ಕ್ರೈಸ್ತ ಅಭಿವೃದ್ಧಿ ನಿಗಮಕ್ಕಾಗಿ ಮುಖ್ಯಮಂತ್ರಿಗೆ ಮನವಿ: ಐವನ್ ಡಿಸೋಜಾ

Update: 2018-01-18 12:14 GMT

ಮಂಗಳೂರು, ಜ. 18: ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ಧಿ ನಿಗಮವನ್ನಾಗಿ ಮಾರ್ಪಡಿಸಬೇಕು ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತಿರುವುದಾಗಿ ಎಂದು ವಿಧಾನ ಪರಿಷತ್‌ನ ಮುಖ್ಯ ಸೇತಕ ಐವನ್ ಡಿಸೋಜಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಜನ ಸಂಖ್ಯೆ ಶೇ. 4 ರಷ್ಟಿದ್ದು, ಜನ ಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣವನ್ನು ಮೀಸಲಿಡ ಬೇಕೆಂಬ ಬೇಡಿಕೆಯನ್ನು ರಾಜ್ಯ ರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

2018- 19 ನೇ ಸಾಲಿನ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯಕ್ಕಾಗಿ ಕನಿಷ್ಠ 500 ಕೋಟಿ ರೂ. ಅನುದಾನವನ್ನು ಕಾದಿರಿಸ ಬೇಕು ಹಾಗೂ ನಿಗಮವನ್ನು ನೀಬೇಕು ಎಂದವರು ಒತ್ತಾಯಿಸಿದರು.

ಕ್ರೈಸ್ತ ಸಮುದಾಯದ ಈ ಬೇಡಿಕೆಗಳನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಇದನ್ನು ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಮಂಡಿಸ ಬೇಕೆಂದು ಆಗ್ರಹಿಸುತ್ತಿರುವುದಾಗಿ ಹೇಳಿದರು.

ಕ್ರೈಸ್ತ ಅಭಿವೃದ್ಧಿ ಪರಿಷತ್ತು 2011 ರಲ್ಲಿ 50 ಕೋಟಿ ರೂ. ಅನುದಾನದಲ್ಲಿ ಪ್ರಾರಂಭಗೊಂಡಿತ್ತು. ಅದನ್ನು ಕ್ರೈಸ್ತ ಅಭಿವೃದ್ಧಿ ನಿಗಮವನ್ನಾಗಿ ಘೋಷಿಸ ಬೇಕೆಂದು ಈಗಾಗಲೇ ಪರಿಷತ್ತು ತೀರ್ಮಾನಿಸಿದ್ದು, 2017- 18 ನೇ ಸಾಲಿನಲ್ಲಿ 175 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈ ಆನುದಾನವನ್ನು ಕರ್ನಾಟಕ ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಅಲ್ಪ ಸಂಖ್ಯಾಕ ಅಭಿವೃದ್ಧಿ ನಿಗಮದ ಮೂಲಕ ರಾಜ್ಯದಲ್ಲಿರುವ ಶೇ. 4 ರಷ್ಟು ಕ್ರೈಸ್ತ ಸಮುದಾಯಕ್ಕೆ ಶ್ರಮ ಶಕ್ತಿ, ಮೈಕ್ರೋ ಸಾಲ, ಸ್ವ- ಉದ್ಯೋಗ ಸಾಲ, ಗಂಗಾ ಕಲ್ಯಾಣ ಯೋಜನೆ, ಹೈನುಗಾರಿಕೆ/ ಕೋಳಿ ಸಾಕಾಣಿಕೆ, ಟ್ಯಾಕ್ಸಿ/ ಗೂಡ್ಸ್ ವಾಹನಗಳ ಖರೀದಿ, ಗೃಹ ಸಾಲದ ಬಡ್ಡಿ, ಅರಿವು ಯೋಜನೆ, ಭೂ ಖರೀದಿ ಯೋಜನೆ, ಪ್ರವಾಸಿ ವಾಹನ ಸಾಲ ಯೋಜನೆಗಳ ಮೂಲಕ ಲಾನುಭವಿಗಳಿಗೆ ವಿತರಿಸಲಾಗಿದೆ. ಅಲ್ಲದೆ ಕರ್ನಾಟಕ ಅಲ್ಪ ಸಂಖ್ಯಾಕರ ಅಭಿವೃದ್ಧಿ ಇಲಾಖೆಯ ಮೂಲಕ ಚರ್ಚ್‌ಗಳ ದುರಸ್ತಿ, ಸಮುದಾಯ ಭವನ ನಿರ್ಮಾಣ, ವೃದ್ಧಾಶ್ರ್ರಮ, ಸ್ಮಶಾನಗಳ ಅಭಿವೃದ್ಧಿ ಇತ್ಯಾದಿಗಳಿಗೆ ಕಾದಿರಿಸಲಾಗಿದೆ ಎಂದು ತಿಳಿಸಿದರು.

ವಿವಿಧ ವೃತ್ತಿಗಳಲ್ಲಿ ಕೌಶಲ್ಯಾಭಿವೃದ್ಧಿ ಪಡೆಯಲು ಅನುಕೂಲವಾಗುವಂತೆ ರಾಜ್ಯದಲ್ಲಿ 4 ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪಿಸ ಬೇಕೆಂದು ಅವರು ಒತ್ತಾಯಿಸಿದರು.

ವಿದೇಶಿ ಉನ್ನತ ಶಿಕ್ಷಣಕ್ಕೆ ನೆರವು

ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಕ್ರೈಸ್ತ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯಡಿ 2017- 18 ನೇ ವರ್ಷದಲ್ಲಿ ದಾಖಲೆಯ 176 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 158 ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ನಂತೆ ಒಟ್ಟು 31.60 ಕೋಟಿ ರೂ.ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ 60 ಮಂದಿ ಕ್ರೈಸ್ತ ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ನಂತೆ ಒಟ್ಟು 12 ಕೋಟಿ ರೂ. ಗಳನ್ನು ಒದಗಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರಾದ ಜೆ. ನಾಗೇಂದ್ರ ಕುಮಾರ್, ಪುನೀತ್ ಶೆಟ್ಟಿ, ಮುದಸ್ಸಿರ್ ಕುದ್ರೋಳಿ, ಶಶಿಕಾಂತ್ ಶೆಟ್ಟಿ, ಸತೀಶ್ ಪೆಂಗಲ್, ಅನಿಲ್ ತೋರಸ್, ಗುರುರಾಜ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News