ಸೆಲ್ಕೋಗೆ ಜಾಯೆದ್ ಫ್ಯೂಚರ್ ಎನರ್ಜಿ ವಾರ್ಷಿಕ ಪ್ರಶಸ್ತಿ

Update: 2018-01-18 17:09 GMT

ಉಡುಪಿ, ಜ.18: ಅಬುಧಾಬಿ ಸುಸ್ಥಿರ ಸಪ್ತಾಹದ ಅಂಗವಾಗಿ ನೀಡುವ ಪ್ರತಿಷ್ಠಿತ ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ ಪ್ರಶಸ್ತಿಯನ್ನು ಇತ್ತೀಚೆಗೆ ಅಬುಧಾಬಿಯಲ್ಲಿ ಸೆಲ್ಕೋ ಫೌಂಡೇಶನ್‌ನ ಸಂಸ್ಥಾಪಕ ಡಾ.ಹರೀಶ್ ಹಂದೆಯ ವರಿಗೆ ನೀಡಿ ಗೌರವಿಸಲಾಯಿತು.

ನವೀಕರಿಸಬಹುದಾದ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ನಡೆಸಿದ ಸಾಧನೆ, ನೂತನ ಆವಿಷ್ಕಾರ, ಇವುಗಳ ದೂರಗಾಮಿ ಪರಿಣಾಮ, ಬದಲಾವಣೆಯ ಹರಿಕಾರ ನಾಗಿ ವಹಿಸಿದ ಮುಂದಾಳತ್ವ ಈ ಕೆಲವು ಮಾನದಂಡಗಳನ್ನು ಆದರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಸಂಯುಕ್ತ ಅರಬ್ ಎಮಿರೇಟ್ಸ್  ಪಿತಾಮಹ ಹಾಗೂ ಅಬುಧಾಬಿ ಆಳ್ವಿಕೆ ನಡೆಸಿದ ಶೇಕ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಅವರ ಮಗ ಅಬುಧಾಬಿ ರಾಜ ಹಾಗೂ ಯುಎಇ ಮಿಲಿಟರಿ ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ 20008ರಲ್ಲಿ ಸ್ಥಾಪಿಸಿದ್ದಾರೆ.

ಸೆಲ್ಕೋ ಫೌಂಡೇಶನ್ 2010ರಲ್ಲಿ ಸ್ಥಾಪನೆಯಾದ ಸೇವಾ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯದ ಎಲ್ಲೆಡೆ ಕಾರ್ಯ ನಿರ್ವಹಿಸುತ್ತಿದೆ. ಸೆಲ್ಕೋ ತಳಮಟ್ಟದಲ್ಲಿ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗೂ ಸುಸ್ಥಿರ ಇಂಧನ ಬಡವರಿಗೆ ಪೂರೈಸುವಲ್ಲಿ ವಿಶ್ವದಲ್ಲೇ ಗುರುತಿಸಿಕೊಂಡಿದೆ. ಈ ಪ್ರಶಸ್ತಿ 1.5 ಮಿಲಿಯನ್ ಡಾಲರ್ ಮೊತ್ತವನ್ನು ಹೊಂದಿದ್ದು ಈ ಪ್ರಶಸ್ತಿ ಪಡೆದ ಭಾರತದ ಏಕೈಕ ಸಂಸ್ಥೆ ಎಂಬ ಮಾನ್ಯತೆ ಪಡೆದಿದೆ. 12 ದೇಶಗಳ 29 ಅರ್ಜಿಗಳು ಪ್ರಶಸ್ತಿಗಾಗಿ ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News