×
Ad

ಹೊಸ ಆರೋಗ್ಯ ನೀತಿಯಲ್ಲಿ ರೋಗ ತಡೆಗೆ ಆದ್ಯತೆ: ಜೆ.ಪಿ.ನಡ್ಡ

Update: 2018-01-18 21:44 IST

ಉಡುಪಿ, ಜ.18: ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಆರೋಗ್ಯ ನೀತಿ- 2017ರಲ್ಲಿ ರೋಗ ಆಧಾರಿತ ಚಿಕಿತ್ಸೆಯನ್ನು ಕೈಬಿಟ್ಟು, ಆರೋಗ್ಯ ಸಂರಕ್ಷಣೆ ಗಾಗಿ ಕಾಯಿಲೆ ಬಾರದಂತೆ ತಡೆ ಮತ್ತು ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವೈದ್ಯ ಪದ್ಧತಿಗೆ ಆದ್ಯತೆ ಹಾಗೂ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕ್ಯಾಣ ಸಚಿವ ಜೆ.ಪಿ ನಡ್ಡ ಹೇಳಿದ್ದಾರೆ.

ಜಿಲ್ಲಾಡಳಿತ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿ.ಆರ್.ಎಸ್. ಸ್ವಾಸ್ಥ್ಯ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ರಾಜ್ಯ ಸರಕಾರ ಕೂಸಮ್ಮ ಶಂಭೂ ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದ ಆರೋಗ್ಯ ವ್ಯವಸ್ಥೆಯನ್ನು ಸದೃಢವಾಗಿಸಲು ಅದರಲ್ಲೂ ವಿಶೇಷ ವಾಗಿ ತಾಯಿ ಮತ್ತು ಮಗುವಿನ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾ ಗಿದೆ. ಇದರಿಂದ ದೇಶದಲ್ಲಿ ಶಿಶು ಮರಣ ಹಾಗೂ ತಾಯಿ ಮರಣದ ಪ್ರಮಾಣದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಎಂದು ಸಚಿವರು ಪ್ರತಿಪಾದಿಸಿದರು. ಸರಕಾರದ ಕ್ರಮಗಳಿಂದಾಗಿ ದೇಶದ ನಿಗದಿತ ಶಿಶು ಮರಣ ಪ್ರಮಾಣವಾದ ಶೇ.2.1ನ್ನು ದೇಶದ 24 ರಾಜ್ಯಗಳು ಸಾಧಿಸಿವೆ. ಕಳಪೆ ನಿರ್ವಹಣೆ ತೋರಿದ ಎರಡು ರಾಜ್ಯಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. 

ಎಲ್ಲರಿಗೂ ಆರೋಗ್ಯ ಪರಿಕಲ್ಪನೆಯಲ್ಲಿ ಖಾಸಗಿ-ಸರಕಾರಿ ಸಹಭಾಗಿತ್ವಕ್ಕೆ (ಪಿಪಿಪಿ) ಆದ್ಯತೆ ನೀಡಿದ್ದು, ಮಾತೃತ್ವ ಸುರಕ್ಷತಾ ಯೋಜನೆಯಲ್ಲಿ ಗರ್ಭಿಣಿ ಯರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಪ್ರತಿ ತಿಂಗಳ 9ನೇ ತಾರೀಕಿನಂದು ಖಾಸಗಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸೂತಿ ತಜ್ಞರು ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದು, ಗರ್ಭಿಣಿಯರು ಹಾಗೂ ತಾಯಂದಿರ ತಪಾಸಣೆ ಮಾಡುತ್ತಿದ್ದಾರೆ. ಈವರೆಗೆ 4700 ಮಂದಿ ತಜ್ಞರು ಇದಕ್ಕಾಗಿ ಮುಂದೆ ಬಂದಿದ್ದಾರೆ. ಈವರೆಗೆ ಈ ಯೋಜನೆಯಡಿ ಒಂದು ಕೋಟಿ ಗೂ ಅಧಿಕ ಮಂದಿಯ ತಪಾಸಣೆ ಮಾಡಿದ್ದು, 5.5ಲಕ್ಷ ಮಂದಿ ಹೈ ರಿಸ್ಕ್ ಗರ್ಭಿಣಿಯರ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ ಎಂದರು. 

ಇನ್ನು ಕಡಿಮೆ ದರದಲ್ಲಿ ಔಷಧಿ ನೀಡುವ ‘ಅಮೃತ್ ದೀನ್‌ದಯಾಳ್’ ಯೋಜನೆಯಡಿ ದೇಶದ 108 ಕಡೆಗಳಲ್ಲಿ ಅಂಗಡಿಗಳನ್ನು ತೆರೆದಿದ್ದು, 50ಲಕ್ಷ ಮಂದಿ ಇದರ ಪ್ರಯೋಜನ ಪಡೆದು 469 ಕೋಟಿ ರೂ. ಮೌಲ್ಯದ ಔಷಧಿಗಳನ್ನು 211 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ. ಇದರಿಂದ ಔಷಧಿ ದರದಲ್ಲಿ ಶೇ.60ರಿಂದ 80ರಷ್ಟು ಉಳಿತಾಯ ಕಂಡುಬರುತ್ತಿದೆ. ಈ ಔಷಧಾಲಯಗಳಲ್ಲಿ ಈಗ ಬ್ರಾಂಡೆಡ್ ಔಷಧಿಗಳು ದೊರೆಯುತ್ತಿವೆ ಎಂದು ಸಚಿವ ನಡ್ಡ ತಿಳಿಸಿದರು.

ಪಿಪಿಪಿ ಮಾದರಿಯಡಿ ಉಡುಪಿಯಲ್ಲಿ ನಿರ್ಮಾಣಗೊಂಡಿರುವ ತಾಯಿ ಮಕ್ಕಳ ಆಸ್ಪತ್ರೆಯಿಂದ ಸಾಮಾನ್ಯರಿಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ ಎಂದು ಹಾರೈಸಿದರು. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಗೆ ಪೂರಕವಾಗಿ ಅದರಲ್ಲೂ ಉಡುಪಿ ಜಿಲ್ಲೆಗೆ ಕ್ರಿಯಾ ಯೋಜನೆ ಅನುಷ್ಠಾನ ವರದಿ ನೀಡಿದರೆ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಇನ್ನಷ್ಟು ಅನುದಾನ ನೀಡುವ ಭರವಸೆಯನ್ನೂ ಸಚಿವರು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಅತ್ಯಾಧು ನಿಕ ಸೌಕರ್ಯಗಳಿಂದ ಕೂಡಿರುವ ಆಸ್ಪತ್ರೆಯು ಒಟ್ಟು 200 ಬೆಡ್‌ಗಳನ್ನು ಹೊಂದಿದೆ. ಬಡವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಪಂಚತಾರಾ ಮಟ್ಟದ ಸೇವೆಗಳನ್ನು ನೀಡಲಿದೆ ಎಂದರು. ಈ ಹಿಂದಿನ 70 ಬೆಡ್‌ಗಳ ಹಾಜಿ ಅಬ್ದುಲ್ಲಾ ಆಸ್ಪತ್ರೆ ಶಿಥಿಲಗೊಂಡಿದ್ದು, ಅಲ್ಲಿ ಸಿಗುತಿದ್ದ ಎಲ್ಲಾ ಉಚಿತ ಸೇವೆಗಳೊಂದಿಗೆ ಪಂಚತಾರಾ ಮಟ್ಟದ ಸೌಲಭ್ಯಗಳನ್ನು ಈ ಆಸ್ಪತ್ರೆ ನೀಡಲಿದೆ ಎಂದವರು ಹೇಳಿದರು.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಹಾಗೂ ಬಿ.ಆರ್.ಎಸ್. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯ ಉಪಾಧ್ಯಕ್ಷೆ ಡಾ.ಸಿ.ಆರ್.ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ಯೋಜನೆಗಳ ಕುರಿತು ತಿಳಿಸಿದರು. ಕುಶಲ್ ಶೆಟ್ಟಿ ಸ್ವಾಗತಿಸಿ, ಡಾ.ವಿನ್ಸೆಂಟ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಬಿ.ಆರ್.ಶೆಟ್ಟಿ ಅವರೊಂದಿಗೆ ಶೀಘ್ರ ಒಪ್ಪಂದ
ಉಡುಪಿಯಲ್ಲಿದ್ದ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ 70 ಬೆಡ್‌ಗಳ ಆಸ್ಪತ್ರೆಯ ಜಾಗದಲ್ಲಿ 200 ಬೆಡ್‌ಗಳ ಅತ್ಯಾಧುನಿಕ ಕೂಸಮ್ಮ ಶಂಭ ಶೆಟ್ಟಿ ಸ್ಮಾಪಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿರುವ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಅವರ ಬಿ.ಆರ್.ಎಸ್ ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆ, ಇಲ್ಲಿ ಬಡಜನರಿಗೆ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ನೀಡುವ ಕುರಿತಂತೆ ಸರಕಾರದ ಮಟ್ಟದಲ್ಲಿ ಒಪ್ಪಂದ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

 

ಬಿ.ಆರ್.ಶೆಟ್ಟಿ ಅವರು ಈಗಾಗಲೇ ಅಂತಾರಾಷ್ಟ್ರೀಯ ಗುಣಮಟ್ಟದ 200 ಬೆಡ್‌ಗಳ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇದರಲ್ಲಿ ಹೊರರೋಗಿ ವಿಭಾಗ ಸೇರಿದಂತೆ ವಿವಿಧ ಸೇವೆಗಳು ಪ್ರಾರಂಭಗೊಳ್ಳಲಿವೆ. ಈಗಿರುವ ಆಸ್ಪತ್ರೆಯ ಜಾಗದಲ್ಲಿ ಶೆಟ್ಟಿ ಅವರು 400 ಬೆಡ್‌ಗಳ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಿದ್ದು, ಇದರಲ್ಲಿ ಬರುವ ಲಾಭದಿಂದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಉಚಿತ ಸೇವೆಯ ಭರವಸೆ ನೀಡಿದ್ದಾರೆ.
 

ಈಗ ಸರಕಾರಿ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಬಡಜನರಿಗೆ ಸಿಗುತಿದ್ದ ಎಲ್ಲಾ ಉಚಿತ ಸೇವೆಗಳು ಇಲ್ಲಿ ಸಿಗುವಂತೆ ಹಾಗೂ ಇಲ್ಲಿ ಪಂಚತಾರಾ ಸೌಲಭ್ಯ ದೊರೆಯುವಂತೆ ರಾಜ್ಯ ಸರಕಾರ ಖಂಡಿತ ನೋಡಿಕೊಳ್ಳಲಿದೆ ಎಂದು ಪ್ರಮೋದ್ ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News