ಪಕ್ಷಬೇಧವಿಲ್ಲದೆ ರಾಜಕೀಯದಲ್ಲಿ ಮಾರ್ಗದರ್ಶನ: ಪೇಜಾವರ ಶ್ರೀ

Update: 2018-01-17 17:44 GMT

ಉಡುಪಿ, ಜ.17: ರಾಜಕೀಯದಿಂದ ಮಠಾಧಿಪತಿಗಳು ದೂರವಿರಬೇಕು ಎಂದು ನಂಬಿರುವ ನಾನು, ಅಗತ್ಯಬಿದ್ದಾಗ ಪಕ್ಷಬೇಧವಿಲ್ಲದೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾರ್ಗದರ್ಶನ ನೀಡುತ್ತೇನೆ. ಅದು ಅಧಿಕಾರಕ್ಕಾಗಿ ಅಲ್ಲ. ಧರ್ಮ ಹಾಗೂ ಪರಿಸರ ಸಂರಕ್ಷಣೆಯಂಥ ವಿಷಯಗಳಲ್ಲಿ ಎಂದು ಬುಧವಾರ ರಾತ್ರಿ ಪರ್ಯಾಯ ಪೀಠದಿಂದ ಇಳಿಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದ ಸುಮಾರು 800 ವರ್ಷಗಳ ಇತಿಹಾಸದಲ್ಲಿ ಐದನೇ ಬಾರಿಗೆ ಪೀಠಾರೋಹಣ ಮಾಡಿ ಎರಡು ವರ್ಷಗಳ ಕಾಲ ಅದನ್ನು ಯಶಸ್ವಿಯಾಗಿ ನಿಭಾಯಿಸಿ ಗುರುವಾರ ಮುಂಜಾನೆ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಗೆ ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ಹಸ್ತಾಂತರಿಸುವ ಪೂರ್ವದಲ್ಲಿ ಇಂದು ರಾತ್ರಿ ಉಡುಪಿಯ ಪೌರರು ಹಾಗೂ ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ನಡೆದ ಪೌರ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಶುಭಾಶಂಸನೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆಡಿದ ಮಾತೊಂದಕ್ಕೆ ಉತ್ತರಿಸಿದ ಅವರು, ಮಠಾಧಿಪತಿಯಾಗಿ ನಾನೆಂದೂ ಅಧಿಕಾರದ ರಾಜಕೀಯ ಬಯಸಿಲ್ಲ. ಪಕ್ಷಾತೀತವಾಗಿ ರಾಜಕೀಯ ಮಾರ್ಗದರ್ಶನವನ್ನು ಮಾತ್ರ ನೀಡಿದ್ದೇನೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ನಾನು ರಾಜ್ಯದಿಂದ ಹೊರಗೇ ಇರುತ್ತೇನೆ ಎಂದು ಲಘುದಾಟಿಯಲ್ಲಿ ನುಡಿದರು.

ಎಡ-ಬಲದಿಂದ ಆರೋಪ: ಆದರೆ ನನ್ನ ಮಾತು, ನಡೆಗಳನ್ನು ವಿವಾದ ಮಾಡಲಾಗುತ್ತಿದೆ. ಉಡುಪಿಯ ಧರ್ಮ ಸಂಸದ್‌ನಲ್ಲಿ ನಾನು ಸದಾಶಯದೊಂದಿಗೆ ಬಹುಸಂಖ್ಯಾತರಿಗೂ, ಅಲ್ಪಸಂಖ್ಯಾತರ ಎಲ್ಲಾ ಸೌಲಭ್ಯ ನೀಡಲು ಸಂವಿಧಾನದ ತಿದ್ದುಪಡಿ ಮಾಡಬೇಕೆಂದು ಹೇಳಿದ ಮಾತು, ನಾನು ಸಂವಿಧಾನವನ್ನೇ ಬದಲಾಯಿಸಲು ಕರೆ ನೀಡಿದೆ ಎಂದು ಹೇಳಿ ವಿವಾದ ಮಾಡಲಾಯಿತು.

ಅದೇ ರೀತಿ ಇಪ್ತಾರ್ ಕೂಟವನ್ನು ಆಯೋಜಿಸಿದಾಗ ಅದನ್ನು ಸಹ ದೊಡ್ಡ ವಿವಾದದ ರೂಪದಲ್ಲಿ ಬೆಳೆಸಲಾಯಿತು. ಹೀಗೆ ಎಡ-ಬಲ ಎರಡು ಕಡೆಗಳಿಂದಲೂ ಆರೋಪ ಬಂದಾಗ ನಾನು ವಿಚಲಿತನಾಗದೇ ನಾನು ನಂಬಿದ ಮಾರ್ಗದಲ್ಲಿ ಮುಂದುವರಿಯುತಿದ್ದೇನೆ. ಜನರ ಸಹಕಾರ ಹಾಗೂ ಭಗವಂತನ ಕೃಪೆಯಿಂದ ಎರಡು ವರ್ಷಗಳ ಪರ್ಯಾಯವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ಇದಕ್ಕೆ ಮುಖ್ಯಕಾರಣರು ಕಿರಿಯ ಯತಿಗಳು ಎಂದರು.

ನಾನು ಈವರೆಗೆ ಮಾಡಿರುವುದಕ್ಕೆ ಸಂತೋಷವಿದ್ದರೂ, ತೃಪ್ತಿ ಇಲ್ಲ. ಮಾಡಬೇಕಾದ ಕಾರ್ಯ ತುಂಬಾ ಇದೆ. ಅದನ್ನು ಪಲಿಮಾರು ಶ್ರೀಗಳು ಮುಂದುವರಿ ಸುತ್ತಾರೆ ಎಂಬ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಜೀವನದಲ್ಲಿ ಶಕ್ತಿ ಹಾಗೂ ಆರೋಗ್ಯ ಇರುವವರೆಗೆ ಶಾಸ್ತ್ರ ಸಂರಕ್ಷಣೆ, ಶೈಕ್ಷಣಿಕ ಸೇವೆ, ವೈದ್ಯಕೀಯ ಸೇವೆಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದರು.

ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರನ್ನು ಹಿರಿಯ ಶ್ರೀಗಳೊಂದಿಗೆ ಸನ್ಮಾನಿಸಲಾಯಿತು. ಭಾವಿ ಪರ್ಯಾಯ ಮಠಾಧೀಶ ರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೇಜಾವರ ಶ್ರೀಗಳು ತೋರಿಸಿಕೊಟ್ಟ ಮಾರ್ಗದಲ್ಲಿ ಮುಂದುವರಿಯುತ್ತೇವೆ. ಅವರು ನಮಗೆ ಸದಾ ಮಾರ್ಗದರ್ಶಕರಾಗಿರಬೇಕು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಶುಭಾಶಂಸನೆಯ ಮಾತುಗಳಾಡಿದರು. ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ.ಸತ್ಯನಾರಾಯಣ ಆಚಾರ್ ಅಭಿ ವಂದನಾ ಮಾತುಗಳನ್ನಾಡಿದರು.

ಕಾಪು ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಬಾಲಾಜಿ ರಾಘವೇಂದ್ರ ಆಚಾರ್ಯ ಉಸ್ಥಿತರಿದ್ದರು. ಪದ್ಮನಾಭ ಭಟ್ ಮತ್ತು ಮಟ್ಟು ಲಕ್ಷ್ಮಿನಾರಾಯಣ ರಾವ್ ಅಭಿವಂದನಾ ಪತ್ರ ವಾಚಿಸಿದರು.

ಶ್ರೀಹರಿ ಅಸ್ರಣ್ಣ ಕಟೀಲು ಅತಿಥಿಗಳನ್ನು ಸ್ವಾಗತಿಸಿದರೆ, ಪದ್ಮನಾಭ ಭಟ್ ವಂದಿಸಿದರು. ಡಾ.ವಂಶಿಕೃಷ್ಣಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News