×
Ad

ಕೃಷ್ಣ ಕಾರುಣ್ಯದಿಂದ ಪಂಚಮಪರ್ಯಾಯ: ಪೇಜಾವರ ಶ್ರೀ

Update: 2018-01-18 22:04 IST

ಉಡುಪಿ, ಜ.18: ಕೃಷ್ಣನ ಕಾರುಣ್ಯದಿಂದ ತನಗೆ ಐದು ಪರ್ಯಾಯಗಳಲ್ಲಿ ಪೂಜೆ ಮಾಡುವ ಅವಕಾಶ ಸಿಕ್ಕಿತು ಅಷ್ಟೆ ಎಂದು ಇಂದು ಬೆಳಗ್ಗೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಗೆ ಪರ್ಯಾಯ ಪೀಠದ ಅಧಿಕಾರವನ್ನು ಹಸ್ತಾಂತರಿಸಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಹೇಳಿದರು.

ಪಲಿಮಾರು ಶ್ರೀಗಳ ಪರ್ಯಾಯ ಪೀಠಾರೋಹಣ, ಅಧಿಕಾರ ಹಸ್ತಾಂತರ ದ ಧಾರ್ಮಿಕ ವಿಧಿವಿಧಾನಗಳು ಮುಗಿದ ಬಳಿಕ ರಾಜಾಂಗಣ ಭವ್ಯ ಆನಂದ ತೀರ್ಥ ಮಂಟಪದ ವೇದಿಕೆಯಲ್ಲಿ ನಡೆದ ಪರ್ಯಾಯ ದರ್ಬಾರ್‌ನಲ್ಲಿ ಹಾಲಿ ಪರ್ಯಾಯ ಮಠಾಧೀಶರು ಸನ್ಮಾನಿಸಿ ನೀಡಿದ ‘ಯತಿಕುಲ ಚಕ್ರವರ್ತಿ’ ಬಿರುದಿಗೆ ಅವರು ಪ್ರತಿಕ್ರಿಯಿಸಿದರು. ಇದು ಪುರುಷೋತ್ತಮ ಎಂಬ ಹೆಸರು ಇಟ್ಟುಕೊಳ್ಳುವಂತೆ. ವಾಸ್ತವದಲ್ಲಿ ಅವರು ಪುರುಷರಲ್ಲಿ ಉತ್ತಮ ಆಗಿರುತ್ತಾರೋ? ಎಂದು ಪೇಜಾವರ ಶ್ರೀ  ಪ್ರಶ್ನಿಸಿದರು. ಆಚಾರ್ಯ ಮಧ್ವರ ಭಕ್ತಿಗೆ ಒಲಿದ ಕಾರಣ ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಯಿತು. ದೇವರ ಆರಾಧನೆಯಿಂದ ಲೋಕಕಲ್ಯಾಣ ಸಾಧ್ಯವಾಗುತ್ತದೆ ಎಂದು ಪರ್ಯಾಯ ಪೀಠದಿಂದ ನಿರ್ಗಮಿಸಿದ ಶ್ರೀ ವಿಶ್ವೇಶತೀರ್ಥರು ಹೇಳಿದರು.

ಪೇಜಾವರಶ್ರೀಗಳನ್ನು ಆತ್ಮೀಯವಾಗಿ ಸನ್ಮಾನಿಸಿ, ಯತಿಕುಲ ಚಕ್ರವರ್ತಿ ಬಿರುದು ನೀಡಿ ಗೌರವಿಸಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ದ್ವಾರಕೆಯಿಂದ ನೌಕೆಯ ಮೂಲಕ ಬಂದ ಗೋಪಿಚಂದನ ಕೃಷ್ಣನಿಗೆ ಎರಡನೇ ಬಾರಿ ಮುಟ್ಟಿ ಪೂಜಿಸುವ ಅವಕಾಶ ಸಿಕ್ಕಿರುವುದಕ್ಕೆ ನಾನು ಬೀಗುವುದಿಲ್ಲ. ಆದರೆ ಅದೇ ಕೃಷ್ಣನನ್ನು ಐದು ಬಾರಿ ಪೂಜಿಸುವ ಅಪೂರ್ವ ಅವಕಾಶ ಪಡೆದ ಪೇಜಾವರ ಶ್ರೀಗಳ ಕೈಯಿಂದ ಈ ಅಧಿಕಾರವನ್ನು ಪಡೆದಿರುವುದಕ್ಕಾಗಿ ನಾನು ಬೀಗುತ್ತೇನೆ ಎಂದರು.

ಪರ್ಯಾಯ ಹೇಗಿರಬೇಕು ಎಂಬುದನ್ನು ಗುರುಗಳು ತೋರಿಸಿಕೊಟ್ಟಿದ್ದಾರೆ. ಯತಿವರೇಣ್ಯ ವಾದಿರಾಜರು ಪೇಜಾವರ ಶ್ರೀಗಳ ಮೂಲಕ ಐದನೇ ಪರ್ಯಾಯವನ್ನು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ತನ್ನ ಪರ್ಯಾಯಾವಧಿಯಲ್ಲಿ ಎಲ್ಲಾ ಶ್ರೀಗಳ ಸಹಕಾರವನ್ನು ಅವರು ಕೋರಿದರು.
ದರ್ಬಾರ್‌ನಲ್ಲಿ ಉಪಸ್ಥಿತರಿದ್ದ ಎಲ್ಲಾ ಆರು ಮಂದಿ ಮಠಾಧಿಪತಿಗಳು ಆಶೀರ್ವಚನ ನೀಡಿದರು. ಪರ್ಯಾಯ ಮಠದ ಸನ್ಮಾನಕ್ಕೆ ಭಾಜನರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಈ ಪರ್ಯಾಯದ ಪ್ರತಿದಿನವೂ ಕೃಷ್ಣನಿಗೆ ಒಂದು ಲಕ್ಷ ತುಳಸಿ ಅರ್ಚನೆ ಮಾಡುವ ಸಂಕಲ್ಪ ಮಾಡಿರುವ ಪಲಿಮಾರು ಶ್ರೀಗಳು ಬಳಸಿದ ತುಳಸಿಯನ್ನು ತನಗೆ ನೀಡಿದರೆ ಅದರಿಂದ ರಸ ತೆಗೆದು ಆಯುರ್ವೇದಕ್ಕೆ ಬಳಸಿಕೊಳ್ಳುವುದಾಗಿ ಹೇಳಿದರು.
 

ಹೆತ್ತ ತಾಯಿಗೆ ಸಾಷ್ಟಾಂಗ ನಮಸ್ಕಾರ
ಎರಡನೇ ಬಾರಿಗೆ ಪರ್ಯಾಯ ಪೀಠವನ್ನೇರಿಸಿದ ತನ್ನ ಮಗನ ವೈಭವನ್ನು ಕಣ್ತುಂಬಿಸಿಕೊಳ್ಳಲು ಕಟೀಲು ಸಮೀಪದ ಶಿಬರೂರಿನಿಂದ ಆಗಮಿಸಿದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರ ಪೂರ್ವಾಶ್ರಮದ ತಾಯಿ ಕಸ್ತೂರಿ ಅಮ್ಮ ಮಗನನ್ನು ಹರಸಲು ವೇದಿಕೆ ಏರಿದಾಗ ಶ್ರೀಗಳು ಸಾಷ್ಟಾಂಗ ನಮಸ್ಕಾರ ಮಾಡಿದರು.

 

ಇನ್ನೊಬ್ಬರ ನೆರವಿನಿಂದ ನಿಧಾನವಾಗಿ ವೇದಿಕೆಯನ್ನೇರಿ ಬಂದ ತಾಯಿಯನ್ನು ನೋಡಿದೊಡನೆ ಶ್ರೀಗಳು ದರ್ಬಾರ್ ಪೀಠದಿಂದ ಇಳಿದು ಆಕೆ ಎದುರು ಸಾಷ್ಟಾಂಗವಾಗಿ ನಮಿಸಿ ಆಶೀರ್ವಾದ ಬೇಡಿದರು. ಬಳಿಕ ಅವರಿಗೆ ಗೌರವವನ್ನು ಅರ್ಪಿಸಿ ಬೀಳ್ಕೊಟ್ಟರು.

ಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳಿಗೆ ತಮ್ಮ ಪೂರ್ವಾಶ್ರಮದ ತಾಯಿಯಿಂದ ಆಶೀರ್ವಾದ ಪಡೆಯಲು ಶಾಸ್ತ್ರದಲ್ಲಿ ಅವಕಾಶವಿದೆ ಎಂದು ವಿದ್ವಾಂಸ ರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News