×
Ad

ಮೀನುಗಾರರಿಗೆ ಸಮಗ್ರ ಮೀನುಗಾರಿಕಾ ನೀತಿ ಅಗತ್ಯ: ಡಾ. ಜಿ. ಶಂಕರ್

Update: 2018-01-19 21:02 IST

ಮಂಗಳೂರು, ಜ.19: ಟ್ರಾಲ್‌ಬೋಟ್, ಆಳ ಸಮುದ್ರಗಾರಿಕೆ ಬೋಟ್, ಲೈಟ್ ಫಿಶಿಂಗ್ ಬೋಟ್‌ಗಳ ನಡುವಿನ ಗೊಂದಲ ನಿವಾರಿಸುವಂತಹ ಸಮಗ್ರ ಮೀನುಗಾರಿಕಾ ನೀತಿಯ ಅಗತ್ಯವಿದೆ. ಈ ಮೂಲಕ ಮುಂದಿನ ಮೀನುಗಾರಿಕಾ ಪೀಳಿಗೆಗೆ ನೆರವಾಗಬೇಕು ಎಂದು ಉಡುಪಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದರು.

ಅವರು ಶುಕ್ರವಾರ ನಗರದ ಮುಳಿಹಿತ್ಲುವಿನ ದ.ಕ.ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಸಭಾಂಗಣದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ, ಮೋಗವೀರ ಯುವ ಸಂಘಟನೆ ಉಡುಪಿ, ಮಣಿಪಾಲ ವಿಶ್ವವಿದ್ಯಾಲಯ ಮಣಿಪಾಲ ಇವರ ಸಹಯೋಗದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಸಹಕಾರದೊಂದಿಗೆ ನಡೆದ ಆರೋಗ್ಯ ಸುರಕ್ಷಾ ಕಾರ್ಡ್‌ಗಳ ವಿತರಣೆ, ಸಂಸ್ಥೆಯ ಗ್ರಾಹಕರಿಗೆ ಪ್ರೋತ್ಸಾಹ ಧನ, ಮೀನುಗಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೀನುಗಾರ ಸಮುದಾಯಕ್ಕೆ ಅಂಬಿಗರ ಚೌಡಯ್ಯ ನಿಗಮವೊಂದು ಸ್ಥಾಪನೆಯಾಗಬೇಕು. ಸಿಆರ್‌ಝೆಡ್ ಸಮಸ್ಯೆಯಿಂದ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದಕ್ಕೊಂದು ಪರಿಹಾರ ಸಿಗಬೇಕು. ರಾಜ್ಯ ಸರಕಾರ ಈಗಾಗಲೇ ಶೆಡ್ಯುಲ್ ಟ್ರೈಬ್ ಪಟ್ಟಿಯಲ್ಲಿ ಮೊಗವೀರ ಸಮುದಾಯವನ್ನು ಪರಿಗಣಿಸಿ ಕೇಂದ್ರಕ್ಕೆ ಸಲ್ಲಿಸುತ್ತಿದೆ ಅದಕ್ಕೆ ಕೇಂದ್ರದಲ್ಲಿ ಒತ್ತಡ ಹಾಕುವ ಕಾರ್ಯವನ್ನು ಸಂಸದರು ಮಾಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ವಿತರಣೆ ಮಾಡಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮೀನುಗಾರ ಮಹಿಳೆಯರ ದುಡಿತವೇ ಇಡೀ ಮಹಿಳಾ ಸಮಾಜಕ್ಕೆ ದುಡಿಯುವ ಮೌಲ್ಯವನ್ನು ಕಲಿಸಿಕೊಟ್ಟಿದೆ ಎಂದರು.

ಸಾಮಾಜಿಕ ನ್ಯಾಯ ಬದ್ಧತೆ ಇರುವ ಮೊಗವೀರ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದೆ. ಮೀನುಗಾರ ಮುಖಂಡರು ಸೇರಿಕೊಂಡು ಒಗ್ಗಟ್ಟಿನಿಂದ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದರೆ ಅದರ ಕುರಿತು ಕ್ರಮ ಕೈಗೊಳು್ಳವ ಕೆಲಸ ಮಾಡಬಹುದು ಎಂದರು.
ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ್ ಕರ್ಕೆರಾ, ಉಡುಪಿ ಜಿಲ್ಲೆಯ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ್ ಕರ್ಕೆರಾ, ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್, ಕೆಎಂಸಿಯ ರವಿರಾಜ್, ಸಾಹೀಲ್ ಸಿದ್ದೀಕ್, ಮೊಗವೀರ ಮುಖಂಡರಾದ ಜಯಾ ಕೋಟ್ಯಾನ್, ಬೇಬಿ ಎಸ್ ಸಾಲ್ಯಾನ್, ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ ಮೊದಲಾದವರು ಉಪಸ್ಥಿತರಿದ್ದರು.

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎಸ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News