ಸಮುದ್ರದ ಅತಿ ಕಠಿಣ ಪ್ರದೇಶ ದಾಟಿ ತ್ರಿವರ್ಣ ಧ್ವಜ ಹಾರಾಟ

Update: 2018-01-19 17:06 GMT

ಹೊಸದಿಲ್ಲಿ, ಜ. 19: ಭಾರತೀಯ ನೌಕಾ ಪಡೆಯ ಆರು ಮಹಿಳಾ ಸದಸ್ಯರ ತಂಡ ವಿಶ್ವ ಪರಿಕ್ರಮಣದ ಒಂದು ಭಾಗವಾಗಿ ಶುಕ್ರವಾರ ಸಮುದ್ರದ ಅತಿ ಕಠಿಣ ಪ್ರದೇಶವಾಗಿರುವ ದಕ್ಷಿಣ ಅಮೆರಿಕದ ಹಾರ್ನ್ ಭೂಶಿರ ದಾಟಿ ಹಾಯಿ ದೋಣಿಯಲ್ಲಿ ತ್ರಿವರ್ಣ ಧ್ವಜ ಅರಳಿಸಿದರು.

 ಭಾರತದ ನೌಕಾ ಪಡೆಯ ಮಹಿಳಾ ಸಿಬ್ಬಂದಿಯೇ ಕೇಪ್ ಭೂಶಿರ ಹಾದು ತ್ರಿವರ್ಣ ಧ್ವಜ ಹಾರಿಸುತ್ತಿರುವುದು ಇದೇ ಮೊದಲು.

ಇಂದು ಬೆಳಗ್ಗೆ ಅವರು ಕೇಪ್ ಹಾರ್ನ್‌ಗೆ ಸುತ್ತು ಬಂದರು. ಇದು ವೌಂಟ್ ಎವರೆಸ್ಟ್ ಪರ್ವತವನ್ನು ಏರಿದಷ್ಟೇ ದೊಡ್ಡ ಸಾಧನೆ. ಡಾರ್ಕ್ ಪ್ಯಾಸೇಜ್ ಅನ್ನು ದಾಟಿದ ಬಳಿಕ ತಂಡ ತಮ್ಮ ಹಾಯಿ ದೋಣಿ ಐಎನ್‌ಎಸ್‌ವಿ ತಾರಿಣಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿತು ಎಂದು ನೌಕಾ ಅಧಿಕಾರಿ ತಿಳಿಸಿದ್ದಾರೆ.

 ವಿಶ್ವ ಪರಿಕ್ರಮಣದ ಅರ್ಹತೆ ಪಡೆಯಲು ಭಾರತ ತಂಡ ಮೂರು ಪ್ರಮುಖ ಭೂಶಿರಗಳಿಗೆ ಸುತ್ತು ದಾಟಬೇಕಿದ್ದು, ಅದರಲ್ಲಿ ಎರಡು ಭೂಶಿರವನ್ನು ದಾಟಿದೆ. ಐಎನ್‌ಎಸ್ ತಾರಿಣಿ 2017 ನವೆಂಬರ್ 9ರಂದು ಆಸ್ಟ್ರೇಲಿಯಾದ ಲ್ಯೂವಿನ್ ಭೂಶಿರವನ್ನು ದಾಟಿತ್ತು.

ಲೆಫ್ಟಿನೆಂಟ್ ಕಮಾಂಡರ್ ವರ್ಟಿಕಾ ಜೋಷಿ ಅವರ ನೇತೃತ್ವದಲ್ಲಿ ಹಾಯಿ ಹಡಗಿನಲ್ಲಿ ಲೆ. ಕೆ. ಪ್ರತಿಭಾ ಜಾಮ್‌ವಾಲ್, ಪಿ. ಸ್ವಾತಿ, ಲೆ. ಎಸ್. ವಿಜಯಾ ದೇವಿ, ಬಿ. ಐಶ್ವರ್ಯಾ ಹಾಗೂ ಪಾಯಲ್ ಗುಪ್ತಾ ಫಾಲ್ಕ್‌ಲ್ಯಾಂಡ್‌ನ ಪೋರ್ಟ್ ಸ್ಟಾನ್ಲಿಯತ್ತ ತಮ್ಮ ಪರಿಕ್ರಮಣ ಮುಂದುವರಿಸಿದ್ದಾರೆ. ಅವರು ಮಾರ್ಚ್‌ನಲ್ಲಿ ಗುಡ್‌ಹೋಪ್ ಭೂಶಿರ ದಾಟಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News