×
Ad

ಉಡುಪಿ: 'ಎಸ್ಕೆಎಂಡಬ್ಲ್ಯೂಎ' ಮಸ್ಕತ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Update: 2018-01-20 18:13 IST

ಉಡುಪಿ, ಜ. 20: ಸೌತ್ ಕೆನರಾ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮಸ್ಕತ್ ಇದರ ವತಿಯಿಂದ ಅವಿಭಜಿತ ದ.ಕ. ಜಿಲ್ಲೆಯ 41 ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ. ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ಶನಿವಾರ ಉಡುಪಿ ಜಾಮೀಯ ಮಸೀದಿಯ ಸಭಾಂಗಣದಲ್ಲಿ ವಿತರಿಸಲಾಯಿತು.

ವಿದ್ಯಾರ್ಥಿ ವೇತನ ವಿತರಿಸಿದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಇಸ್ಲಾಮ್ ಧರ್ಮದಲ್ಲಿ ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಆದರೆ ನಾವು ಅದನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷಣದಲ್ಲಿ ಹಿಂದುಳಿದಿದ್ದೇವೆ. ಸನ್ಮಾರ್ಗ ದಾರಿಯಲ್ಲಿ ಹೋಗಲು ಮತ್ತು ಸತ್ಪ್ರಜೆಗಳಾಗಲು ಶಿಕ್ಷಣ ಅತಿ ಅಗತ್ಯ ಎಂದು ಹೇಳಿದರು.

ಧರ್ಮದ ಕುರಿತು ಸರಿಯಾದ ತಿಳುವಳಿಕೆ ಇಲ್ಲದ ಪರಿಣಾಮ ಇಂದು ಜಗತ್ತಿನಲ್ಲಿ ಹಿಂಸೆಗಳು ತಾಂಡವಾಡುತ್ತಿವೆ. ಆದರೆ ಇಸ್ಲಾಮ್ ಧರ್ಮ ಎಂದಿಗೂ ಹಿಂಸೆಯನ್ನು ಬೋಧಿಸಿಲ್ಲ. ಸೇವೆ ನಮ್ಮ ಜೀವನದ ಗುರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರಕಾರ 330 ಕೋಟಿ ರೂ. ಅನುದಾನ ನೀಡಿದೆ. ರಾಜ್ಯದಲ್ಲಿ ಅರಿವು ಯೋಜನೆಯ ಮೂಲಕ ವಿದ್ಯಾರ್ಥಿ ಗಳಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಪಿಯುಸಿ ವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿರುವ ಅಲ್ಪ ಸಂಖ್ಯಾತ ಸಮುದಾಯಕ್ಕೆ ವಿವಿಧ ಇಲಾಖೆಗಳ ಮೂಲಕ ಒಟ್ಟು 2750 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ವಿನಿಯೋಗಿಸಿದೆ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ಶೇಖ್ ಉಮರ್ ಬ್ರಹ್ಮಾವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷ ಪಿ.ಎಸ್.ಅಕ್ಬರ್ ಪಡುಬಿದ್ರೆ, ಸ್ಥಾಪಕ ಸದಸ್ಯ ಹಾರೂನ್ ರಶೀದ್ ಸಾಸ್ತಾನ, ನಝೀರ್ ಅಹ್ಮದ್ , ಜಮಾಲುದ್ದೀನ್ ಉಪಸ್ಥಿತರಿದ್ದರು.

ಎಸ್‌ಕೆಎಂಡಬ್ಲ್ಯೂಎ ಅಧ್ಯಕ್ಷ ಮುಹಮ್ಮದ್ ಹುಸೇನ್ ಕಾರ್ಕಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜ್ ಹುಸೈನ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News