ಮಂಗಳಾ ಸ್ಟೇಡಿಯಂನ ಸಿಂಥೆಟಿಕ್ ಟ್ರಾಕ್‌ನಲ್ಲಿ ಅದೃಷ್ಟ ಪರೀಕ್ಷೆ

Update: 2018-01-20 08:30 GMT

► ಒಲಿಂಪಿಕ್ಸ್‌ನತ್ತ ಕ್ರೀಡಾಪ್ರತಿಭೆಗಳ ‘ಜರ್ನಿ ಫಾರ್ ಗ್ಲೋರಿ’
► ಸಾವಿರಾರು ಶಾಲಾ ಮಕ್ಕಳ ಪಾಲ್ಗೊಳ್ಳುವಿಕೆ

ಮಂಗಳೂರು, ಜ.20: ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ದೇಶದ ಯುವ ಶಕ್ತಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ವಿಭಾಗದ ವೇಗದ ಓಟಗಾರರ ಹುಡುಕಾಟಕ್ಕೆ ಉತ್ತಮ ಸ್ಪಂದನೆ ದೊರಕಿದೆ.

ಗೇಲ್ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ (ಎನ್‌ವೈಸಿಎಎಸ್) 2020 ಮತ್ತು 2024ರ ಒಲಿಂಪಿಕ್‌ಗೆ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆಯ ಪ್ರಥಮ ಹಂತವಾಗಿ ‘ಜರ್ನಿ ಫಾರ್ ಗ್ಲೋರಿ’ ಹೆಸರಿನಲ್ಲಿ ಕ್ರೀಡಾ ಪ್ರತಿಭೆಗಳ ಅನ್ವೇಷಣೆಗಾಗಿ ಈ ಸ್ಪರ್ಧೆಯನ್ನು ಆಯೋಜಿಸಿದೆ.

ಮಂಗಳೂರು ವಿಭಾಗದ ದ.ಕ., ಉಡುಪಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಪ್ರಥಮ ಹಂತದ ಈ ಓಟದಲ್ಲಿ 11ರಿಂದ 17 ವರ್ಷ ವಯಸ್ಸಿನ 1500 ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. 100 ಮೀ., 200 ಮೀಟರ್ ಹಾಗೂ 400 ಮೀ. ಈ ಮೂರು ವಿಭಾಗಗಳ ಓಟವನ್ನು ಮಂಗಳಾ ಸ್ಟೇಡಿಯಂನ ಸಿಂಥೆಟಿಕ್ ಟ್ರಾಕ್‌ನಲ್ಲಿ ನಡೆಸಲಾಯಿತು.

ಸ್ಪರ್ಧೆ ಹೇಗೆ?

ಸಿಂಥೆಟಿಕ್ ಟ್ರಾಕ್‌ನಲ್ಲಿ 11ರಿಂದ 14 ವರ್ಷ ವಯಸ್ಸಿನ ಬಾಲಕರು 100 ಮೀಟರ್ ಓಟವನ್ನು 12.65 ಸೆಕೆಂಡ್ಸ್‌ನಲ್ಲಿ ಪೂರೈಸಬೇಕು. ಬಾಲಕಿಯರಿಗೆ ಈ ಸಮಯಾವಕಾಶ 14.65 ಸೆಕೆಂಡುಗಳು.

15 ರಿಂದ 17 ವರ್ಷ ವಯಸ್ಸಿನ ಬಾಲಕರಿಗೆ 11.85 ಸೆಕೆಂಡ್ಸ್ ಹಾಗೂ ಬಾಲಕಿಯರಿಗೆ 14.05 ಸೆಕೆಂಡುಗಳು.

200 ಮೀಟರ್ ಓಟದಲ್ಲಿ 11ರಿಂದ 14 ವಯಸ್ಸಿನ ಬಾಲಕರಿಗೆ 26.45 ಸೆಕೆಂಡುಗಳು, ಬಾಲಕಿಯರಿಗೆ 29.65 ಸೆಕೆಂಡುಗಳು, 15ರಿಂದ 17 ವರ್ಷ ವಯಸ್ಸಿನ ಬಾಲಕರಿಗೆ 24.40 ಹಾಗೂ ಬಾಲಕಿಯರಿಗೆ 28.04 ಸೆಕೆಂಡುಗಳನ್ನು ನಿಗದಿಪಡಿಸಲಾಗಿತ್ತು.

400 ಮೀಟರ್ ಓಟಕ್ಕಾಗಿ 11ರಿಂದ 14 ವರ್ಷದ ಬಾಲಕರಿಗೆ 57 ಸೆಕೆಂಡುಗಳು, ಬಾಲಕಿಯರಿಗೆ 1 ನಿಮಿಷ ಏಳು ಸೆಕೆಂಡುಗಳು, 15ರಿಂದ 17 ವರ್ಷದ ಬಾಲಕರಿಗೆ 54.50 ಸೆಕೆಂಡುಗಳು, ಬಾಲಕಿಯರಿಗೆ 1 ನಿಮಿಷ 4.50 ಸೆಕೆಂಡುಗಳು.

ಈ ಮೂರು ವಿಭಾಗಗಳಿಗೆ ನಿಗದಿಪಡಿಸಲಾದ ಅವಧಿಯಲ್ಲಿ ಓಟವನ್ನು ಪೂರೈಸಿದವರು ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳುತ್ತಾರೆ. ರಾಜ್ಯ ಮಟ್ಟದಲ್ಲಿ ಆಯ್ಕೆ ಗೊಂಡವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪ್ರತಿಭೆಗಳಿಗೆ ತಜ್ಞ ಕ್ರೀಡಾ ಪಟುಗಳಿಂದ ತರಬೇತಿ ಕೊಡಿಸಿ ಅವರನ್ನು ಒಲಿಂಪಿಕ್ಸ್‌ನಂತಹ ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಎನ್‌ವೈಸಿಎಎನ್ ರಾಜ್ಯ ಸಂಚಾಲಕ ರಮೇಶ ಕೆ. ಮಾಹಿತಿ ನೀಡಿದರು.

ಮಂಗಳಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 11ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳ 100 ಮೀಟರ್ ಓಟಕ್ಕೆ ಗೇಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ವಾಥೋಡ್ಕರ್ ಹಸಿರು ನಿಶಾನೆ ತೋರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು.

ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಮನ್ನಣೆ: ಸಂಸದ ನಳಿನ್

ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಸಿನೆಮಾ ತಾರೆಯರಿಗಿಂತ ಹೆಚ್ಚಿನ ಮನ್ನಣೆ ಕ್ರೀಡಾಪಟುಗಳಿಗಿದೆ. ಹಳ್ಳಿಯ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರಮಟ್ಟಕ್ಕೆ ಪರಿಚಯಿಸಬೇಕು ಎಂಬ ಆಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಹೀಗಾಗಿ ಕ್ರೀಡಾಳುಗಳಿಗೆ ಪೂರಕವಾಗುವಂತೆ ಕೆಲವು ಕ್ರೀಡಾ ನೀತಿಗಳನ್ನು ಬದಲಾವಣೆ ಮಾಡಲಾಗಿದೆ ಎಂದರು.

ಶಾಸಕ ಜೆ.ಆರ್.ಲೋಬೊ ಮಾತನಾಡಿ, ಸದೃಢ ಕ್ರೀಡಾಪಟುಗಳನ್ನು ನಿರ್ಮಾಣ ಮಾಡುವಲ್ಲಿ ತರಬೇತುದಾರರ ಮತ್ತು ಶಾಲೆಗಳ ಪಾತ್ರ ಮಹತ್ತರ ವಾಗಿದೆ. ಹೀಗಾಗಿ ಶಾಲೆ, ದೈಹಿಕ ಶಿಕ್ಷಣ ತರಬೇತುದಾರರು ಮತ್ತು ಹೆತ್ತವರು ಅಭಿನಂದನಾರ್ಹರು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಹಿಂದೆ ಕ್ರೀಡಾ ಪ್ರತಿಭೆಗಳಿದ್ದರೂ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ಇರಲಿಲ್ಲ. ಪ್ರಸ್ತುತ ಕ್ರೀಡಾಪಟುಗಳಿಗೆ ಎಲ್ಲ ಸೌಲಭ್ಯಗಳಿವೆ. ಇದನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಗೇಲ್ ಇಂಡಿಯಾ ಜನರಲ್ ಮ್ಯಾನೇಜರ್ ವಿವೇಕ್ ವಾಥೋಡ್ಕರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ವಿಜಯಾನಂದ, ಚೀಫ್ ಮ್ಯಾನೇಜರ್ ಎಂ.ಅಶೋಕ್ ಕುಮಾರ್, ರವೀಂದ್ರ ರೆಡ್ಡಿ, ಅಶೋಕ್ ಸಿಂಥ್ರೆ, ರಮೇಶ್ ಕೆ., ಕೇಶವ ಬಂಗೇರ, ಯತೀಶ್ ಕುಮಾರ್ ಪಿ. ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News