುಂದುವರೆದ ದೇಶದಲ್ಲಿ ಶೇ.60ರಷ್ಟು ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಪ್ರಸ್ತುತ ಒಟ್ಟು 3.57ಕೋಟಿ ಮಂದಿ ಉನ್ನತ ಶಿಕ್ಷಣ ಪಡೆಯು ತ್ತಿದ್ದಾರೆ. ಅಭಿವೃದ್ಧಿ ಶೀಲಗಳಂತೆ ಶೇ.35ರಷ್ಟು ಮಂದಿ ಉನ್ನತ ಶಿಕ್ಷಣ ಪಡೆ ಯುವಂತಾಗಲು ಇನ್ನು 1.5ಕೋಟಿ ಮಂದಿ ಉನ್ನತ ಶಿಕ್ಷಣ ಪಡೆಯ ಬೇಕಾಗಿದೆ. ಇದು ನಮ್ಮ ಮುಂದೆ ಇರುವ ಸವಾಲು. ಪರಿಶ್ರಮ ಪಟ್ಟರೆ ನಮಗೆ ಆ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕೌಶಲ್ಯ ಕೂಡ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬ್ರಿಟಿಷರು ಆಳ್ವಿಕೆ ನಡೆಸಿರುವ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳ ಬಹುತೇಕ ಕಾಲೇಜುಗಳಲ್ಲಿ ಇಂದಿಗೂ ಸ್ವಾಯತ್ತತೆ ಎಂಬು ದಿಲ್ಲ. ಸ್ವಾಯತ್ತತೆ ಇದ್ದರೆ ಮಾತ್ರ ಉತ್ತರದಾಯಿತ್ವ ಬರಲು ಸಾಧ್ಯ. ಆದರೆ ನಮ್ಮನ್ನು ಆಳಿದ ಇಂಗ್ಲೆಂಡ್ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಯತ್ತತೆ ಎಂಬುದು ಇದೆ ಎಂದು ಅವರು ತಿಳಿಸಿದರು.

ನಾವು ಮಕ್ಕಳಿಗೆ ಕೈಗಾರಿಕೆಗೆ ಬೇಕಾದ ಕೌಶಲ್ಯವನ್ನು ಕೊಡುತ್ತಿಲ್ಲ. ಅವರಿಗೆ ಬರೆಯುವ, ಮಾತನಾಡುವ, ಓದುವ ಹಾಗೂ ಕೇಳುವ ಜ್ಞಾನವನ್ನು ನೀಡ ಬೇಕಾಗಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮಧ್ಯೆ ಸಂಪರ್ಕ ಎಂಬುದು ಅತಿ ಅಗತ್ಯ. ಪ್ರತಿ ಐದು ವರ್ಷಗಳಿಗೊಮ್ಮೆ ತಂತ್ರಜ್ಞಾನ ಬದಲಾಗುತ್ತಿರುವುದ ರಿಂದ ವಿದ್ಯಾರ್ಥಿಗಳು ಸ್ವಯಂ ಅಧ್ಯಯನಕ್ಕೆ ಒಳಪಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಟ್ಯಾಪ್ಮಿಯ ಹಿರಿಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಮಾಹೆಯ ಪ್ರೊಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್, ಟ್ಯಾಪ್ಮಿಯ ನಿರ್ದೇಶಕ ಪ್ರೊ.ಮಧು ವೀರರಾಘವನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News