×
Ad

ಓಟು ಕೊಳ್ಳುವುದು, ಮಾರುವುದರಿಂದ ಪ್ರಜಾಪ್ರಭುತ್ವದ ಆಶಯ ಉಳಿವು ಅಸಾಧ್ಯ-ಮಹೇಶ್ ಎನ್

Update: 2018-01-18 20:03 IST

ಪುತ್ತೂರು, ಜ. 18: ಪ್ರಜಾಪ್ರಭುತ್ವವು ದೇಶದ ಧರ್ಮವಾಗಿದ್ದು, ಎಲ್ಲಾ ಜಾತಿ ಧರ್ಮಗಳನ್ನು ಒಳಗೊಂಡ ನಮ್ಮ ಪ್ರಜಾಪ್ರಭುತ್ವದಲ್ಲಿ ಸಂವಿದಾನವೇ ಸರ್ವಶ್ರೇಷ್ಠ ಧರ್ಮಗ್ರಂಥವಾಗಿದೆ. ಆದರೆ ಓಟು ಕೊಳ್ಳುವವರು ಮತ್ತು ಮಾರುವವರು ಇರುವ ತನಕ ಪ್ರಜಾಪ್ರಭುತ್ವದ ಆಶಯದ ಉಳಿವು ಅಸಾಧ್ಯ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಹೇಶ್ ಎನ್ ಹೇಳಿದರು.

ಅವರು ಗುರುವಾರ ಪುತ್ತೂರಿನ ದರ್ಬೆ ವೃತ್ತದಲ್ಲಿ ನಡೆದ ‘ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ’ ಜನಜಾಗೃತಿ ಜಾಥಾದ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದರು. ನಮ್ಮನ್ನು ಆಳ್ವಿಕೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಪ್ರಜಾಪ್ರಭುತ್ವದ ದಮನವಾಗುತ್ತಿದ್ದು, ಅದನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ ಎಂದು ಇತ್ತೀಚೆಗೆ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಹೇಳಿರುವುದು ಇದಕ್ಕೆ ನಿದರ್ಶನವಾಗಿದೆ. ನ್ಯಾಯಾಧೀಶರ ಸ್ಥಿತಿಯೇ ಹೀಗಾದಲ್ಲಿ ಸಾಮಾನ್ಯ ಜನರ ಪರಿಸ್ಥಿತಿಯೇನು ಎಂದು ಪ್ರಶ್ನಿಸಿದ ಅವರು ಶಾಸಕಾಂಗ ವ್ಯವಸ್ಥೆಯಡಿಯಲ್ಲಿ ಪ್ರಜಾಪ್ರಭುತ್ವ ಸೋತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದು 68 ವರ್ಷಗಳು ಕಳೆದರೂ ಅದರ ಮೌಲ್ಯ ಮತ್ತು ಆಶಯ ಇನ್ನೂ ಈಡೇರಿಲ್ಲ ಎಂದರು.

ಪ್ರಜಾಪ್ರಭುತ್ವದ ಆಶಯದಂತೆ ದೇಶದ ಸಂಪತ್ತು, ಉದ್ಯೋಗಾವಕಾಶಗಳು, ಸಂಪನ್ಮೂಲಗಳು, ಸರಕು ಮತ್ತು ಸೇವೆಗಳು ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕಿತ್ತು. ಆದರೆ ಇಲ್ಲಿ ಆಳ್ವಿಕೆ ಮಾಡಿದ ಮನುವಾದಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿಗೆ ಪೂರಕವಾಗಿ ಕೆಲಸ ಮಾಡಿಲ್ಲ. ದೇಶದ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕ್ರೋಡೀಕರಣಗೊಂಡಿದೆ. ಅದನ್ನು ಸಮಾನವಾಗಿ ಹಂಚಿಕೆ ಮಾಡುವ ಆಡಳಿತ ಬರಬೇಕು. ಈ ಸಿದ್ದಾಂತದ ತಳಹದಿಯಲ್ಲಿ ಬಿಎಸ್‌ಪಿ ಈ ಜನಜಾಗೃತಿ ಜಾಥಾ ಕೈಗೊಂಡಿದೆ ಎಂದರು. ದೇಶದಲ್ಲಿ 5 ಲಕ್ಷ ರೈತರು ಬೆಳೆಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡುವಂತೆ ರೈತಸಂಘದ ಜೊತೆಗೂಡಿ ಬಿಎಸ್‌ಪಿಯೂ ಹೋರಾಟ ನಡೆಸಿತ್ತು. ಆದರೆ ಕೇಂದ್ರ ಸರ್ಕಾರವು ರೈತರ ರೂ.40ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದಲ್ಲಿ ಬ್ಯಾಂಕ್ ದಿವಾಳಿ ಆಗುತ್ತದೆ ಎಂದು ಹೇಳಿಕೆ ನೀಡಿದೆ. ಅದೇ ಸರ್ಕಾರ ಉದ್ಯಮಿಗಳ ಮತ್ತು ಬಂಡವಾಳಶಾಹಿಗಳಿಗೆ ರೂ. 6ಲಕ್ಷದ 50 ಸಾವಿರ ಸಬ್ಸಿಡಿ ನೀಡಿ ರೈತ ವಿರೋಧಿ ಧೋರಣೆ ತೋರಿದೆ ಎಂದರು.

ಸರ್ಕಾರದ ಅನ್ನಭಾಗ್ಯ ಯೋಜನೆಯೇ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದ ಅವರು ರಾಜ್ಯದಲ್ಲಿ ಸುಮಾರು 4 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಅಕ್ಕಿಗಾಗಿ ರೇಶನ್ ಅಂಗಡಿಯ ಮುಂದೆ ನಿಲ್ಲುತ್ತಿದ್ದಾರೆ. ಪ್ರಜೆಗಳಿಗೆ ಆರ್ಥಿಕ ಸ್ವಾವಲಂಭನೆ ಇರುತ್ತಿದ್ದಲ್ಲಿ, ಬಡತನ ಎಂಬುದು ಇರದಿದ್ದಲ್ಲಿ ಯಾರೂ ಸರ್ಕಾರದ ಈ ಅಕ್ಕಿಗೆ ಕಾಯುತ್ತಿರಲಿಲ್ಲ. ಅನ್ನ ಬೆಳೆಯುವ ರೈತನೇ ಇದೀಗ ರೇಶನ್ ಅಂಗಡಿ ಮುಂಬಾಗ ಅನ್ನಕ್ಕಾಗಿ ಕಾಯುತ್ತಿದ್ದಾನೆ. ದೇಶದ ಸಂಪತ್ತು ಸಮಾನ ಹಂಚಿಕೆಯಾಗಿದ್ದಲ್ಲಿ ಸರ್ಕಾರದ ಈ ಅನ್ನಭಾಗ್ಯಕ್ಕೆ ಕಾರ್ಡು ಹಿಡಿದುಕೊಂಡು ಯಾರೂ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಜನರನ್ನು ನಿರ್ಗತಿಕರನ್ನಾಗಿ ಮಾಡಿ ಪಾಳೆಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ನಾವು ಈತನಕ ಆಯ್ಕೆ ಮಾಡಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದಲ್ಲಿ ಶೇ. 5ರಷ್ಟಿರುವ ಶ್ರೀಮಂತರ ಪರವಾಗಿಯೇ ಕೆಲಸ ಮಾಡಿದೆ. ಇಂತಹ ಸರ್ಕಾರಗಳಿಂದ ಪ್ರಜಾಪ್ರಭುತ್ವ ಉಳಿಯದು ಎಂದ ಅವರು ಸಂವಿಧಾನವನ್ನು ಗೌರವಿಸದ ಮತ್ತು ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಸರ್ಕಾರಗಳನ್ನು ಮುಂದಿನ ಚುನಾವಣೆಯಲ್ಲಿ ಪ್ರಜೆಗಳು ಬದಲಾಯಿಸಬೇಕು. ರಾಜ್ಯದಲ್ಲಿ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರಕದಂತೆ ಬಿಎಸ್‌ಪಿ ಕಾರ್ಯಕರ್ತರು ನೋಡಿಕೊಳ್ಳಬೇಕು. ಬಿಎಸ್‌ಪಿ ರಾಜ್ಯದಲ್ಲಿ ಕಿಂಗ್‌ಮೇಕರ್ ಆಗುವಂತೆ ಎಲ್ಲರೂ ಪ್ರಯತ್ನಿಸಬೇಕು ಎಂದರು.

ಬಿಎಸ್‌ಪಿ ಮುಖಂಡರಾದ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ವೇಲಾಯುದನ್, ಜಿಲ್ಲಾಧ್ಯಕ್ಷ ಗೋಪಾಲ್ ಪುತ್ತೂರು, ತಾಲೂಕು ಅಧ್ಯಕ್ಷ ನಿಶಾಂತ್ ಕುಮಾರ್, ಮುಖಂಡರಾದ ಗಣೇಶ್ ಕಾರೆಕ್ಕಾಡು, ಉದಯ ಕುಮಾರ್, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News