ಕಲೆಗೆ ಎಲ್ಲರನ್ನು ಒಂದು ಗೂಡಿಸುವ ಶಕ್ತಿಯನ್ನು ಹೊಂದಿದೆ -ನಳಿನ್ ಕುಮಾರ್ ಕಟೀಲ್‌

Update: 2018-01-19 17:18 GMT

ಮಂಗಳೂರು, ಜ.19: ಕಲೆ ಸಂಸ್ಕೃತಿಗೆ ಜಾತಿ, ಮತ, ಗಡಿಗಳನ್ನು ಮೀರಿ ಎಲ್ಲರನ್ನು ಒಂದು ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ನೆಹರು ಮೈದಾನದಲ್ಲಿ ಜ.19ರಿಂದ 20ರವರೆಗೆ ಹಮ್ಮಿಕೊಂಡ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ್ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್‌ನಿಂದ ಕಾಮರೂಪದವೆಗೆ ಹರಡಿರುವ ದೇಶದ ಕಲೆ ಸಂಸ್ಕೃತಿಯಲ್ಲಿ ಈ ದೇಶದ ಜನರು ದೇವರನ್ನು ಕಂಡವರು ಅದನ್ನು ಉಳಿಸಿ ಬೆಳೆಸಿದ್ದಾರೆ. ದೇಶದಲ್ಲಿ ರುವ ಈ ರೀತಿಯ ವಿಭಿನ್ನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏಕ್ ಭಾರತ್ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಭಾರತದ ತನ್ನ ಶ್ರೀಮಂತವಾದ ಕಲೆ ಸಂಸ್ಕೃತಿಯ ಮೂಲಕ ಜಗತ್ತಿನಲ್ಲಿ ಪ್ರಮುಖ ಸ್ಥಾನ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ದೇಶದ ಒಂದು ಮೂಲೆಯಲ್ಲಿರುವ ಕಲೆ ,ಸಂಸ್ಕೃತಿ ಇನ್ನೊಂದು ಮೂಲೆಯ ಜನರಿಗೆ ತಲುಪಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳಾದ ಜೊಸೆಫ್ ಭೈರಾರಾಜ್, ಸಚಿನ್ ಎ.ಎಲ್ ಮೊದಲಾದವರು ಉಪಸ್ಥಿತರಿದ್ದರು.

ಭಾರತದ ಕಲಾವಿದರ ಸಂಗಮ -ಕಲಾವೈಭವ:-ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ 400ಕ್ಕೂ ಅಧಿಕ ಕಲಾವಿದರು ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಪ್ರಥಮ ದಿನದ ಕಲಾಪ್ರದರ್ಶನ ನೀಡಿದರು.

 ಪಶ್ಚಿಮ ಬಂಗಾಲದ ಪುರುಲಿಯಾ ಚಾವೊ ರಾಮಾಯಣದ ಕಥೆಯನ್ನು ಒಳಗೊಂಡ ಕಲಾಪ್ರದರ್ಶನ ಕರಾವಳಿಯ ಯಕ್ಷಗಾನ ಪ್ರದರ್ಶನಕ್ಕೆ ಸಾಮ್ಯತೆ ಹೊಂದಿದ್ದ ಕಾರಣ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಅರುಣಾಚಲ ಪ್ರದೇಶದ ಕಲಾ ಪ್ರಕಾರವಾದ ಪಕು ಇಟು, ಉತ್ತರ ಖಂಡದ ಚೋಲಿಯಾ, ಮಧ್ಯ ಪ್ರದೇಶದ ಗುಡುಮ್ ಬಾಜಾ, ಆರಂಭದಲ್ಲಿ ಹರ್ಯಾಣದ ಘೋಮರ್ ನೃತ್ಯ ಮತ್ತು ಸಂಗೀತ ಪ್ರೇಕ್ಷಕರನ್ನು ರಂಜಿಸಿತು.

ಕಾಶ್ಮೀರದ ರೋವುಪ್ ನೃತ್ಯ, ಛತ್ತೀಸ್‌ಗಡದ ಕ್ಯಾಕ್ಸನ್ ನೃತ್ಯ, ಗುಜರಾತ್‌ನ ಸಿದ್ಧಿ ದಮಾಲ್, ಪಶ್ಚಿಮ ಬಂಗಾಲದ ಪುರುಲಿಯಾ ಚಾವೊ, ಒಡಿಶಾದ ಸಂಬಾಲ್ ಪುರಿ, ಗೋವಾದ ಗೋಡೆ ಮೊದ್ನಿ, ಕರ್ನಾಟಕದ ಡೋಳ್ಳು ಕುಣಿತ ವಿಶೇಷ ಆಕರ್ಷಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News