×
Ad

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದರೆ ಕಠಿಣ ಕ್ರಮ: ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್

Update: 2018-01-19 20:59 IST

ಮಂಗಳೂರು, ಜ.19: ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಿಲ್ಲ. ಜನರು ಶಾಂತಿ ಬಯಸುತ್ತಿದ್ದು, ಮತೀಯ ಶಕ್ತಿಗಳ ಕೃತ್ಯಕ್ಕೆ ಸ್ಪಂದಿಸುತ್ತಲೂ ಇಲ್ಲ. ಅದಕ್ಕೆ ಇತ್ತೀಚೆಗೆ ನಡೆದ ದೀಪಕ್ ರಾವ್ ಮತ್ತು ಬಶೀರ್ ಹತ್ಯೆ ಪ್ರಕರಣವೇ ಸಾಕ್ಷಿ. ಆದರೆ, ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮಂಗಳೂರಿನ ಘಟನೆಗಳಿಗೆ ಮತೀಯ ಬಣ್ಣ ಬಲಿಯಲಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ವಾಟ್ಸ್‌ಆ್ಯಪ್‌ನ ಕೆಲವು ಗ್ರೂಪ್‌ಗಳ ಅಡ್ಮಿನ್‌ಗಳು ವಿದೇಶದಲ್ಲಿದ್ದು, ಅವರ ಮೇಲೆ ಕಾನೂನು ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ)ಯು ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದ.ಕ.ಜಿಲ್ಲೆಯು ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದೆ. ಅದರಲ್ಲೂ ಬ್ಯಾರಿ ಸಮುದಾಯದ ಕೊಡುಗೆ ಅಪಾರ. ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಹೊರ ಜಿಲ್ಲೆ, ರಾಜ್ಯದ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿದ್ದಾರೆ. ದೂರದಿಂದ ಇಲ್ಲಿಯ ಆಸ್ಪತ್ರೆಗಳಿಗೆ ಬರುತ್ತಾರೆ. ಇಲ್ಲಿನ ಆಸ್ಪತ್ರೆಗಳು ಉತ್ತಮ ಸೇವೆ ನೀಡುತ್ತಿವೆ. ಅರ್ಧ ಕೇರಳವೇ ಮಂಗಳೂರನ್ನು ಆಶ್ರಯಿಸಿದೆ. ಈ ಮಧ್ಯೆ ಕೆಲವು ಸಣ್ಣಪುಟ್ಟ ಘಟನೆಗಳು ಕೂಡಾ ವಿಜೃಂಭಿಸುತ್ತಿವೆ. ಪೊಲೀಸ್ ಇಲಾಖೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರೂ ಋಣಾತ್ಮಕವಾಗಿ ತೋರಿಸುತ್ತಿವೆ. ಅಪರಾಧ ಪ್ರಕರಣಗಳಿಗೂ ಕಡಿವಾಣ ಹಾಕಲಾಗುತ್ತಿವೆ. ಆದರೂ ಮಂಗಳೂರಿನಲ್ಲಿ ಮಾತ್ರ ಅಪರಾಧ ಪ್ರಕರಣವನ್ನು ವಿಜೃಂಭಿಸಲಾಗುತ್ತಿದೆ. ಯಾವ ಉದ್ದೇಶಕ್ಕೆ ಇಂತಹ ಸುಳ್ಳು ಸುದ್ದಿ, ಸಂದೇಶ ರವಾನಿಸಲಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು.

ಜಿಲ್ಲೆಯ ಶೇ. 99 ಮಂದಿ ಶಾಂತಿಪ್ರಿಯರು. ಕೇವಲ ಶೇ. 1ರಷ್ಟು ಮಂದಿ ಮಾತ್ರ ಶಾಂತಿ ಕದಡುತ್ತಿದ್ದಾರೆ. ರೌಡಿಗಳ ನಡುವಿನ ಕಾಳಗಕ್ಕೆ ಶಾಂತಿಪ್ರಿಯ ಜನರು ತಲೆಕೆಡಿಸಿಕೊಳ್ಳದಿದ್ದರೂ ಇಲ್ಲಿನ ಮಾಧ್ಯಮಗಳು ತಲೆಕೆಡಿಸಿದವು. ಇದು ಅಪಾಯಕಾರಿಯಾಗಿದೆ ಎಂದು ಟಿ.ಆರ್.ಸುರೇಶ್ ವಿಶ್ಲೇಷಿಸಿದರು.

ನಗರದಲ್ಲಿ ಡ್ರಗ್ಸ್ ಜಾಲ ಕಡಿವಾಣಕ್ಕೆ ಕ್ರಮ ಜರಗಿಸಲಾಗುತ್ತಿದೆ. ಕ್ರಿಮಿನಲ್‌ಗಳಲ್ಲದೆ ವಿದ್ಯಾರ್ಥಿಗಳು ಕೂಡ ಇದರ ದಾಸರಾಗುತ್ತಿದ್ದಾರೆ. ಇದನ್ನು ತಡೆಯಲು ಹಿಂದೆ ಸಿಸಿಬಿ ಮಾತ್ರವಿತ್ತು. ಈಗ ಪ್ರತ್ಯೇಕ ಠಾಣೆಯಲ್ಲದೆ ಮೂರು ಉಪವಿಭಾಗಗಳಲ್ಲಿ ಪ್ರತ್ಯೇಕ ತಂಡವೂ ಇದೆ. ಈಗಾಗಲೆ ಸಾಕಷ್ಟು ಮಂದಿಯನ್ನು ಬಂಧಿಸಿ ಕ್ರಮ ಜರಗಿಸಲಾಗಿದೆ. ಮುಂದಿನ ದಿನಗಳಲ್ಲಿ ‘ಮಂಗಳೂರು ಡ್ರಗ್‌ಲೆಸ್’ ಮಾಡುವುದು ಇಲಾಖೆಯ ಗುರಿಯಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕಿದೆ ಎಂದ ಟಿ.ಆರ್. ಸುರೇಶ್, ರೌಡಿ ಚಟುವಟಿಕೆಗಳನ್ನು ತಡೆಯಲು ಗೂಂಡಾ ಹಾಗೂ ಭದ್ರತಾ ಪ್ರಕರಣ ದಾಖಲಿಸಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಸಿಸಿಐ ಹಾಜಿ ಎಸ್.ಎಂ. ರಶೀದ್ ಸ್ವಾಗತಿಸಿದರು. ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ಮನವಿಯನ್ನು ಬಿಸಿಸಿಐ ಉಪಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ವಾಚಿಸಿದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್, ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಸಿಸಿಐ ಪದಾಧಿಕಾರಿಗಳಾದ ನಿಸಾರ್ ಮುಹಮ್ಮದ್, ಎ.ಕೆ. ನಿಯಾಝ್, ಡಾ. ಯು.ಟಿ.ಇಫ್ತಿಕಾರ್, ಬಿ.ಎಂ.ಮುಮ್ತಾಝ್ ಅಲಿ, ಬಿ.ಎ. ನಝೀರ್, ಅಸ್ಗರ್ ಅಲಿ ಮತ್ತಿತರರು ಪಾಲ್ಗೊಂಡಿದ್ದರು. ಬಿಸಿಸಿಐ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ವಂದಿಸಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಅಂತಾರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ ಮಂಗಳೂರು ನಗರವು ಜೀವನ ಗುಣಮಟ್ಟದಲ್ಲಿ ಜಗತ್ತಿನಲ್ಲೇ 48ನೆ ಸ್ಥಾನದಲ್ಲಿದೆ. ಟಾಪ್ 50 ನಗರಗಳ ಪೈಕಿ ಮಂಗಳೂರು ದೇಶದ ಏಕೈಕ ನಗರವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ 12ನೆ ಸ್ಥಾನ ಪಡೆದಿದೆ. ಇಷ್ಟೆಲ್ಲಾ ಸಾಧನೆಗೈದಿರುವ ಮಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಘಟನೆಗಳು ನಗರಕ್ಕೊಂದು ಕಪ್ಪುಚುಕ್ಕೆಯಾಗಿದೆ. ಮತೀಯ ಶಕ್ತಿಗಳ ಗೂಂಡಾಗಿರಿಯಿಂದ ಇಲ್ಲಿನ ಜನರ ಬದುಕು ಅತಂತ್ರವಾಗಿದೆ. ವ್ಯಾಪಾರ-ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿವೆ. ಇದಕ್ಕೆ ಕಡಿವಾಣ ಹಾಕಲು ಎಲ್ಲರೂ ಶ್ರಮಿಸಬೇಕಿದೆ.
- ಯೆನೆಪೊಯ ಅಬ್ದುಲ್ಲ ಕುಂಞಿ, ಕುಲಾಧಿಪತಿ, ಯೆನೆಪೊಯ ವಿವಿ, ಮಂಗಳೂರು

ಪೊಲೀಸರು ಮತ್ತು ಕ್ರಿಮಿನಲ್‌ಗಳ ಮಧ್ಯೆ ಸಂಬಂಧ?

ಕ್ರಿಮಿನಲ್‌ಗಳು ಠಾಣೆಗಳಿಗೆ ಭಯದಿಂದ ಕಾಲಿಡುತ್ತಿಲ್ಲ. ಸಂಬಂಧಿಕರ ಮನೆಗೆ ತೆರಳಿದಂತೆ ರಾಜಾರೋಷವಾಗಿ ಹೋಗುತ್ತಿದ್ದಾರೆ. ಇದರಿಂದ ತಳಮಟ್ಟದ ಪೊಲೀಸರು ಮತ್ತು ಕ್ರಿಮಿನಲ್‌ಗಳ ಮಧ್ಯೆ ಸಂಬಂಧವಿದೆಯೋ ಎಂಬ ಶಂಕೆ ಸಾರ್ವಜನಿಕರಿಗೆ ಕಾಡುತ್ತಿದೆ. ಹಾಗಾಗಿ ಪೊಲೀಸ್ ಮತ್ತು ಕ್ರಿಮಿನಲ್‌ಗಳ ಮಧ್ಯೆ ಅಂತರವಿರಲಿ ಎಂದು ಶಾಂತಿ ಪ್ರಕಾಶನದ ನಿರ್ದೇಶಕ ಮುಹಮ್ಮದ್ ಕುಂಞಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಪರಾಧ ಚಟುವಟಿಕೆಗಳ ಬಗ್ಗೆ ಅಪರಾಧಿಗಳಿಂದ ತಿಳಿಯಬೇಕಿದೆ. ಹಾಗಾಗಿ ಪೊಲೀಸರು ಅವರೊಂದಿಗೆ ಬೆರೆಯುವುದು ಅನಿವಾರ್ಯವಾಗಿದೆ. ಆದರೆ, ಅದು ಇಲಾಖೆಯ ನೀತಿ-ನಿಯಮದ ಮಿತಿಯೊಳಗಿರಬೇಕು. ಅದಕ್ಕಿಂತ ಗಾಢವಾದರೆ ಸಂಬಂಧಪಟ್ಟ ಪೊಲೀಸರ ಮೇಲೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದರು.

ಸಂವಾದದಲ್ಲಿ ರಫೀಉದ್ದೀನ್ ಕುದ್ರೋಳಿ, ಹಿದಾಯ ಫೌಂಡೇಶನ್‌ನ ಖಾಸಿಮ್ ಅಹ್ಮದ್, ನಾಸಿರ್ ಲಕ್ಕಿಸ್ಟಾರ್, ಹೈದರ್ ಪರ್ತಿಪ್ಪಾಡಿ, ಮಾಜಿ ಮೇಯರ್ ಕೆ. ಅಶ್ರಫ್, ಅಬ್ದುಲ್ ಖಾದರ್ ಫರಂಗಿಪೇಟೆ ಮತ್ತಿತರರು ಪಾಲ್ಗೊಂಡರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News