ಉಡುಪಿ: ‘ಚುಂಗುಡಿ’ ಕನ್ನಡ ನಾಟಕ ಕೃತಿ ಬಿಡುಗಡೆ
ಉಡುಪಿ, ಜ.20: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಹಾಗೂ ಜಿಲ್ಲಾ ಲೇಖಕಿಯರ ಸಂಘದ ಜಂಟಿ ಆಶ್ರಯದಲ್ಲಿ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರ ‘ಚುಂಗುಡಿ’ ಕನ್ನಡ ನಾಟಕ ಕೃತಿಯ ಬಿಡುಗಡೆ ಸಮಾ ರಂಭವು ಶನಿವಾರ ಅಂಬಲಪಾಡಿ ಪ್ರಗತಿ ಸೌದದಲ್ಲಿ ಆಯೋಜಿಸಲಾಗಿತ್ತು.
ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ, ರಂಗ ನಿರ್ದೇಶಕ ಉದ್ಯಾ ವರ ಮಾಧವ ಆಚಾರ್ಯ ಮಾತನಾಡಿ, ರಂಗ ಕೃತಿಗಳಿಗೆ ರಂಗ ಪ್ರಯೋಗವೇ ದೊಡ್ಡ ಕೀರ್ತಿ. ಈ ಕೃತಿಯಲ್ಲಿ ನಾಟಕಕ್ಕಿಂತ ಕಾದಂಬರಿಗೆ ತೆರೆದುಕೊಳ್ಳುವ ವಸ್ತುಗಳಿವೆ. ಇದು ಕೇವಲ ಸಾಹಿತ್ಯಿಕ ಕೃತಿ ಮಾತ್ರವಲ್ಲ ಹೊಸ ರಂಗ ಭಾಷ್ಯ ಹಾಗೂ ರಂಗ ಪಠ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಮಾಧವಿ ಭಂಡಾರಿ, ರಂಗ ನಿರ್ದೇಶಕ ಬಾಸುಮ ಕೊಡಗು ಉಪಸ್ಥಿತರಿದ್ದರು. ರಂಗ ನಿರ್ದೇಶಕ ಬಿ.ಎನ್.ರಾಮ ಶೆಟ್ಟಿ ಹಾರಾಡಿ ಕೃತಿ ಪರಿಚಯ ಮಾಡಿದರು.
ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಸ್ವಾಗತಿಸಿದರು. ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಸುರೇಶ್ ಕಾರ್ಕಡ ಅವರಿಂದ ಭಾವಯಾನ ಕಾರ್ಯಕ್ರಮ ಜರಗಿತು.