ಶೇಣಿ ಭಾರತದ ಮೇರು ಕಲಾವಿದ- ಡಾ. ಪ್ರಭಾಕರ್ ಜೋಷಿ

Update: 2018-01-19 17:07 GMT

ಪುತ್ತೂರು, ಜ. 19: ಯಕ್ಷ ರಂಗದಲ್ಲಿ ಮಹಾನ್ ಸಾಧಕ ಶೇಣಿ ಗೋಪಾಲಕೃಷ್ಣ ಭಟ್ಟರನ್ನು ಸ್ಮರಿಸುವುದು ಅತ್ಯಂತ ಪುಣ್ಯದ ಕೆಲಸ. ಭಾರತದ ಮೇರು ಕಲಾವಿದರೆಂದು ಪರಿಗಣ ಸಲಾಗಿರುವ ಶೇಣಿ ಅವರು ಜೀವನದಲ್ಲಿ ಬಹಳಷ್ಟು ಕಷ್ಟದಿಂದ ಮೇಲೆ ಬಂದವರು. ನಿರ್ದಿಷ್ಟ ಗುರಿಯನ್ನು ಹೊಂದಿರದೆ ಬದುಕಿದ ಅವರೊಬ್ಬ ದೊಡ್ಡ ವಿದ್ವಾಂಸ ಎಂದು ಮಂಗಳೂರು ಬೆಸೆಂಟ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎಂ ಪ್ರಭಾಕರ ಜೋಷಿ ಹೇಳಿದರು.

ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಜ್ರಮಹೋತ್ಸವದ ಆಚರಣೆಯ ಅಂಗವಾಗಿ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಯಕ್ಷಕಲಾ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾದ ‘ಶೇಣಿ ಶತಮಾನದ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದರು.

ಶೇಣಿ ಅವರು ಒಬ್ಬ ಆದರ್ಶ ವ್ಯಕ್ತಿಯಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ, ಹರಿದಾಸರಾಗಿ ಸುಮಾರು ಆರು ದಶಕಗಳ ಕಾಲ ಯಕ್ಷರಂಗವನ್ನು ಸಮರ್ಥವಾಗಿ ಆಳಿದವರು. ಹರಿಕಥೆಯ ಹಳೆಯ ಸ್ವರೂಪವನ್ನು ಬದಲಿಸಿ ಹೊಸ ಹೊಳಪನ್ನು ಕೊಟ್ಟವರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರ ಯಕ್ಷ ಶೈಲಿಯು ಪಂಡಿತ ಪಾಮರರೆಂಬ ಬೇಧ ಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಹಿಡಿಸುವಂತಾಗಿದೆ. ಮಾತುಗಾರಿಕೆಯಲ್ಲಿ ಸಂಗೀತದ ಏರಿಳಿತ, ಲಯಬದ್ಧತೆ, ಮಾಧರ್ಯ, ಸುಸ್ವರ, ದೈರ್ಯ ಮುಂತಾದವುಗಳು ಎಲ್ಲಾ ಕಲಾಸಕ್ತರ ಹೃದಯವನ್ನು ಗೆದ್ದಿತ್ತು. ಯಕ್ಷರಂಗದಲ್ಲಿ ವಯಸ್ಸಿನ, ಸ್ಥಾನದ ಅಂತರ ವಿಲ್ಲದೆ ಸಹ ಕಲಾವಿದರೊಂದಿಗೆ ಭಾಗವಹಿಸುವ ರೀತಿ ಅವರನ್ನು ಜನಪ್ರಿಯಗೊಳಿಸಿದೆ. ಯಾವುದೇ ಪಾತ್ರಗಳಲ್ಲಿಯೂ ಮಿಂಚಬಲ್ಲ ಸಾಮರ್ಥ್ಯವನ್ನು ಹೊಂದಿದ್ದ ಶೇಣಿ ಅವರಿಗೆ ದೇವರು ಯಕ್ಷಗಾನದಲ್ಲಿ ಅಗತ್ಯವಿರುವ ಎಲ್ಲಾ ಸಂಗತಿಗಳನ್ನು ಕರುಣ ಸಿದ್ದ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾಗಿರುವ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಯಕ್ಷಗಾನ ತಾಳಮದ್ದಳೆಯಂತಹ ಕಾರ್ಯಕ್ರಮಗಳಲ್ಲಿ ಮಾತನಾಡಬೇಕಾದರೆ ಭಾಷೆಯು ಸುಸಂಸ್ಕೃತವಾಗಿರಬೇಕು. ಭಾಷೆಯ ಪ್ರಾವಿಣ್ಯತೆಯನ್ನು ಗಳಿಸಬೇಕಾದರೆ ನಮ್ಮಲ್ಲಿ ಇತರರ ಮಾತನ್ನು ಕೇಳುವ ಸಹನೆ ಇರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹಲವಾರು ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಿಗತಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಜಾಣತನದ ಲಕ್ಷಣ ಎಂದು ಹೇಳಿದರು. ಕಾಲೇಜ್‌ನ ಕನ್ನಡ ವಿಭಾಗದ ಮುಖ್ಯಸ್ಥ ಡಾ ವಿಜಯ ಕುಮಾರ್ ಮೊಳೆಯಾರ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಪದ್ಮಜಾ ಎಚ್ ವಂದಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಡಾ ಬಸ್ತ್ಯಾಂ ಪಾಯಸ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News