ಜ.24: 18 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ

Update: 2018-01-18 16:14 GMT

 ಹೊಸದಿಲ್ಲಿ,ಜ.18: ಕರ್ನಾಟಕದ ನೇತ್ರಾವತಿ ಎಂ.ಚವಾಣ್‌ಗೆ ಮರಣೋತ್ತರ ಪ್ರಶಸ್ತಿ ಸೇರಿದಂತೆ ದೇಶದ ವಿವಿಧೆಡೆಗಳ ಏಳು ಬಾಲಕಿಯರು ಮತ್ತು 11 ಬಾಲಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ.24ರಂದು ಈ ವರ್ಷದ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಈ ಪ್ರಶಸ್ತಿಗಳನ್ನು ‘ಭಾರತ ಪ್ರಶಸ್ತಿ’, ‘ಗೀತಾ ಚೋಪ್ರಾ ಪ್ರಶಸ್ತಿ’, ‘ಸಂಜಯ ಚೋಪ್ರಾ ಪ್ರಶಸ್ತಿ’, ‘ಬಾಪು ಗಾಯಧಾನಿ ಪ್ರಶಸ್ತಿ’ ಮತ್ತು ‘ಸಾಮಾನ್ಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ ಹೀಗೆ ಐದು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ.

ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿಯೂ ಪಾಲ್ಗೊಳ್ಳಲಿರುವ ಈ ಬಾಲಕಿಯರು ಮತ್ತು ಬಾಲಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸತ್ಕಾರಕೂಟವೊಂದನ್ನು ಏರ್ಪಡಿಸಲಿದ್ದಾರೆ.

ಜೂಜು ಮತ್ತು ಬೆಟ್ಟಿಂಗ್‌ನ ಅಕ್ರಮ ದಂಧೆಯ ರೂವಾರಿಗಳನ್ನು ಬಂಧಿಸುವಲ್ಲಿ ಪೊಲೀಸರಿಗೆ ನೆರವಾಗಿದ್ದ ಉತ್ತರ ಪ್ರದೇಶದ ನಾಝಿಯಾ(18) ಅತ್ಯಂತ ಪ್ರತಿಷ್ಠಿತ ಭಾರತ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಕರ್ನಾಟಕದ ಬಾಗಲಕೋಟ ಜಿಲ್ಲೆಯ ಹಸೂರು ಗ್ರಾಮದ ಬಾಲಕಿ ನೇತ್ರಾವತಿ(14)ಗೆ ಗೀತಾ ಚೋಪ್ರಾ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನಿಸಲಾಗುವುದು.

ಕಳೆದ ವರ್ಷದ ಮೇ 13ರಂದು ಗ್ರಾಮದ ಕೆರೆಯಲ್ಲಿ ಈಜಿಗಿಳಿದಿದ್ದ ಗಣೇಶ(10) ಮತ್ತು ಮುತ್ತು(16) ನೀರಿನಲ್ಲಿ ಮುಳುಗತೊಡಗಿದ್ದರು. ಇದೇ ವೇಳೆ ಕೆರೆಯಲ್ಲಿ ಬಟ್ಟೆಗಳನ್ನು ಒಗೆಯುತ್ತಿದ್ದ ನೇತ್ರಾವತಿ ಅವರನ್ನು ರಕ್ಷಿಸಲು ಜೀವದ ಹಂಗು ತೊರೆದು ನೀರಿಗೆ ಜಿಗಿದಿದ್ದಳು. ಮುತ್ತುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದ ಆಕೆ ಗಣೇಶನ ರಕ್ಷಣೆಗಾಗಿ ಮತ್ತೆ ನೀರಿಗೆ ಧುಮುಕಿದ್ದಳು. ಆದರೆ ಜೀವಭೀತಿಯಿಂದ ಕಂಗಾಲಾಗಿದ್ದ ಗಣೇಶ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡಿದ್ದರಿಂದ ಈಜಲು ಸಾಧ್ಯವಾಗದೆ ಇಬ್ಬರೂ ಮುಳುಗಿ ಮೃತಪಟ್ಟಿದ್ದರು. ಮಹಾಂತೇಶ-ವಾಲವ್ವ ದಂಪತಿಯ ನಾಲ್ಕು ಮಕ್ಕಳಲ್ಲಿ ನೇತ್ರಾವತಿ ಎರಡನೆಯವಳಾಗಿದ್ದಳು.

ಮಿರೆರಾಮ್‌ನ ಎಫ್.ಲಾಲ್‌ಛಂದಮಾ(17) ಮತ್ತು ಮಣಿಪುರದ ಲೌಕ್ರಾಕ್‌ಪಾಮ್ ರಾಜೇಶ್ವರಿ(15) ಅವರಿಗೂ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. ಕಾಲುವೆಯೊಂದಕ್ಕೆ ಧುಮುಕಿದ್ದ ಶಾಲಾ ಬಸ್‌ನಲ್ಲಿದ್ದ 15 ಮಕ್ಕಳನ್ನು ರಕ್ಷಿಸಿದ್ದ ಪಂಜಾಬ್‌ನ ಕರಣಬೀರ್ ಸಿಂಗ್(17) ಸಂಜಯ ಚೋಪ್ರಾ ಪ್ರಶಸ್ತಿ ಪಡೆಯಲಿದ್ದಾನೆ.

ಮೇಘಾಲಯದ ಬೆಷ್ವಾಜಾನ್ ಪೀನ್‌ಲಾಂಗ್(14), ಒಡಿಶಾದ ಮಮತಾ ದಲಾಯಿ(7), ಕೇರಳದ ಸೆಬಾಸ್ಟಿಯನ್ ವಿನ್ಸೆಂಟ್(13), ರಾಯಪುರದ ಲಕ್ಷ್ಮಿ ಯಾದವ(16), ನಾಗಾಲ್ಯಾಂಡ್‌ನ ಮಾನ್ಷಾ ಎನ್.(13), ಎನ್.ಶಾಂಗಪನ್ ಕೊನ್ಯಾಕ್(18), ಯೋವಾಕ್ನೀ(18) ಮತ್ತು ಚಿಂಗೈ ವಾಂಗ್ಸಾ(18), ಗುಜರಾತಿನ ಸಮೃದ್ಧಿ ಸುಶೀಲ ಶರ್ಮಾ(17), ಮಿರೆರಾಮ್‌ನ ರೆನುಂತ್ಲುವಾಂಗಾ(16), ಉತ್ತರಾಖಂಡ್‌ನ ಪಂಕಜ್ ಸೇಮ್ವಾಲ್(16), ಮಹಾರಾಷ್ಟ್ರದ ನದಾಫ್ ಇಜಾಝ್ ಅಬ್ದುಲ್ ರವೂಫ್(17) ಮತ್ತು ಒಡಿಶಾದ ಪಂಕಜ ಕುಮಾರ ಮಹಂತ(15)ಅವರು ಪ್ರಶಸ್ತಿಗಳನ್ನು ಸ್ವೀಕರಿಸಲಿರುವ ಇತರ ಮಕ್ಕಳಾಗಿದ್ದಾರೆ.

1957ರಲ್ಲಿ ಮೊದಲ ಬಾರಿಗೆ ಘೋಷಿಸಲಾಗಿದ್ದ ಈ ಪ್ರಶಸ್ತಿಗಳನ್ನು ಈವರೆಗೆ 680 ಬಾಲಕರು ಮತ್ತು 283 ಬಾಲಕಿಯರಿಗೆ ನೀಡಲಾಗಿದೆ. ಪ್ರಶಸ್ತಿಗಳು ಪದಕ, ಪ್ರಮಾಣಪತ್ರ ಮತ್ತು ನಗದು ಪುರಸ್ಕಾರಗಳನ್ನು ಒಳಗೊಂಡಿರುತ್ತವೆ. ಅರ್ಹ ಪ್ರಶಸ್ತಿ ವಿಜೇತರಿಗೆ ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News