×
Ad

ಪೋಷಕರು, ಶಿಕ್ಷಕರಿಗೆ ಅರಿವು ಕಾರ್ಯಕ್ರಮ: ಎಸ್ಪಿ ಲಕ್ಷ್ಮಣ್ ನಿಂಬರ್ಗಿ

Update: 2018-01-19 21:53 IST

ಉಡುಪಿ, ಜ.19: ಜಿಲ್ಲೆಯಲ್ಲಿ ಅಪ್ರಾಸ್ತ ವಯಸ್ಕರಿಂದ ವಾಹನ ಚಲಾವಣೆಯ ಕುರಿತಂತೆ ಅವರು ಕಲಿಯುತ್ತಿರುವ ಶಾಲಾ-ಕಾಲೇಜುಗಳಿಗೆ ತೆರಳಿ ಅಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಿಗೂ ಕಾನೂನಿನ ಅರಿವು ಮೂಡಿಸುವ ಹೊಸ ಬೀಟ್ ಪೊಲೀಸಿಂಗ್ ವ್ಯವಸ್ಥೆಯನ್ನು ಫೆಬ್ರವರಿ ಕೊನೆಯೊಳಗೆ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರ್ಗಿ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಇಂದು ಸಾರ್ವಜನಿಕರೊಂದಿಗೆ ನಡೆಸಿದ ಎರಡನೇ ಫೋನ್-ಇನ್ ಕಾರ್ಯಕ್ರಮದಲ್ಲಿ ಬ್ರಹ್ಮಾವರದಿಂದ ಕರೆ ಮಾಡಿದವರಿಗೆ ಉತ್ತರಿ ಸಿದ ಬಳಿಕಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

18 ವರ್ಷದೊಳಗಿನ ಅಪ್ರಾಪ್ತರು ವಾಹನ ಚಲಾಯಿಸುವ ಕುರಿತಂತೆ ಮಕ್ಕಳ ಪೋಷಕರು ಹಾಗೂ ಆತ ಕಲಿಯುವ ಶಾಲಾ-ಕಾಲೇಜುಗಳ (ಹೈಸ್ಕೂಲ್ ಹಾಗೂ ಪಿಯುಸಿ) ಶಿಕ್ಷಕರಿಗೂ ಕಾನೂನಿನ ತಿಳುವಳಿಕೆ ನೀಡಬೇಕಾಗಿದೆ. ಇದಕ್ಕಾಗಿಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಈ ವ್ಯವಸ್ಥೆಯಲ್ಲಿ ಪೊಲೀಸರು ತಮ್ಮ ವ್ಯಾಪ್ತಿಯ ಶಾಲೆ, ಕಾಲೇಜಿಗೆ ತೆರಳಿ ಅಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಿಗೆ ಸರಳ ಕಾನೂನು ಮಾಹಿತಿ ನೀಡಲಿದ್ದಾರೆ. ಈ ಜಾಗೃತಿ ಕಾರ್ಯಕ್ರಮಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಶುಕ್ರವಾರ ಪೋನ್‌ಇನ್‌ನಲ್ಲಿ ಒಟ್ಟು 16 ಕರೆಗಳನ್ನು ಅವರು ಸ್ವೀಕರಿಸಿದರು. ಉಡುಪಿಯಿಂದ ಮಹಿಳೆಯೊಬ್ಬರು ಕರೆ ಮಾಡಿ ಸಿಟಿಬಸ್‌ಗಳಲ್ಲಿ ಕರ್ಕಶವಾದ ಸಂಗೀತದ ಆಡಿಯೋ ಪ್ಲೇ ಮಾಡುವ, ಆಟೋರಿಕ್ಷಾದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುವ ಹಾಗೂ ಗೂಡ್ಸ್ ವಾಹನಗಳಲ್ಲಿ ಕಾರ್ಮಿಕರನ್ನು ಹೆಚ್ಚಿಗೆ ಸಾಗಾಟದ ಬಗ್ಗೆ ದೂರು ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಸ್ಸುಗಳು ಕಾನೂನು ಉಲ್ಲಂಘಿಸುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಬಗ್ಗೆ ಬಸ್, ಆಟೋ ಹಾಗೂ ಕ್ಯಾಬ್‌ಗಳ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಈ ಬಗ್ಗೆ ವಿಷಯ ಮನವರಿಕೆ ಮಾಡಲಾಗುವುದು. ಆನಂತರವೂ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಚಾರಿ ಪೊಲೀಸರ ಬಗ್ಗೆ ಕಾಳಜಿ: ಉಡುಪಿಯಿಂದ ಕರೆ ಮಾಡಿದವ ರೊಬ್ಬರು ಸದಾ ಬಿಸಿಲಿನಲ್ಲಿ ನಿಂತು ಕರ್ತವ್ಯ ನಿರ್ವಹಿಸುವ -ಅದರಲ್ಲೂ ಕಲ್ಸಂಕ, ಅಂಬಲಪಾಡಿ ಬೈಪಾಸ್‌ಗಳಲ್ಲಿ- ಸಂಚಾರಿ ಪೊಲೀಸರ ಬಗ್ಗೆ ಅತ್ಯಂತ ಕಾಳಜಿ ತೋರಿ ಅವರಿಗೆ ಕೆಲವು ಸೌಲಭ್ಯ, ವ್ಯವಸ್ಥೆ ಕಲ್ಪಿಸುವ ಕುರಿತು ಎಸ್ಪಿಯವರಲ್ಲಿ ಕೋರಿಕೊಂಡರು.

ಉಡುಪಿ ನಗರದಲ್ಲಿ ಸದಾ ನಿಂತು ಸಂಚಾರ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಮಾಸ್ಕ್ ಒದಗಿಸಿ, ಕುಡಿಯುವ ನೀರು, ಶೌಚಾಲಯದಂತಹ ಅಗತ್ಯ ವ್ಯವಸ್ಥೆ ಕಲ್ಪಿಸಿ ಎಂದರು. ಈ ಬಗ್ಗೆ ನಿಗಾ ವಹಿಸುವುದಾಗಿ ಎಸ್ಪಿ ಅವರು ಭರವಸೆ ನೀಡಿದರು.

ಈ ವಾರವೂ ಮಟ್ಕಾ ಹಾವಳಿಯ ಕುರಿತಂತೆ ಗಂಗೊಳ್ಳಿ, ಬೈಂದೂರು, ಶಿರ್ವ, ಬ್ರಹ್ಮಾವರಗಳಿಂದ ದೂರುಗಳು ಕೇಳಿಬಂದವು. ಅದೇ ರೀತಿ ಬಾರಕೂರಿ ನಿಂದ ಅಕ್ರಮ ಮರಳುಗಾರಿಕೆಯಿಂದ ಆಸುಪಾಸಿನ ನಿವಾಸಿಗಳಿಗಾಗುತ್ತಿರುವ ತೊಂದರೆ ವಿವರಿಸುವ ದೂರವಾಣಿ ಕರೆಯೂ ಬಂತು. ಆದರೆ ಈ ಬಗ್ಗೆ ಈಗಾಗಲೇ ತನಿಖೆ ನಡೆಸಿದಾಗ ಆ ಪರಿಸರದಲ್ಲಿ ಮರಳುಗಾರಿಕೆ ನಡೆಸಲು 10 ಮಂದಿಗೆ ಪರವಾನಿಗೆ ಇದ್ದು, ಇದರಲ್ಲಿ 50 ಲೋಡ್ ಮರಳು ಪ್ರತಿದಿನ ಸಾಗಿಸಲು ಅವಕಾಶವಿದೆ ಎಂದು ಎಸ್ಪಿ ದೂರು ನೀಡಿದವರಿಗೆ ವಿವರಿಸಿದರು.

ಇನ್ನು ಪಡೆದುಕೊಂಡ ಸಾಲಕ್ಕೆ ಫೈನಾನ್ಸ್ ಕಂಪೆನಿಯೊಂದರಿಂದ ತಮ್ಮ ಮಗನಿಗಾಗುತ್ತಿರುವ ಕಿರುಕುಳದ ಬಗ್ಗೆ ನಗರದ ದೂರುದಾರರು ದೂರು ನೀಡಿದರೆ, ಮತ್ತೊಬ್ಬರು ಕೋರ್ಟ್ ರಸ್ತೆಯಲ್ಲಿ ಮಕ್ಕಳ ರಸ್ತೆ ದಾಟಲು ಪಡುತ್ತಿರುವ ಕಷ್ಟದ ಬಗ್ಗೆ ವಿವರಿಸಿದರು. ಒಬ್ಬರು ಪರ್ಯಾಯ ವೇಳೆ ಪೊಲೀಸರ ಕರ್ತವ್ಯನಿರ್ವಹಣೆ, ಬಂದೋಬಸ್ತ್ ಬಗ್ಗೆ ಮೆಚ್ಚುಗೆ ಸುರಿಮಳೆ ಗೆರೆದರೆ, ಇನ್ನೊಬ್ಬರು ಆದಿಉಡುಪಿ ಶಾಲಾ ಮತ್ತು ಜನವಸತಿ ಪರಿಸರದಲ್ಲಿ ಜನರ ವಿರೋಧ ಲೆಕ್ಕಿಸದೇ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವ ಬಗ್ಗೆ ದೂರಿಕೊಂಡರು.

ಠಾಣೆಯೊಂದರಲ್ಲಿ ‘ಪ್ರಾಮಾಣಿಕ’ ಪೊಲೀಸ್ ಸಿಬ್ಬಂದಿಯೊಬ್ಬರನ್ನು ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸುವಂತೆ ಒಬ್ಬರು ಒತ್ತಾಯಿಸಿದರೆ, ಚೆಕ್ ಅಮಾನ್ಯ ಪ್ರಕರಣದಲ್ಲಿ ವಾರಂಟ್ ಹೊರಡಿಸಿ ಒಂದು ಮನವಿ ಮಾಡಿದರು.

ಶಿರ್ವದಲ್ಲಿ ಕಲ್ಲು ಗಣಿಗಾರಿಕೆ ಸಹಿತ ಕಳೆದ ವಾರ ಫೋನ್‌ಇನ್‌ನಲ್ಲಿ ಬಂದಿದ್ದ ದೂರಿಗೆ ಕೈಗೊಂಡ ಕ್ರಮಗಳ ಕುರಿತು ಎಸ್‌ಪಿ ಪತ್ರಕರ್ತರಿಗೆ ವಿವರಿಸಿದರು. ಡಿವೈಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

ಒಂದು ವಾರದಲ್ಲಿ 800ಕ್ಕೂ ಅಧಿಕ ಪ್ರಕರಣ
ವಿವಿಧ ಪ್ರಕರಣಗಳಲ್ಲಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಳೆದೊಂದು ವಾರದಲ್ಲಿ 800ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ವಿವರಿಸಿದರು.

ಮಟ್ಕಾ ಪ್ರಕರಣದಲ್ಲಿ 13 ಕೇಸು ದಾಖಲಿಸಿ 13 ಮಂದಿ ಬಂಧನ, ಇಸ್ಪೀಟು -ಜೂಜಿಗೆ ಸಂಬಂಧಿಸಿ 3 ಕೇಸಿನಲ್ಲಿ 15 ಬಂಧನ, ಗಾಂಜಾ 3 ಕೇಸು 6 ಬಂಧನ, ತಂಬಾಕು 30, ಕರ್ಕಶ ಹಾರನ್(19), ಹೆಲ್ಮೆಟ್ ರಹಿತ ಚಾಲನೆ (306), ವೇಗದ ಚಾಲನೆ (36), ಡ್ರಂಕ್ ಆ್ಯಂಡ್ ಡ್ರೈವ್ (6), ವಿವಿಧ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗೆ 344 ಕೇಸು ಸೇರಿದಂತೆ ಒಟ್ಟು 800ಕ್ಕೂ ಅಧಿಕ ಪ್ರಕರಣಗಳನ್ನು ವಾರದಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದವರು ವಿವರಿಸಿದರು.

ಮಠದಲ್ಲಿ ಊಟದ ಕೌಂಟರ್ ಹೆಚ್ಚಿಸಿ..!
 ಫೋನ್‌ಇನ್‌ಗೆ ಕರೆ ಮಾಡಿದ ಮಹಿಳೆಯೊಬ್ಬರು ಶ್ರೀಕೃಷ್ಣ ಮಠದ ಪರ್ಯಾಯೋತ್ಸವದಲ್ಲಿ ಪೊಲೀಸ್ ಬಂದೋಬಸ್ ಚೆನ್ನಾಗಿತ್ತು ಎಂದು ಇಲಾಖೆಯನ್ನು ಹೊಗಳಿದರು. ಬಳಿಕ ಪರ್ಯಾಯದ ಊಟವೂ ಚೆನ್ನಾಗಿತ್ತು, ಆದರೆ ಅಲ್ಲಿ ಊಟದ ಕೌಂಟರ್ ಹೆಚ್ಚಿಸಬೇಕಿತ್ತು ಎಂದು ಸಲಹೆಯನ್ನೂ ನೀಡಿದರು.

ಇದಕ್ಕೆ ನಗುತ್ತಾ ಉತ್ತರಿಸಿ ಎಸ್ಪಿ, ಊಟದ ಕೌಂಟರ್ ಹೆಚ್ಚಿಸುವುದು ನಮ್ಮ ಕೆಲಸವಲ್ಲ. ಅದು ಮಠದವರು ಮಾಡಬೇಕಾದ್ದು ಎಂದು ಪೋನಿರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News