ಪೌರ ಕಾರ್ಮಿಕರಿಂದ ಎರಡೇ ಗಂಟೆಯಲ್ಲಿ ಉಡುಪಿ ನಗರ ಸ್ವಚ್ಛ !
ಉಡುಪಿ, ಜ.18: ಸಾವಿರಾರು ಮಂದಿ ಪಾಲ್ಗೊಂಡಿದ್ದ ಪರ್ಯಾಯ ಮಹೋತ್ಸವದ ಮೆರವಣಿಗೆ ಮುಗಿಯುತ್ತಿದ್ದಂತೆ ಉಡುಪಿ ನಗರಸಭೆಯ ಪೌರ ಕಾರ್ಮಿಕರು ರಸ್ತೆಗಿಳಿದು ಕೇವಲ ಎರಡೇ ಗಂಟೆಯೊಳಗೆ ಇಡೀ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರದ ಜೋಡುಕಟ್ಟೆ- ಡಯಾನ ಸರ್ಕಲ್- ಕೆ.ಎಂ.ಮಾರ್ಗ- ಕನಕದಾನ ರಸ್ತೆ ಮಾರ್ಗದಲ್ಲಿ ಪರ್ಯಾಯ ಮೆರವಣಿಗೆ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಅದೇ ರೀತಿ ನಗರದ ವಿವಿಧೆಡೆಗಳಲ್ಲಿ ಸಂಗೀತ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೀಗೆ ನಗರದಲ್ಲಿ ಸೇರಿದ ಜನ ಜಾತ್ರೆ ಯಿಂದ ಎಲ್ಲೆಡೆ ಕಸಗಳು ತುಂಬಿ ಹೋಗಿದ್ದವು. ನಸುಕಿನ ವೇಳೆ 3ಗಂಟೆಗೆ ಆರಂಭವಾದ ಮೆರವಣಿಗೆ ಜೋಡುಕಟ್ಟೆಯಿಂದ ಸಾಗುತ್ತಿದ್ದಂತೆ ಸುಮಾರು 5ಗಂಟೆ ಸುಮಾರಿಗೆ ಮೆರವಣಿಗೆ ಹಿಂದಿನಿಂದ ಪೊರಕೆ ಹಿಡಿದುಕೊಂಡು ರಸ್ತೆಗಿಳಿದ ಪೌರ ಕಾರ್ಮಿರು ರಸ್ತೆಯುದ್ದಕ್ಕೂ ಬಿದ್ದ ಕಸವನ್ನು ಶುಚಿಗೊಳಿಸುವ ಕಾರ್ಯ ನಡೆಸಿದರು. ಇದಕ್ಕಾಗಿ ನಗರಸಭೆಯಿಂದ ಒಟ್ಟು 70-80 ಮಂದಿ ಪೌರ ಕಾರ್ಮಿಕರ ಐದು ತಂಡಗಳನ್ನು ರಚಿಸಲಾಗಿತ್ತು.
ಒಂದು ತಂಡ ಮೆರವಣಿಗೆ ಸಾಗಿದ ರಸ್ತೆಯನ್ನು ಶುಚಿಗೊಳಿಸಿದರೆ, ಇನ್ನೊಂದು ತಂಡ ಐಡಿಯಲ್ ಸರ್ಕಲ್- ತೆಂಕಪೇಟೆ ಮಾರ್ಗವನ್ನು ಶುಚಿ ಗೊಳಿಸಿತು. ಇತರ ತಂಡಗಳು ಸರ್ವಿಸ್ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರಥಬೀದಿ ಸೇರಿದಂತೆ ಇಡೀ ನಗರವನ್ನು ಸ್ವಚ್ಛಗೊಳಿುವ ಕಾರ್ಯದಲ್ಲಿ ತೊಡಗಿಕೊಂಡಿತ್ತು.
ಹೀಗೆ ಪೌರ ಕಾರ್ಮಿಕರು ಬೆಳಗ್ಗೆ ಏಳು ಗಂಟೆಯೊಳಗೆ ಇಡೀ ನಗರವನ್ನು ಸ್ವಚ್ಛಗೊಳಿಸಿದರು. ಇವರ ಶ್ರಮದಿಂದ ಬೆಳಗ್ಗೆ ನೋಡಿದವರಿಗೆ ಕೆಲವೇ ಗಂಟೆಗಳ ಮೊದಲು ನಗರದಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ನಡೆದಿಲ್ಲ ಎಂಬಂತೆ ಕಾಣುತ್ತಿತ್ತು. ಇವರ ಚುರುಕಿನ ಕಾರ್ಯಕ್ಕೆ ನಗರದ ಜನತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.