ದ.ಕ. ಜಿ.ಪಂ.ನ ಆಡಳಿತ- ವಿಪಕ್ಷದಿಂದ ಪ್ರತ್ಯೇಕ ಅಭಿಪ್ರಾಯ ದಾಖಲು
ಮಂಗಳೂರು, ಜ.18: ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು ಸ್ಥಗಿತಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿಂದು ಆಡಳಿತ ಹಾಗೂ ವಿಪಕ್ಷ ಸದಸ್ಯರಿಂದ ಪ್ರತ್ಯೇಕ ಅಭಿಪ್ರಾಯ ದಾಖಲು ಮಾಡಿದ ಪ್ರಸಂಗ ನಡೆಯಿತು.
ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಲ್ಲಡ್ಕದ ಶಾಲೆ ಹಾಗೂ ಪುಣಚದ ಶ್ರೀದೇವಿ ಪ್ರೌಢಶಾಲೆಗೆ ಕೊಲ್ಲೂರು ದೇವಳ ದಿಂದ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸ ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಯಿತಾದರೂ ಸರ್ವಾನುಮತದ ನಿರ್ಣಯಕೈಗೊಳ್ಳಲು ಅಸಾಧ್ಯವಾಯಿತು. ಕೊನೆಗೆ ವಿಪಕ್ಷ ಸದಸ್ಯರ ಆಗ್ರಹದಂತೆ ದ.ಕ. ಜಿಲ್ಲೆಯ ಎಲ್ಲಾ ಅನುದಾನಿತ ಶಾಲೆಗಳಿಗೆ ಹಾಲಿ ಜಾರಿಯಲ್ಲಿರುವ ಅಕ್ಷರ ದಾಸೋಹವನ್ನು ತಕ್ಷಣದಿಂದ ಈ ಎರಡೂ ಶಾಲೆಗಳಿಗೆ ಅನುಷ್ಠಾನಗೊಳಿಸೇಕೆಂದು ಅಭಿಪ್ರಾಯ ದಾಖಲಿಸಲಾಯಿತು.
ಆಡಳಿತ ಪಕ್ಷದ ಸದಸ್ಯರ ಒತ್ತಾಯದಂತೆ ಕಲ್ಲಡ್ಕ ಶ್ರೀರಾಮ ವಿದ್ಯಾಮಂದಿರದ 3250 ಮಕ್ಕಳಿಗೂ ಅಕ್ಷರ ದಾಸೋಹ ಲಭ್ಯವಾಗಬೇಕು. ಅದು ಸಾಧ್ಯವಾಗದಿದ್ದಲ್ಲಿ ಕೊಲ್ಲೂರು ದೇವಸ್ಥಾನದಿಂದ ಈ ಹಿಂದಿನಂತೆ ಊಟದ ವ್ಯವಸ್ಥೆ ಮಾಡುವ ಅಭಿಪ್ರಾಯವನ್ನು ದಾಖಲಿಸಲಾಯಿತು.
ಆರಂಭದಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಚಂದ್ರಪ್ರಕಾಶ್ ತುಂಬೆ, ಅಕ್ಷರ ದಾಸೋಹದಡಿ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೆ ನಮ್ಮ ತಾಲೂಕಿನ ಎರಡು ಶಾಲೆಗಳಿಗೆ ಮಾತ್ರ ಯಾಕಿಲ್ಲ? ಸರಕಾರದಿಂದ ನೀಡಲಾಗುವ ಕಟ್ಟಡ, ಶಿಕ್ಷಕರಿಗೆ ವೇತನ, ಕ್ಷೀರಭಾಗ್ಯವನ್ನು ಕಲ್ಲಡ್ಕದ ವಿದ್ಯಾ ಮಂದಿರ ಪಡೆಯುತ್ತಿದ್ದರೂ ಅಕ್ಷರ ದಾಸೋಹವನ್ನು ಯಾಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ವುುಹಮ್ಮದ್ ಕೂಡಾ ದನಿಗೂಡಿಸಿದರು.
ಈ ಸಂದರ್ಭ ವಿಪಕ್ಷ ಸದಸ್ಯರಾದ ಕಮಲಾಕ್ಷಿ, ತುಂಗಪ್ಪ ಬಂಗೇರ ಮೊದಲಾದವರು ಆಕ್ಷೇಪಿಸಿ ಕೊಲ್ಲೂರಿನಿಂದ ಸಿಗುತ್ತಿದ್ದ ಊಟದ ವ್ಯವಸ್ಥೆಯನ್ನು ನಿಲ್ಲಿಸಿದ್ಯಾಕೆ ಎಂದು ಪ್ರಶ್ನಿಸಿದರು.
ಇದು ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿ, ಸಭೆ ಕೆಲಹೊತ್ತು ಗೊಂದಲದ ಗೂಡಾಯಿತು. ಆಡಳಿತ ಪಕ್ಷದ ಕೆಲ ಸದಸ್ಯರು ನಿಮ್ಮ ಊಟದ ಅಗತ್ಯವಿಲ್ಲ ಎಂದು ಆಕ್ಷೇಪಿಸಿದರೆ, ಊಟಕ್ಕಾಗಿ ಮಕ್ಕಳನ್ನು ಭಿಕ್ಷೆ ಬೇಡಿಸಿದ ಶಾಲೆಯ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿಕ್ಷದ ಸದಸ್ಯರು ಒತ್ತಾಯಿಸಿದರು.
ಅಕ್ಷರ ದಾಸೋಹವನ್ನು ಕಲ್ಲಡ್ಕದ ಶಾಲೆಗೂ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿ ತಾನು ಕೋರ್ಟ್ ಮೆಟ್ಟಿಲೇರುವುದಾಗಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ಸವಾಲು ಹಾಕಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಮಧ್ಯ ಪ್ರವೇಶಿಸಿ, ಸರಕಾರದ ಇತರ ಸೌಲಭ್ಯಗಳನ್ನು ಪಡೆಯುತ್ತಿರುವಾಗ ಅಕ್ಷರ ದಾಸೋಹ ಬೇಡವೆನ್ನುವುದು ಯಾಕೆ? ಅಧಿಕಾರಿಗಳು ತಕ್ಷಣದಿಂದ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೂ ಅಕ್ಷರ ದಾಸೋಹ ಜಾರಿಗೊಳಿಗೊಳಿಸಬೇಕೆಂದು ಹೇಳಿ ಸದಸ್ಯನ್ನು ಸಮಾಧಾನಮಾಡಲೆತ್ನಿಸಿದರು. ಆದರೆ ಆಡಳಿತ ಹಾಗೂ ವಿಪಕ್ಷ ಸದಸ್ಯರು ತಮ್ಮ ವಾದವನ್ನು ಬಿಡದೆ ಸಭೆಯಲ್ಲಿ ವಾಗ್ವಾದದ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಅಧ್ಯಕ್ಷರು ಸಭೆಯನ್ನು ಅರ್ಧ ತಾಸಿಗೆ ಮುಂದೂಡಿದರು.
ಮತ್ತೆ ಸಭೆ ಆರಂಭವಾದಾಗ ಕಾರ್ಯಸೂಚಿ ಮುಂದುವರಿಸಲು ಅಧ್ಯಕ್ಷರು ಸೂಚಿಸಿದಾಗ ಅದನ್ನು ತಡೆದ ವಿಪಕ್ಷ ಸದಸ್ಯರು ಸಭೆ ಮುಂದೂಡಲು ಕಾರಣವಾದ ವಿಷಯದ ಕುರಿತು ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ, 2007ರಿಂದ ಶ್ರೀರಾಮ ವಿದ್ಯಾಶಾಲೆ 3250 ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಆಗಿತ್ತು. ಇದೀಗ ಅಕ್ಷರ ದಾಸೋಹದಡಿ ಕೇವಲ ಪ್ರೌಢಶಾಲೆವರೆಗಿನ ವಿದ್ಯಾರ್ಥಿಗಳಿಗೆ ಮಾತ್ರವೇ ಊಟದ ವ್ಯವಸ್ಥೆ ದೊರೆಯಲಿದೆ. ಉಳಿದ ಮಕ್ಕಳಿಗೂ ಅಕ್ಷರ ದಾಸೋದಡಿ ವ್ಯವಸ್ಥೆ ಮಾಡಬೇಕೆಂದರು. ಮಾತ್ರವಲ್ಲದೆ ಸುಬ್ರಹ್ಮಣ್ಯದ ಎರಡು ಶಾಲೆಗಳಿಗೆ ಅಲ್ಲಿನ ಕ್ಷೇತ್ರದಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿರುವಾಗ, ಕಲ್ಲಡ್ಕದ ಶಾಲೆಗೆ ಕೊಲ್ಲೂರು ದೇವಳದಿಂದ ಊಟದ ವ್ಯವಸ್ಥೆ ಮಾಡಲಾಗುವುದಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ದೇವಸ್ಥಾನದಿಂದ ಊಟ ಕೊಡುವ ಬಗ್ಗೆ ವಿರೋಧವಿಲ್ಲ. ಸುಬ್ರಹ್ಮಣ್ಯದ ಶಾಲೆಗಳಿಗೆ ಅಲ್ಲಿನ ಕ್ಷೇತ್ರದಿಂದ ಊಟದ ವ್ಯವಸ್ಥೆ ದೊರೆಯುತ್ತಿರುವುದು. ಆದರೆ ಕಲ್ಲಡ್ಕದ ಶಾಲೆಗೆ ಕೊಲ್ಲೂರು ಕ್ಷೇತ್ರದಿಂದ ಹಣದ ರೂಪದಲ್ಲಿ ಅನುದಾನ ನೀಡಲಾಗುತ್ತಿತ್ತು. ಇದು ದೊಡ್ಡ ಹಗರಣ. ಜಿಲ್ಲೆಯ ಇತರ ಶಾಲೆಗಳ ಮಕ್ಕಳು ಸ್ವಾಭಿಮಾನದಿಂದ ಅಕ್ಷರ ದಾಸೋಹದ ಊಟ ಮಾಡುತ್ತಿದ್ದರೆ ಕಲ್ಲಡ್ಕ ಶಾಲೆ ಮಕ್ಕಳು ಬೇಡಿ ತಿನ್ನುತ್ತಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಅಣಕು ಪ್ರದರ್ಶನದ ಮೂಲಕ ಮಕ್ಕಳಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಚಂದ್ರಪ್ರಕಾಶ್ ತುಂಬೆ ಆಗ್ರಹಿಸಿದರು. ಈ ನಡುವೆ ಮತ್ತೆ ಸದಸ್ಯರ ನಡುವೆ ಮಾತಿನ ಚಕವುಕಿ ಕೆಲಹೊತ್ತು ಮುಂದುವರಿಯಿತು.
ಆ ಎರಡು ಶಾಲೆಗಳಿಗೆ ಅನುದಾನ ಸ್ಥಗಿತಗೊಳಿಸಿದ ಆಗಸ್ಟ್ ತಿಂಗಳಲ್ಲಿಯೇ ಅಕ್ಷರ ದಾಸೋಹದ ವ್ಯವಸ್ಥೆಯನ್ನು ಪಡೆಯುವಂತೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇಡ ಎಂಬ ಉತ್ತರ ಬಂದ ಹಿನ್ನೆಲೆಯಲ್ಲಿ ಒಪ್ಪಿಗೆ ನೀಡದೆ ಊಟದ ವ್ಯವಸ್ಥೆ ಮಾಡಿದಲ್ಲಿ ಅದು ಹಾಳಾಗಬಹುದೆಂಬ ಕಾರಣಕ್ಕೆ ಊಟದ ವ್ಯವಸ್ಥೆ ಮಾಡಲಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ಉತ್ತರಿಸಿದರು.
ಮತ್ತೆ ಈ ಬಗ್ಗೆ ಚರ್ಚೆ ನಡೆದು ಆಡಳಿತ ಹಾಗೂ ವಿಪಕ್ಷ ಸದಸ್ಯರ ಪ್ರತ್ಯೇಕ ನಿರ್ಣಯಗಳನ್ನು ದಾಖಲಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ.ಪ್ರತಿಕ್ರಿಯಿಸಿ, ಸದನಲ್ಲಿ ಎರಡು ನಿರ್ಣಯಗಳನ್ನು ದಾಖಲಿಸು ಸಾಧ್ಯವಿಲ್ಲ. ನಿರ್ಣಯವೊಂದಕ್ಕೆ ವಿರೋಧ ಅಭಿಪ್ರಾಯವನ್ನು ದಾಖಲಿಸಬಹುದಾಗಿದೆ. ಆ ಶಾಲೆಗಳಿಗೆ ಹಿಂದೆ ಕೊಲ್ಲೂರು ದೇವಳದಿಂದ ಸರಕಾರದ ಮುಜರಾಯಿ ಇಲಾಖೆಯ ಆದೇಶದ ಮೇರೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಅಲ್ಲವಾಗಿದ್ದು, ಜಿ.ಪಂ. ವ್ಯಾಪ್ತಿಗೆ ಬರುವುದಿಲ್ಲ. ಆಗಸ್ಟ್‌ನಲ್ಲಿ ಮುಜರಾಯಿ ಇಲಾಖೆಯಿಂದ ನೀಡಲಾಗುತ್ತಿದ್ದ ಅನುದಾನ ಸ್ಥಗಿತಗೊಂಡ ಸಂದರ್ಭ ಶಾಲೆಗಳಿಗೆ ಅಕ್ಷರ ದಾಸೋಹದಡಿ ವ್ಯವಸ್ಥೆ ಕಲ್ಪಿಸಲು ಪತ್ರ ಬರೆಯಲಾಗಿತ್ತು.ಆದರೆ ನಾವೇ ವ್ಯವಸ್ಥೆ ಮಾಡಿಕೊಂಡಿದ್ದು, ಸದ್ಯ ಬೇಡ ಎಂಬ ಉತ್ತರ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟೀಸು ಜಾರಿ ಮಾಡಿ ಅಕ್ಷರ ದಾಸೋಹಕ್ಕೆ ಪಟ್ಟಿ ನೀಡುವಂತೆ ಮತ್ತೆ ಕೋರಲಾ ಗಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಹೇಳಿದರು.
ಸಭೆಯ ಆರಂಭದಲ್ಲಿ ಶಯನ ಜಯಾನಂದ ಮಾತನಾಡಿ, ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯದಲ್ಲಿ ನಡೆದ ಪ್ರತಿಭಟನೆಯ ವೇಳೆ ಅಲ್ಲಿನ ಎಸ್‌ಐ ಜಿ.ಪಂ. ಅಧ್ಯಕ್ಷರನ್ನು ಎಲ್ಲರ ಎದುರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಪಮಾನಿಸಿದ್ದಾರೆ. ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಕೊನೆಗೆ ಎರಡು ಪ್ರತ್ಯೇಕ ಅಭಿಪ್ರಾಯಗಳ್ನು ದಾಖಲಿಸಿಕೊಳ್ಳಲಾಯಿತು.
ಈ ಸಂದರ್ಭ ವಿಪಕ್ಷ ಸದಸ್ಯರು ಆರಂಭದಲ್ಲಿ ಕಾರ್ಯಸೂಚಿ ಮಂಡನೆಯಾಗಲಿ ಎಂದು ಆಗ್ರಹಿಸಿದರು. ಈ ನಡುವೆ ಕೆಲ ನಿಮಿಷ ಸದಸ್ಯರ ನಡುವೆ ವಾಗ್ವಾದ ನಡೆದಾಗ, ಐವನ್ ಡಿಸೋಜಾ ಮಧ್ಯ ಪ್ರವೇಶಿಸಿ ಖಂಡನಾ ನಿರ್ಣಯಕ್ಕೆ ಅವಕಾಶ ಕಲ್ಪಿಸಿದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಶಾಹುಲ್ ಹಮೀದ್, ಸರ್ವೋತ್ತಮ ಗೌಡ ಉಪಸ್ಥಿತರಿದ್ದರು.