ಜ. 20: ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ 'ಫ್ರೀಡಂ ಪಾರ್ಕ್ ಚಲೋ'
ಬಂಟ್ವಾಳ, ಜ. 17: ಅವೈಜ್ಞಾನಿಕ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಜ. 20ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನಲ್ಲಿ "ಫ್ರೀಡಂ ಪಾರ್ಕ್ ಚಲೋ" ಒಂದು ದಿನದ ಉಪವಾಸ ಧರಣಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ತುಂಬೆ ಹೇಳಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಧರಣಿಗೆ ಬಂಟ್ವಾಳ ತಾಲೂಕಿನಿಂದ 160 ಮಂದಿ ಹಾಗೂ ಜಿಲ್ಲೆಯಿಂದ ಸುಮಾರು 600 ಮಂದಿ ಸರಕಾರಿ ನೌಕರರು ಭಾಗವಹಿಸುವರು. ಅಲ್ಲದೆ ಈ ಹೋರಾಟಕ್ಕೆ ಸರಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಘಟಕಗಳು ಕೂಡಾ ಬೆಂಬಲವನ್ನು ಘೋಷಿಸಿದೆ ಎಂದು ಹೇಳಿದರು.
ಎನ್‌ಸಿಪಿ ಸರಕಾರಿ ನೌಕರರ ವೇತನದಲ್ಲಿ ಶೇ.10ರಷ್ಟು ಕಡಿತಗೊಳಿಸಿ ಖಾಸಗಿ ಶೇರು ಮಾರುಕಟ್ಟೆಯಲ್ಲಿ ಹೂಡಲಾಗುತ್ತಿದೆ. ಇದರಿಂದಾಗಿ ನೌಕರರಲ್ಲಿ ಅಭದ್ರತೆ ಹಾಗೂ ಅನಿಶ್ಚಿತತೆ ಉಂಟಾಗಿದೆ. ಇದರಿಂದ ರಾಜ್ಯದಲ್ಲಿ 1.80 ಲಕ್ಷ ಸರಕಾರಿ ನೌಕರರು ಸೇವಾ ನಿವೃತ್ತಿಯ ಸಂದರ್ಭ ಪಿಂಚಣಿ ಮತ್ತು ಇತರ ಸವಲತ್ತುಗಳಿಂದ ವಂಚಿತರಾಗಿ ಸಾಮಾನ್ಯ ಅನ್ಯಾಯಕ್ಕೆ ತುತ್ತಾಗಲಿದ್ದಾರೆ ಎಂದರು.
ಅವೈಜ್ಞಾನಿಕ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಪೂರ್ವಭಾವಿಯಾಗಿ ಜ. 18ರಂದು ಜಿಲ್ಲೆಯ ಎಲ್ಲ ತಾಲೂಕು ಕಚೇರಿ ಮುಂಭಾಗದಲ್ಲಿ ಸರಕಾರಿ ನೌಕರರು ಪ್ರತಿಭಟನೆಯನ್ನು ನಡೆಸುವ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಸಲಹೆಗಾರರಾದ ಉಮಾನಾಥ ರೈ ಮೇರಾವು, ಶಿವಪ್ರಸಾದ್ ಶೆಟ್ಟಿ, ರಮೇಶ್ ನಾಯಕ್ ರಾಯಿ, ಜಯರಾಮ್, ಜೋಯಲ್ ಲೋಬೊ, ಕಾರ್ಯದರ್ಶಿ ಗುರುಮೂರ್ತಿ ಬಿ. ಹಾಗೂ ಪದಾಧಿಕಾರಿಗಳಾದ ಅವಿನಾಶ್, ಬಸಯ್ಯ ಆಲಮಟ್ಟಿ, ಬಸವರಾಜ್, ನವೀನ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.