ಜ.21: ಪುತ್ತೂರು ಕ್ಯಾಂಪ್ಕೊ ಸೌಲಭ್ಯ ಸೌಧ ಉದ್ಘಾಟನೆ

Update: 2018-01-19 17:11 GMT

ಪುತ್ತೂರು, ಜ. 19: ಪುತ್ತೂರಿನಲ್ಲಿರುವ ಕ್ಯಾಂಪ್ಕೊ ಚಾಕಲೇಟು ಕಾರ್ಖಾನೆ ಆವರಣದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಸೌಲಭ್ಯ ಸೌಧ’ ಉದ್ಘಾಟನೆ, ಕಾವುವಿನಲ್ಲಿ ನಿರ್ಮಾಣಗೊಳ್ಳುವ ಬೃಹತ್ ಗೋದಾಮಿನ ಶಂಕುಸ್ಥಾಪನೆ ಸಮಾರಂಭ, ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಸಿ ಸುಬ್ರಾಯ ಭಟ್ ಪ್ರತಿಮೆ ಅನಾವರಣ, ನೂತನ ಪ್ರೀಮಿಯಂ ಚಾಕೊಲೇಟ್ ಪ್ಯಾಕ್ ಬಿಡುಗಡೆ ಸಮಾರಂಭ ಜ.21ರಂದು ನಡೆಯಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮತ್ತು ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಎಂ ತಿಳಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1986ರಲ್ಲಿ ಆರಂಭಗೊಂಡ ಕ್ಯಾಂಪ್ಕೊ ಸಂಸ್ಥೆಯು ಕಳೆದ ಮೂರು ದಶಕಗಳಲ್ಲಿ ಬಹುಮುಖವಾಗಿ ಬೆಳೆದು, ಇಂದು ವಾರ್ಷಿಕ 23,000 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಫುಡ್ ಸೇಫ್ಟಿ ಸ್ಟ್ಯಾಂಡರ್ಡ್ ಅಸೋಸಿಯೇಶನ್ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ)ದ ಆಹಾರ ಸುರಕ್ಷತೆಗೆ ತಕ್ಕಂತೆ ಮೇಲ್ದರ್ಜೆಗೇರಿದೆ. ಸಂಸ್ಥೆಯಲ್ಲಿ 800 ಉದ್ಯೋಗಿಗಳು ದುಡಿಯುತ್ತಿದ್ದು, ಮೂರು ಅವಧಿಗಳಲ್ಲಿ ಉತ್ಪಾದನಾ ಕಾರ್ಯ ನಡೆಯುತ್ತಿದೆ. ಇದೀಗ ಸಕಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಸೌಲಭ್ಯ ಸೌಧ ನಿರ್ಮಿಸಲಾಗಿದೆ.

4 ಅಂತಸ್ತುಗಳನ್ನು ಹೊಂದಿರುವ, 42,000 ಚದರ ಅಡಿ ವಿಸ್ತೀರ್ಣವುಳ್ಳ ಸೌಲಭ್ಯ ಸೌಧದ ನೆಲ ಅಂತಸ್ತಿನಲ್ಲಿ ಆಡಳಿತಾತ್ಮಕ ಕಚೇರಿ, ಪ್ರಥಮ ಅಂತಸ್ತಿನಲ್ಲಿ ಕೈಗಾರಿಕಾ ಉಪಹಾರ ಗೃಹ, ಆಧುನಿಕ ಪಾಕಶಾಲೆ, ಹವಾ ನಿಯಂತ್ರಿತ ಡೈನಿಂಗ್ ಹಾಲ್, ಪುರುಷ ಹಾಗೂ ಮಹಿಳಾ ಕಾರ್ಮಿಕರಿಗಾಗಿ 1050 ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ಎರಡನೇ ಅಂತಸ್ತಿನಲ್ಲಿ ಚಾಕೊಲೊಟ್ ಉತ್ಪನ್ನಗಳ ಪ್ಯಾಕಿಂಗ್ ನಡೆಯುತ್ತದೆ. ಮೂರನೇ ಅಂತಸ್ತಿನಲ್ಲಿ 60 ಆಸನ ಹೊಂದಿರುವ ಸುವ್ಯವಸ್ಥಿತವಾದ ಬೋರ್ಡ್ ಮೀಟಿಂಗ್ ಹಾಲ್ ಇದೆ. ಚಾಕೊಲೆಟ್ ಉತ್ಪನ್ನಗಳ ಪ್ಯಾಕಿಂಗ್ ಸಂಬಂಧಿಸಿದ ಎಲ್ಲ ಪರಿಕರಗಳನ್ನು ಈ ಅಂತಸ್ತಿನಲ್ಲಿ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಮಳೆ ಕೊಯ್ಲು, ಅಗ್ನಿ ನಿರೋಧಕ ವ್ಯವಸ್ಥೆ, ಆಧುನಿಕ ಏರ್ ಶವರ್ ವ್ಯವಸ್ಥೆ ಕಲ್ಪಿಸಲಾಗಿದೆ.

ನೂತನ ಸೌಲಭ್ಯ ಸೌಧವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಉದ್ಘಾಟಿಸಲಿದ್ದಾರೆ. ದಿ. ವಾರಣಾಸಿ ಸುಬ್ರಾಯ ಭಟ್ ಅವರ ಪುತ್ಥಳಿಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕಾವು ಬಳಿಯ 11.5 ಎಕರೆ ಪ್ರದೇಶದಲ್ಲಿ ಕರಿಮೆಣಸು, ಅಡಕೆ, ರಬ್ಬರ್ ದಾಸ್ತಾನು ಕೇಂದ್ರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಪ್ರೀಮಿಯಮ್ ಮಾದರಿಯ ಚಾಕಲೇಟನ್ನು ಸಂಸದೆ ಶೋಭಾ ಕರಂದ್ಲಾಜೆ ಅನಾವರಣಗೊಳಿಸಲಿದ್ದಾರೆ. ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಜ್ಯೋತೀಂದ್ರ ಭಾಯಿ ಮೆಹ್ತಾ, ಶಾಸಕಿ ಶಕುಂತಲಾ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಕ್ಯಾಂಪ್ಕೊ ಚಾಕಲೇಟ್ ಕಂಪನಿಯ ಎಜಿಎಂ ಪ್ರಾಸ್ಸಿಸ್ ಡಿ’ಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News