52 ಲಕ್ಷ ರೂ. ವೆಚ್ಚದ ಸರಕಾರಿ ಕ್ಯಾಂಟೀನ್ ಕೆಡವಿ ಕೇಂದ್ರ ಸಚಿವರ ಕಚೇರಿ ನಿರ್ಮಾಣ

Update: 2018-01-18 16:52 GMT
ನಿರ್ಮಾಣ ಹಂತದಲ್ಲಿರುವ ವಿಜಯ್ ಗೋಯೆಲ್ ಕಚೇರಿ

ಹೊಸದಿಲ್ಲಿ, ಜ.18: ಕಳೆದ ವರ್ಷವಷ್ಟೇ 52 ಲಕ್ಷಕ್ಕೂ ಹೆಚ್ಚು ಮೊತ್ತದಲ್ಲಿ ನವೀಕರಿಸಲ್ಪಟ್ಟ ಸರಕಾರಿ ನೌಕರರ ಕ್ಯಾಂಟೀನನ್ನು ಈಗ ಕೆಡವಿ ಆ ಸ್ಥಳದಲ್ಲಿ ಕೇಂದ್ರ ಸಚಿವ ವಿಜಯ್ ಗೋಯೆಲ್ ಕಚೇರಿ ನಿರ್ಮಿಸಲಾಗುತ್ತಿದೆ. ಕಚೇರಿಗೆ ಇದುವರೆಗೆ 1 ಕೋಟಿ ರೂ. ಗೂ ಹೆಚ್ಚು ವೆಚ್ಚ ಮಾಡಲಾಗಿದ್ದು ಪೂರ್ಣಗೊಂಡಾಗ ಈ ವೆಚ್ಚ ಇನ್ನಷ್ಟು ಹೆಚ್ಚಲಿದೆ.

ಸರ್ದಾರ್ ಪಟೇಲ್ ಭವನದಲ್ಲಿರುವ ಸರಕಾರಿ ನೌಕರರ ಕ್ಯಾಂಟೀನನ್ನು ಕೆಡವಿ ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಹಾಯಕ ಸಚಿವ ವಿಜಯ್ ಗೋಯೆಲ್ ಕಚೇರಿಯನ್ನು ನಿರ್ಮಿಸುವ ಕಾರ್ಯವನ್ನು ಕೇಂದ್ರ ಲೋಕಸೇವಾ ವಿಭಾಗಕ್ಕೆ (ಸಿಪಿಡಬ್ಲೂಡಿ) ವಹಿಸಿಕೊಡಲಾಗಿದೆ. ಬಹುತೇಕ ಕಾರ್ಯಗಳು ಮುಗಿದಿದ್ದು ಇದುವರೆಗೆ 1.09 ಕೋಟಿ ರೂ. ವೆಚ್ಚವಾಗಿದೆ. ಈಗಾಗಲೇ ಮುಗಿಸಿರುವ ಕಾಮಗಾರಿಗಳಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಸಚಿವರ ಆಪ್ತಸಿಬ್ಬಂದಿ ಸೂಚಿಸಿದ್ದಾರೆ. ಈಗ ಅಳವಡಿಸಲಾಗಿರುವ ಕಾನ್ಫರೆನ್ಸ್ ಟೇಬಲ್‌ನ ಬದಲು ವೃತ್ತಾಕಾರದ ಗಾಜಿನ ಹೊದಿಕೆಯಿರುವ ಮೇಜು, ಸ್ಟೈನ್‌ಲೆಸ್ ಸ್ಟೀಲ್‌ನ ಕುರ್ಚಿಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಸಚಿವರ ಕುರ್ಚಿ, ಕಿಟಕಿಯ ರೋಲರ್ ಬೆಂಡ್‌ಗಳು, , ಕಾರಿಡಾರ್‌ನ ಬಾಗಿಲುಗಳನ್ನು ಬದಲಿಸಲು ಸೂಚನೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲಾ ಕಾಮಗಾರಿ ಮುಗಿದಾಗ ವೆಚ್ಚ ಇನ್ನಷ್ಟು ಏರಲಿದೆ ಎಂದವರು ಹೇಳಿದ್ದಾರೆ.

ಆದರೆ ಕ್ಯಾಂಟೀನನ್ನು ನೆಲಸಮ ಮಾಡಿ ತನ್ನ ಕಚೇರಿಯನ್ನು ನಿರ್ಮಿಸಲಾಗುತ್ತಿದೆ ಹಾಗೂ ಇದರ ವೆಚ್ಚ 1 ಕೋಟಿ ರೂ.ಗೂ ಹೆಚ್ಚಾಗಲಿದೆ ಎಂಬ ಬಗ್ಗೆ ತನಗೇನೂ ತಿಳಿಯದು ಎಂದು ಸಚಿವ ಗೋಯೆಲ್ ತಿಳಿಸಿದ್ದಾರೆ. ಹೊಸ ಕಚೇರಿ ನಿರ್ಮಿಸುವ ನಿರ್ಧಾರ ತಾನು ಕೈಗೊಂಡಿಲ್ಲ. ಅಲ್ಲದೆ ಅದರ ವೆಚ್ಚದ ಬಗ್ಗೆಯೂ ಮಾಹಿತಿಯಿಲ್ಲ. ಆದರೆ ಕಚೇರಿ ಕೆಲ ದಿನದಲ್ಲೇ ಪೂರ್ಣಗೊಳ್ಳಲಿದೆ ಎಂಬುದು ಮಾತ್ರ ತಿಳಿದಿದೆ ಎಂದು ಸಚಿವ ಗೋಯೆಲ್ ಹೇಳಿದ್ದಾರೆ.

ಹಲವು ಸಚಿವಾಲಯದ ಸಿಬ್ಬಂದಿಗಳಿಗೆ ಊಟ, ಉಪಾಹಾರ ಪೂರೈಸುತ್ತಿದ್ದ ಈ ಕ್ಯಾಂಟೀನನ್ನು ಈಗ ತಾತ್ಕಾಲಿಕವಾಗಿ ಪಾರ್ಕಿಂಗ್ ಸ್ಥಳದ ಬಳಿಯ ನೆಲ ಅಂತಸ್ತಿನ ಕೋಣೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಜಾಗದ ಕೊರತೆಯ ಕಾರಣ ಕೆಲವು ಮೇಜು, ಕುರ್ಚಿಗಳನ್ನು ತೆರೆದ ಬಯಲಿನಲ್ಲಿ ಇರಿಸಲಾಗಿದೆ. ಕ್ಯಾಂಟೀನ್ ಜಾಗದಲ್ಲಿ ಸಚಿವ ಗೋಯೆಲ್ ಕಚೇರಿ ನಿರ್ಮಿಸುವ ಪ್ರಸ್ತಾವನೆಗೆ ಆರಂಭದಲ್ಲಿ ವಿರೋಧ ಸೂಚಿಸಲಾಗಿತ್ತು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News