×
Ad

ಉಡುಪಿ: ಪಲಿಮಾರು ಶ್ರೀಗಳಿಂದ 2ನೇ ಬಾರಿ ಸರ್ವಜ್ಞ ಪೀಠಾರೋಹಣ

Update: 2018-01-18 19:41 IST

ಉಡುಪಿ, ಜ.18: ಸುಮಾರು 800 ವರ್ಷಗಳ ಹಿಂದೆ ಮಧ್ವ ಮತ ಸಂಸ್ಥಾಪಕ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದ ಉಡುಪಿ ಶ್ರೀಕೃಷ್ಣ ಮಠದ ಶ್ರೀಕೃಷ್ಣ ಮುಖ್ಯಪ್ರಾಣರ ಪೂಜಾ ಕೈಂಕರ್ಯವನ್ನು ಇಂದು ಬೆಳಗಿನ ಜಾವ ಎರಡನೇ ಬಾರಿಗೆ ಪಡೆದ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದರು.

ಪಲಿಮಾರು ಶ್ರೀಗಳು ಕಳೆದೆರಡು ವರ್ಷಗಳ ಕಾಲ ಶ್ರೀ ಕೃಷ್ಣ ಮಠದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಐದನೇ ಪರ್ಯಾಯೋತ್ಸವ ವನ್ನು ಯಶಸ್ವಿಯಾಗಿ ನಡೆಸಿದ ಪೇಜಾವರ ಮಠದ 86ರ ಹರೆಯದ ಶ್ರೀ ವಿಶ್ವೇಶತೀರ್ಥ ಶ್ರೀ ಇಂದು ಮುಂಜಾನೆ 6:40ರ ಸುಮಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ದೀಕ್ಷೆಯನ್ನು ಸ್ವೀಕರಿಸಿದರು.

1522ರಲ್ಲಿ ಸೋದೆ ಮಠದ ವಾದಿರಾಜರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತಿದ್ದು, ಪರ್ಯಾಯದ 32ನೇ ಚಕ್ರದ ಮೊದಲ ಪರ್ಯಾಯ ಇದಾಗಿದೆ. ಇಂದು ಪಲಿಮಾರು ಮಠಾಧೀಶರು, ಪೇಜಾವರಶ್ರೀಗಳಿಂದ ಶ್ರೀಕೃಷ್ಣನ ಪೂಜಾ ಹಾಗೂ ಆಡಳಿತದ ಅಧಿಕಾರವನ್ನು ಪಡೆದುಕೊಂಡರು.

ಕಿರಿಯರಿಬ್ಬರಿಗೆ ಮಾನವ ಪಲ್ಲಕ್ಕಿ: ಪರ್ಯಾಯ ಮಹೋತ್ಸವದ ಸಂಪ್ರದಾಯ ದಂತೆ ಇಂದು ಬೆಳಗಿನ ಜಾವ 3:30ಕ್ಕೆ ಜೋಡುಕಟ್ಟೆ ಬಳಿ ಪರ್ಯಾಯ ವೆುರವಣಿಗೆ ಆರಂಭಗೊಂಡಿದ್ದು, ಭಾಗವಹಿಸಿದ ಆರು ಮಂದಿ ಮಠಾಧೀಶರಲ್ಲಿ ಇಬ್ಬರು ಮತ್ತೆ ಮಾನವ ಹೊರುವ (ಅಡ್ಡಪಲ್ಲಕ್ಕಿ) ಪಲ್ಲಕ್ಕಿಗಳಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದರು.

ಪೇಜಾವರ ಶ್ರೀಗಳು ಪರ್ಯಾಯ ಮೆರವಣಿಗೆಯಲ್ಲಿ ಅಡ್ಡಪಲ್ಲಕ್ಕಿ ಸೇವೆಯನ್ನು ನಿಲ್ಲಿಸಲು ಮನವಿ ಮಾಡಿ, ಕಳೆದ ಬಾರಿ ನಾಲ್ವರು ಹಿರಿಯ ಶ್ರೀಗಳೊಂದಿಗೆ ವಾಹನಗಳಲ್ಲಿರಿಸಿದ ಪಲ್ಲಕ್ಕಿಗಳಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆದರೆ ಕಳೆದ ಬಾರಿಯಂತೆ ಈ ಸಲವೂ ಅಷ್ಟಮಠಗಳಲ್ಲಿ ಅತ್ಯಂತ ಕಿರಿಯ ಇಬ್ಬರು ಯತಿಗಳಾದ ಸೋದೆ ಶ್ರೀಗಳು ಹಾಗೂ ಅದಮಾರು ಮಠದ ಕಿರಿಯ ಯತಿಗಳು ಮತ್ತೆ ಮಾನವ ಹೊರುವ ಪಲ್ಲಕ್ಕಿಯಲ್ಲೇ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಪೇಜಾವರ ಶ್ರೀಗಳ ಮನವಿಯನ್ನು ಕಡೆಗಣಿಸಿದ್ದರು. ಈ ಬಾರಿ ಪಲಿಮಾರು, ಕೃಷ್ಣಾಪುರ, ಕಾಣಿಯೂರು ಹಾಗೂ ಶಿರೂರು ಶ್ರೀಗಳು ಪೇಜಾವರ ಶ್ರೀಗಳ ನಿರ್ಧಾರವನ್ನು ಅನುಸರಿಸಿದರೆ, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥರು ಹಾಗೂ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥರು ಸಂಪ್ರದಾಯದ ಹೆಸರಿನಲ್ಲಿ ಮಾನವ ಹೊರುವ ಪಲ್ಲಕಿ್ಕಯನ್ನು ಬಳಸಿ ಅಚ್ಚರಿ ಮೂಡಿಸಿದರು.

ಆದರೆ ಅದರಲ್ಲೂ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ತಮ್ಮದೇ ಪ್ರತ್ಯೇಕತೆಯಿಂದ ಎಲ್ಲರ ಗಮನ ಸೆಳೆದರು. ಅಲಂಕೃತ ತೆರೆದ ಜೀಪನ್ನು ರಥದ ಮಾದರಿಯಲ್ಲಿ ಮಾಡಿ ಅದರಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದರು. ತಮ್ಮ ಮಠದ ಪಲ್ಲಕ್ಕಿಯನ್ನು ಹೂಗಳಿಂದ ಅಲಂಕರಿಸಿ ಅದರಲ್ಲಿ ಗಣಪತಿಯ ಮೂರ್ತಿಯನ್ನು ಇರಿಸಿ ತಂದರು.

ಮಧ್ವಾಚಾರ್ಯರು ವಿದ್ಯಾಭ್ಯಾಸ ಮಾಡಿದ ಕಾಪು ಸಮೀಪದ ದಂಡತೀರ್ಥ ದಲ್ಲಿ ಸ್ನಾನ ಮುಗಿಸಿದ ಬಂದ ಶ್ರೀಗಳು, ಅಷ್ಟಮಠಗಳ ಪೈಕಿ ಆರು ಮಠಗಳ ಆರು ಮಂದಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಾದ ಕೋದಂಡ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ವಿವಿಧ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ ಎಲ್ಲಾ ಸ್ವಾಮೀಜಿಗಳು ಅಲಂಕೃತ ಪಲ್ಲಕ್ಕಿಯಲ್ಲಿ ಕುಳಿತು ಭವ್ಯ ಮೆರವಣಿಗೆಯಲ್ಲಿ ಕೋರ್ಟು ರಸ್ತೆ, ಕೆಎಂ ಮಾರ್ಗ, ಕನಕದಾಸ ರಸ್ತೆ ಮಾರ್ಗವಾಗಿ ರಥಬೀದಿಗೆ ಬಂದರು.

ಕನಕನ ಕಿಂಡಿಯಿಂದ ದರ್ಶನ: ಮೆರವಣಿಗೆ ರಥಬೀದಿ ತಲುಪಿದಾಗ ಮಠಾಧೀಶರು ಪಲ್ಲಕ್ಕಿಯಿಂದ ಇಳಿದು ನೆಲಕ್ಕೆ ಹಾಸಿದ ನಡೆಮುಡಿಯ ಮೇಲೆ ಸಾಗಿ ಕನಕಗೋಪುರದ ಬಳಿ ಬಂದರು. ಪಲಿಮಾರು ಶ್ರೀಗಳು ಕನಕನ ಕಿಂಡಿ ಮೂಲಕ ಮೊದಲು ಕೃಷ್ಣನ ದರ್ಶನ ಪಡೆದರು. ಬಳಿಕ ಅವರು ಚಂದ್ರವೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠ ಪ್ರವೇಶಿಸಿದರು.

ಅಧಿಕಾರ ಹಸ್ತಾಂತರ: ಶ್ರೀ ಮಠದ ಪ್ರವೇಶ ದ್ವಾರದಲ್ಲಿ ಪೇಜಾವರ ಮಠದ ಉಭಯಶ್ರೀಗಳು ಪಲಿಮಾರು ಶ್ರೀಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಮಠದೊಳಗೆ ಕರೆತಂದು ನವಗ್ರಹ ಕಿಂಡಿಯ ಮೂಲಕ ಅವರಿಗೆ ಕೃಷ್ಣನ ದರ್ಶನ ಮಾಡಿಸಿದರು. ಬಳಿಕ ಪಲಿಮಾರು ಶ್ರೀಗಳನ್ನು ಗರ್ಭಗುಡಿಯೊಳಗೆ ಕರೆತಂದು ಮಠದ ಪಟ್ಟದ ದೇವರನ್ನು ಕೃಷ್ಣನ ಎದುರು ಇಟ್ಟು ಪೂಜೆಯ ಸಂಕೇತವಾದ ಅಕ್ಷಯ ಪಾತ್ರೆ, ಗರ್ಭಗುಡಿಯ ಕೀಲಿಕೈ ಹಾಗೂ ಸಟುಗವನ್ನು ಹಸ್ತಾಂತರಿಸಿದರು. ಅನಂತರ 6:50ಕ್ಕೆ ಸರಿಯಾಗಿ ಉಳಿದೆಲ್ಲಾ ಸ್ವಾಮಿಗಳ ಉಪಸ್ಥಿತಿಯಲ್ಲಿ ಪಲಿಮಾರು ಶ್ರೀಗಳು ಸರ್ವಜ್ಞ (ಮಧ್ವ) ಪೀಠಾರೋಹಣ ಮಾಡಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣ ಮಠದ ಅಧಿಕಾರವನ್ನು ವಹಿಸಿಕೊಂಡರು. ಇಲ್ಲಿಗೆ ಪರ್ಯಾಯದ ಪ್ರಮುಖ ವಿಧಿಗಳು ಮುಕ್ತಾಯಗೊಂಡವು.

ಮುಂದಿನ ಧಾರ್ಮಿಕ ವಿಧಿಗಳು ಬಡಗು ಮಳಿಗೆಯಲ್ಲಿ ನಡೆದವು. ಬಡಗು ಮಳಿಗೆಯ ಅರಳುಗದ್ದಿಗೆಯಲ್ಲಿ ಉಪಸ್ಥಿತ ಮಠಾಧೀಶರುಗಳಿಗೆ ಮಾಲಿಕೆ ಮಂಗಳಾರತಿ ಮಾಡಿ ಗಂಧದುಪಚಾರ ಮಾಡಲಾಯಿತು. ಇದಾದ ಬಳಿಕ ಕೊಂಬು ಕಹಳೆ, ಚಂಡೆ, ವೇದಘೋಷಗಳ ನಡುವೆ ಎಲ್ಲಾ ಎಂಟು ಮಂದಿ ಮಠಾಧಿಪತಿಗಳು ಮೆರವಣಿಗೆಯಲ್ಲಿ ಪರ್ಯಾಯ ದರ್ಬಾರು ನಡೆಯುವ ಆನಂದತೀರ್ಥ ಮಂಟಪ ವೇದಿಕೆಗೆ ಬಂದರು.

ಮನಸೂರೆಗೊಳ್ಳುವಂತೆ ರಾಜಾಂಗಣದಲ್ಲಿ ಹಾಸಲಾದ ಅರಳು ಗದ್ದುಗೆಯಲ್ಲಿ ಎಲ್ಲಾ ಯತಿಗಳು ಕುಳಿತ ಬಳಿಕ ಪರ್ಯಾಯ ದರ್ಬಾರು ಆರಂಭಗೊಂಡಿತು. ಪರ್ಯಾಯ ಶ್ರೀವಿದ್ಯಾಧೀಶ ತೀರ್ಥರೊಂದಿಗೆ ಶ್ರೀ ವಿಶ್ವೇಶತೀರ್ಥರು ಹಾಗೂ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಒಂದು ಪಲ್ಲಂಗದಲ್ಲಿ ಕುಳಿತರೆ, ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ, ಪೇಜಾವರ ಕಿರಿಯರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಹಾಗೂ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಇನ್ನೊಂದರಲ್ಲಿ ಕುಳಿತರು. ಮೂರನೇ ಪಲ್ಲಂಗದಲ್ಲಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಹಾಗೂ ಅದಮಾರು ಮಠದ ಕಿರಿಯ ಯತಿ ಶ್ರೀಈಶತೀರ್ಥ ಶ್ರೀಪಾದರು ಕುಳಿತು ದರ್ಬಾರ್ ಸಭೆ ನಡೆಸಿಕೊಟ್ಟರು.

ಈ ಬಾರಿಯೂ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಹಾಗೂ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀ ಪರ್ಯಾಯ ಮೆರವಣಿಗೆ ಹಾಗೂ ಪರ್ಯಾಯ ದರ್ಬಾರಿನಲ್ಲಿ ಭಾಗವಹಿಸಲಿಲ್ಲ. ಪರ್ಯಾಯ ಪೀಠಾರೋಹಣಕ್ಕೆ ಧರ್ಮಸ್ಥಳ, ತಿರುಪತಿ, ಮಂತ್ರಾಲಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳು ಪ್ರಸಾದ ರೂಪದಲ್ಲಿ ಕಾಣಿಕೆ ಹಾಗೂ ಇತರ ವಸ್ತುಗಳನ್ನು ಪರ್ಯಾಯ ಶ್ರೀಗಳಿಗೆ ಅರ್ಪಿಸಿದರು.

ದರ್ಬಾರು ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹೈಕೋರ್ಟ್ ನ್ಯಾಯಾಧೀಶ ದಿನೇಶ್ ಕುಮಾರ್, ಮ್ಯಾಗ್ಸಸೆ ಪ್ರಶಸ್ತಿ ವಿಜೇತ ರಾಜಸ್ತಾನದ ರಾಜೇಂದ್ರ ಸಿಂಗ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪ್ರಯಾಗ ಮಠದ ಶ್ರೀವಿದ್ಯಾತ್ಮತೀರ್ಥ ಸ್ವಾಮೀಜಿ, ಬೆಂಗಳೂರು ಇಸ್ಕಾನ್‌ನ ಮುಖ್ಯಸ್ಥ ಮಧುಪಂಡಿತ್ ದಾಸ್, ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂದ್ಯಾ, ತಿರುಪತಿ ದೇವಸ್ಥಾನದ ಅನಿಲ್‌ಕುಮಾರ್ ಸಿಂಘಲ್, ಕೆ.ಎಂ.ಶ್ರೀನಿವಾಸಮೂರ್ತಿ, ಆದಿಕೇಶವಲು, ಕರ್ಣಾಟಕ ಬ್ಯಾಂಕಿನ ಮಹಾಬಲೇಶ್ವರ ರಾವ್, ಡಾ.ಮೋಹನ ಆಳ್ವ ಮುಂತಾದವರು ಉಪಸ್ಥಿತ ರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಎಂ.ಎಲ್.ಸಾಮಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News