ನೀರಿನ ಸಮಸ್ಯೆ ಪರಿಹಾರಕ್ಕೆ ಬೃಹತ್ ಟ್ಯಾಂಕ್ ನಿರ್ಮಿಸಲು ತೀರ್ಮಾನ

Update: 2018-01-19 17:12 GMT

ಪುತ್ತೂರು, ಜ. 19: ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ 24X7 ಮಾದರಿಯಲ್ಲಿ ನೀರು ಪೂರೈಸಲು ಬೈಪಾಸ್ ತೆಂಕಿಲದಲ್ಲಿರುವ ಕರ್ನಾಟಕ ವಸತಿ ನಿಗಮದ ನಿವೇಶನದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶುಕ್ರವಾರ ಪುತ್ತೂರಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಗರ ಸಭೆಯ ಸದಸ್ಯರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಅಂತಿಮವಾಗಿ ಈ ನಿರ್ಧಾರ ಕೈಗೊಂಡಿದ್ದು, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿ ತಾಂತ್ರಿಕ ಸಲಹೆಗಾರರು ಲೆಕ್ಕಾಚಾರ ಮಾಡಿ ವಿನ್ಯಾಸ ಸಿದ್ದಗೊಳಿಸುತ್ತಾರೆ.ಅದರಂತೆ ಕಾಮಗಾರಿಗಳು ನಡೆಯಬೇಕು.ವಿನ್ಯಾಸಗಳನ್ನು ಸ್ಥಳೀಯವಾಗಿ ಬದಲಾಯಿಸಿಕೊಂಡರೆ ಸಮಸ್ಯೆ ಆದೀತು ಎಚ್ಚರಿಸಿದ್ದಾರೆ.

ವಿನ್ಯಾಸಗಳಲ್ಲಿ ತಾಂತ್ರಿಕ ತೊಂದರೆಗಳಿದ್ದರೆ ಮಾಹಿತಿ ನೀಡಬೇಕು. ಜನಸಂಖ್ಯೆ ಅಧಿಕವಾಗಿರುವ ಪ್ರದೇಶಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಟ್ಯಾಂಕ್‌ನ ನೀರು ಪೂರೈಕೆಯಾಗದ ಗುಡ್ಡ ಪ್ರದೇಶಗಳಿಗೆ ಪಂಪ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆಯ ಸದಸ್ಯರಿಗೆ ಸೂಚಿಸಿದ್ದಾರೆ.

ಕುಡಿಯುವ ನೀರು ಪೂರೈಕೆಯ ಬಗ್ಗೆ ಕಳೆದ ಅವಧಿಯಲ್ಲಿ ನಡೆಸಲಾಗಿರುವ ಕಾಮಗಾರಿಯಲ್ಲಿ ಯಾವುದೇ ಡಿಸೈನ್‌ಗಳನ್ನು ಬದಲಾವಣೆಗಳನ್ನು ಮಾಡಲಾಗಿಲ್ಲ. ಕುಡ್ಸೆಂಪ್ ಯೋಜನೆಯಲ್ಲಿ ನೀರು ಪೂರೈಸಲು ಸೀಟಿ ಗುಡ್ಡೆಯಲ್ಲಿ ಹಿಂದೆ ಇದ್ದ ಟ್ಯಾಂಕ್‌ನ್ನೇ ಬಳಸಿಕೊಂಡಿರುವುದರಿಂದ ಎಲ್ಲಾ ಕಡೆ ನೀರು ಪೂರೈಸುವುದು ಅಸಾಧ್ಯವಾಗಿದೆ ಎಂದು ಸದಸ್ಯ ಜೀವಂಧರ್ ಜೈನ್ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಜನರಿಗೆ ಕುಡಿಯುವ ನೀರು ಸಂಪೂರ್ಣವಾಗಿ ಪೂರೈಸುವುದು ಈ ತನಕ ಸಾಧ್ಯವಾಗಿಲ್ಲ. ನೀರಾವರಿಗಾಗಿ ಕುಡ್ಸೆಂಪ್ ಯೋಜನೆ ಬಂದಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ನಗರ ಸಭಾ ವ್ಯಾಪ್ತಿಯಲ್ಲಿ ಕೊರೆಯಲಾಗಿರುವ ಬೋರ್‌ವೆಲ್‌ಗಳೇ ನೀರಿಗೆ ಆಸರೆಯಾಗಿದ್ದು ಅವುಗಳ ಮೂಲಕ ನಗರದ ನಿವಾಸಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ವಿದ್ಯುತ್ ನಿಲುಗಡೆಯಾದರೆ ಅದೂ ಅಸಾಧ್ಯವಾಗುತ್ತಿದೆ ಎಂದು ಸದಸ್ಯ ರಾಜೇಶ್ ಬನ್ನೂರು ಅವರು ತಿಳಿಸಿದರು.

ಉಪವಿಭಾಗಾಧಿಕಾರಿ ಪ್ರಮೀಳಾ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಮಹಮ್ಮದ್ ಆಲಿ, ಯಶೋಧ ಹರೀಶ್, ಜೊಹರಾ ನಿಸಾರ್, ಚಂದ್ರಸಿಂಗ್, ಬಾಲಚಂದ್ರ, ಶಕ್ತಿಸಿನ್ಹಾ, ಮುಕೇಶ್ ಕೆಮ್ಮಿಂಜೆ, ಜೆಸಿಂತಾ ಮಸ್ಕರೇನಸ್, ಜಯಲಕ್ಷ್ಮೀ ಸುರೇಶ್, ರಾಮಣ್ಣ ಗೌಡ ಅಲಂಗ, ಉಷಾ, ಸ್ವರ್ಣಲತಾ ಹೆಗ್ಡೆ, ಅನ್ವರ್ ಖಾಸಿಂ ಮತ್ತು ನಗರ ಸಭಾ ಹಾಗೂ ಕುಡ್ಸೆಂಪ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News