×
Ad

ಸಿಎಸ್‌ಆರ್ ನಿಧಿಯನ್ನು ಶೇ.2ರಿಂದ 10ಕ್ಕೇರಿಸಿ: ನಾರಾಯಣ ಮೂರ್ತಿ

Update: 2018-01-19 21:56 IST

ಉಡುಪಿ, ಜ.18: ಖಾಸಗಿ ಉದ್ದಿಮೆಗಳು, ಕೈಗಾರಿಕಾ ಸಂಸ್ಥೆಗಳಿಗೆ ನಿಗದಿ ಪಡಿಸಿರುವ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯನ್ನು ಈಗಿರುವ ಶೇ.2ರಿಂದ 10ಕ್ಕೇರಿಸಬೇಕು ಎಂದು ದೇಶದ ಖ್ಯಾತನಾಮ ಐಟಿ ಉದ್ಯಮಿ, ಇನ್ಫೋಸಿಸ್‌ನ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನ ಚೈತ್ಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ನ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂವಾದದಲ್ಲಿ ಮಾತನಾಡುತಿದ್ದರು.

ಪ್ರಸ್ತುತ ಖಾಸಗಿ ಕಂಪೆನಿಗಳು ತಮ್ಮ ಆದಾಯದಲ್ಲಿ ಸಾಮಾಜಿಕ ವಲಯಕ್ಕಾಗಿ ಶೇ.2ರಷ್ಟು ನೀಡುತ್ತಿವೆ. ಸರಕಾರ ಇದನ್ನು ಶೇ.10ಕ್ಕೆ ಹೆಚ್ಚಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಇವುಗಳನ್ನು ಶೇ.2ರಷ್ಟನ್ನು ಶಿಕ್ಷಣ, ಶೇ.2 ಆರೋಗ್ಯ, ಶೇ.2 ಕೃಷಿ, ಶೇ.2 ಅಪೌಷ್ಠಿಕತೆ ಹಾಗೂ ಶೇ.2 ಬಡತನ ನಿರ್ಮೂಲನದಂತ ಕ್ಷೇತ್ರಗಳಿಗೆ ಬಳಸುವಂತಾಗಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಚಟುವಟಿಕೆಯಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಇಂದು ದೇಶದ ಶಿಕ್ಷಣ, ಆರೋಗ್ಯ, ಪರಿಸರ ಜಾಗೃತಿ, ಮಹಿಳಾ ಸಬಲೀಕರಣ, ಬಡತನದಂತ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ದೊಡ್ಡಮಟ್ಟದಲ್ಲಿ ಆರ್ಥಿಕ ನೆರವಿನ ಅಗತ್ಯತೆ ಕಂಡುಬರುತ್ತಿದೆ ಎಂದರು.

ಕುತೂಹಲ ಮೂಡಿಸುವ ಶಿಕ್ಷಣ:  ಮಕ್ಕಳಿಗೆ ಪರಿಸರದ ಬಗ್ಗೆ ಕುತೂಹಲ ಮೂಡಿಸುವಂತೆ ವಿಜ್ಞಾನ ಮತ್ತು ಗಣಿತ ಕಲಿಕೆ ನಡೆಯಬೇಕಾಗಿದೆ. ಮಕ್ಕಳು ಸ್ವಂತ ಆಲೋಚನೆಯ ಮೂಲಕ ಕುತೂಹಲದಿಂದ ಸಿದ್ಧಾಂತಗಳನ್ನು ಅಭ್ಯಸಿಸಬೇಕಿದೆ ಎಂದವರು ನುಡಿದರು.

ಮಕ್ಕಳಲ್ಲಿರುವ ಕುತೂಹಲವನ್ನು ಯಾವತ್ತೂ ಕಡೆಗಣಿಸಬೇಡಿ. ಸಾಮಾನ್ಯ ವಿದ್ಯಾರ್ಥಿಯೊಬ್ಬನ ಕಲಿಕೆಗೂ ಮಹತ್ವ ನೀಡುವಂತೆ ಶಿಕ್ಷಕರಿಗೆ ಮನವಿ ಮಾಡಿದ ಅವರು, ಇಂಥ ಸಂದರ್ಭದಲ್ಲಿ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ತರಗತಿಯ ಬುದ್ಧಿವಂತ ಶೇ.10 ಮಂದಿಗೆ ವಿಶೇಷ ಕೋರ್ಸ್ ಒಂದನ್ನು ರೂಪಿಸಿ ಅವರ ಕಲಿಕೆಗೂ ಮಾನ್ಯತೆ ನೀಡಬೇಕು. ಇದು ಇಂದು ಅಮೆರಿಕದ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಕೆ ಯಾಗಿದೆ ಎಂದರು.

ಮುಂದಿನ ಯೋಜನೆ: ಪ್ರಕೃತಿಯ ಕೌತುಕಗಳ ರಹಸ್ಯ ಬಯಲು: ವಿಶ್ವದ 5000ದಷ್ಟು ಪ್ರಕೃತಿ ಕೌತುಕಗಳ ರಹಸ್ಯಗಳಿಗೆ ಉತ್ತರ ನೀಡುವ ಪುಸ್ತಕ ವೊಂದನ್ನು ರಚಿಸುವ ಯೋಜನೆಯಿದೆ. ಇದನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹೀಗೆ ವಿವಿಧ ಕ್ಷೇತ್ರಗಳ ತಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಮಾಡಬೇಕಾಗಿದೆ. ತಜ್ಞರನ್ನು ಇನ್ನಷ್ಟೇ ಗುರುತಿಸಿ ಕಾರ್ಯ ಆರಂಭಿಸಬೇಕಿದೆ ಎಂದು ಅವರು ಮುಂದಿನ ಯೋಜನೆಗಳ ಕುರಿತು ವಿವರಿಸಿದರು.

ರೋಬೊಟ್: ವಿಶ್ವದಲ್ಲಿ ಇಂದು ರೋಬೊಟಿಕ್ಸ್ ಹಾಗೂ ಕೃತಕ ಬುದ್ಧಿವಂತಿಕೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)ನಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದು ಭಾರತಕ್ಕೆ ಬಂದರೆ ಕಾರ್ಖಾನೆ ಮಟ್ಟದಲ್ಲಿ ಮಾತ್ರ ಅಳವಡಿಕೆಯಾಗುವ ಸಾಧ್ಯತೆ ಇರುತ್ತದೆ ಎಂದವರು ವಿವರಿಸಿದರು.

ಆದರೆ ಅಮೆರಿಕದಲ್ಲಿ ಚಾಲಕನಂಥ ಹುದ್ದೆಯಿಂದ ಹಿಡಿದು ಸಾಮಾನ್ಯ ಉದ್ಯೋಗಕ್ಕೂ ಅದನ್ನು ಅಳವಡಿಕೆ ಮಾಡಲಾಗುತ್ತಿದೆ. ಇದರಿಂದ ಅಮೆರಿಕ ವೊಂದರಲ್ಲೇ ಸುಮಾರು ಮೂರು ಮಿಲಿಯ ಚಾಲಕರು (ಡ್ರೈವರ್) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದರು.

ಕುಲಪತಿಗಳಿಗೆ ಸನ್ಮಾನ:  ಮಾಹೆಯ ರಜತ ಮಹೋತ್ಸವ ಸಮಾರಂಭದಲ್ಲಿ ಮಾಹೆ ಡೀಮ್ಡ್ ವಿವಿಯ ಈ ಹಿಂದಿನ ಹಾಗೂ ಇಂದಿನ ಕುಲಪತಿಗಳನ್ನು ಸನ್ಮಾನಿಸಲಾಯಿತು.ಡಾ.ಎಂ.ಎಸ್.ವಲಿಯತ್ತನ್,ಡಾ.ಬಿ.ಎಂ.ಹೆಗ್ಡೆ, ಡಾ.ರಾಜ್ ವಾರಿಯರ್, ಡಾ.ರಾಮನಾರಾಯಣ್,ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಈಗಿನ ಕುಲಪತಿ ಡಾ.ಎಚ್.ವಿನೋದ್ ಭಟ್ ಇವರನ್ನು ನಾರಾಯಣ ಮೂರ್ತಿ ಸನ್ಮಾನಿಸಿದರು.

ಸನ್ಮಾನಿತರ ಪರವಾಗಿ ಡಾ.ವಲಿಯತ್ತನ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಪೈ ಉಪಸ್ಥಿತರಿದ್ದರು. ಡಾ.ಎಚ್. ಎಸ್. ಬಲ್ಲಾಳ್ ಸ್ವಾಗತಿಸಿದರೆ, ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ.ಪ್ರಭು ಮುಖ್ಯ ಅತಿಥಿಯನ್ನು ಪರಿಚಯಿಸಿದರು.ರಿಜಿಸ್ಟ್ರಾರ್ ಡಾ.ನಾರಾಯಣ ಸಬಾಹಿತ್ ವಂದಿಸಿದರು. ಡಾ.ಗಾಯತ್ರಿ ಪ್ರಭು ಕಾರ್ಯಕ್ರಮ ನಿರ್ವಹಿಸಿ, ನಾರಾಯಣ ಮೂರ್ತಿ ಅವರೊಂದಿಗೆ ಸಂವಾದ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News