ಕುಂದಾಪುರದ ಕೋಣಿಯಲ್ಲಿ ಹುಟ್ಟಿ ಬೆಳೆದ ಕಾಶಿನಾಥ್

Update: 2018-01-18 16:27 GMT

ಕುಂದಾಪುರ, ಜ. 18: ಅನಾರೋಗ್ಯದಿಂದ ಗುರುವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಮೂಲತಃ ಕುಂದಾಪುರದ ಕೋಣಿಯವರು. ಕೋಟೇಶ್ವರದ ಗೋಪಾಡಿಯ ಬೆಳ್ತಕ್ಕಿಯಲ್ಲಿ ಅವರ ಮೂಲ ಮನೆ ಈಗಲೂ ಇದೆ.

ಕುಂದಾಪುರದಲ್ಲಿ ಹೋಟೆಲ್ ಉದ್ಯಮ ಹಾಗೂ ಎತ್ತಿನ ಗಿರಣಿ ನಡೆಸುತ್ತಿದ್ದ ಕಾಶಿನಾಥ್ ಅವರ ತಂದೆ ಜಿ. ವಾಸುದೇವ ರಾವ್, ಬಳಿಕ ಬೆಂಗಳೂರಿನಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದ ಕೆಲಕಾಲ ಮಾತ್ರ ಕೋಣಿ ಯಲ್ಲಿ ವಾಸವಾಗಿದ್ದ ಕಾಶಿನಾಥ್, ನಂತರ ಇಲ್ಲಿನ ಮನೆ, ಜಾಗವನ್ನು ಮಾರಾಟ ಮಾಡಿ ಬೆಂಗಳೂರಿಗೆ ತೆರಳಿ ನೆಲೆಸಿದ್ದರು. ಮನೆ ಖರೀದಿಸಿದ್ದ ಸುನಂದ ಶೆಟ್ಟಿ ಆ ಜಾಗದಲ್ಲಿದ್ದ ಹತ್ತಿ ಮರ, ಬಾವಿ, ತುಳಸಿಕಟ್ಟೆಯನ್ನು ಉಳಿಸಿಕೊಂಡು ಈಗ ಹೊಸ ಮನೆ ಕಟ್ಟಿಕೊಂಡಿದ್ದಾರೆ.

1955ರ ಜ.7ರಂದು ಹುಟ್ಟಿದ ಕಾಶಿನಾಥ್, ನಂತರ ಕೋಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ದಾಖಲಾಗಿದ್ದರು. ಕೋಣಿ ಶಾಲೆಯಲ್ಲಿ ದಾಖಲಾತಿ ಪತ್ರದಲ್ಲಿ ಕಾಶಿನಾಥ್ ಹೆಸರು ಈಗಲೂ ಇದೆ. ಎರಡನೇ ತರಗತಿಯ ನಂತರ ಅವರು ತನ್ನ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಂದುವರಿಸಿದರು. ‘ಬಾಲ್ಯದಲ್ಲೇ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹಳಷ್ಟು ಆಸಕ್ತಿ ಹಾಗೂ ತೊಡಗಿಸಿಕೊಂಡಿದ್ದ ಕಾಶಿನಾಥ್ ವಿಜ್ಞಾನಿಯಾಗ ಬೇಕೆಂಬ ಕನಸು ಕಂಡಿದ್ದರು’ ಎನ್ನುತ್ತಾರೆ ಅರೊಂದಿಗೆ ಕಲಿತ ಸುಮತಿ ಕಾರಂತ್.

ಕಾಶಿನಾಥ್ ಮುಖ್ಯವಾಗಿ ಕರಾವಳಿಯ ಅನೇಕ ಪ್ರತಿಭಾನ್ವಿತರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಕುಂದಾಪುರ ತೆಕ್ಕಟ್ಟೆಯ ಉಪೇಂದ್ರ, ಸಂಗೀತ ನಿರ್ದೇಶಕ ವಿಟ್ಲ ಮೂಲದ ವಿ. ಮನೋಹರ್, ಉಪ್ಪುಂದದ ಓಂ ಗಣೇಶ್, ನಟಿ ಭವ್ಯ ಹೀಗೆ ಅನೇಕರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದರು.

‘ಕಾಶಿನಾಥ್ ತಾಯಿ ಬೆಂಗಳೂರಿನಲ್ಲಿದ್ದರೂ ಕುಂದಗನ್ನಡ ಮಾತನಾಡುತ್ತಿದ್ದರು. ಈ ಬಗ್ಗೆ ಕಾಶಿನಾಥ್ ಅವರಿಗೂ ವಿಶೇಷ ಒಲವು ಇತ್ತು. ಹಾಗಾಗಿ ಅವರ ಹಲವು ಚಿತ್ರಗಳಲ್ಲಿ ಕುಂದಾಪುರ ಕನ್ನಡವನ್ನು ಬಳಸಿಕೊಂಡಿದ್ದರು. 1988ರಲ್ಲಿ ತೆರೆ ಕಂಡ ‘ಅವಳೇ ನನ್ನ ಹೆಂಡಿತಿ’ ಚಿತ್ರದಲ್ಲಿ ಮೀಸೆ ಹೊತ್ತ ಗಂಡಸ್ಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಎಂಬ ಹಾಡಿಗೆ ನನ್ನ ಮೀಸೆಯೇ ಮೂಲ ಪ್ರೇರಣೆ’ ಎನ್ನುತ್ತಾರೆ ಕಾಶಿನಾಥ್‌ರ ಏಳು ಸಿನೆಮಾಗಳಲ್ಲಿ ನಟಿಸಿರುವ ಉಪ್ಪುಂದದ ಓಂ ಗಣೇಶ್.

ಬಾವಿಯ ನೀರು ಕೊಂಡೊಯ್ದಿದ್ದರು !
‘1994ರಲ್ಲಿ ಕಾಶಿನಾಥ್ ಅವರ ತಂದೆ ನಮಗೆ ಮನೆ ಮಾರಾಟ ಮಾಡಿದ್ದರು. ಮುಂದೆ ನಾವು ಹೊಸ ಮನೆ ಕಟ್ಟಿದಾಗ ಗೃಹ ಪ್ರವೇಶಕ್ಕೆ ಕಾಶಿನಾಥ್‌ರನ್ನು ಕರೆಯಲು ಬೆಂಗಳೂರಿಗೆ ಹೋಗಿದ್ದೆವು. ಅಲ್ಲಿ ಅವರು ನಮ್ಮೆಂದಿಗೆ ತುಂಬಾ ಹೊತ್ತು ಮಾತನಾಡಿದರು. ಆದರೆ ಅವರಿಗೆ ಗೃಹ ಪ್ರವೇಶಕ್ಕೆ ಬರಲು ಆಗಿರಲಿಲ್ಲ. ಕೆಲ ವರ್ಷಗಳ ಹಿಂದೆ ಬಸ್ರೂರಿನಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕಾಶಿನಾಥ್ ಇಲ್ಲಿಗೆ ಬಂದಿದ್ದರು. ಮನೆಯ ಬಾವಿಯ ನೀರನ್ನು ಸೇದಿ ಎರಡು ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿದ್ದರು. ಅದೇ ರೀತಿ ಸೀಯಾಳ ತೆಗಿಸಿ ಕುಡಿದಿದ್ದರು’ ಎಂದು ಸುನಂದ ಶೆಟ್ಟಿ ಸ್ಮರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News