ರೊಹಿಂಗ್ಯಾರನ್ನು ವಾಪಸ್ ಕರೆಸಿಕೊಳ್ಳಲು ಮ್ಯಾನ್ಮಾರ್ ಸಿದ್ಧ : ಸರಕಾರಿ ಮಾಧ್ಯಮ ವರದಿ

Update: 2018-01-20 14:48 GMT

ಯಾಂಗನ್ (ಮ್ಯಾನ್ಮಾರ್), ಜ. 20: ಮ್ಯಾನ್ಮಾರ್ ಸೇನೆಯ ದೌರ್ಜನ್ಯಕ್ಕೆ ಬೆದರಿ ಆ ದೇಶದ ರಖೈನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮರ ಮೊದಲ ತಂಡವನ್ನು ವಾಪಸ್ ಕರೆಸಲು ಮ್ಯಾನ್ಮಾರ್ ಅಂತಿಮ ಸಿದ್ಧತೆಗಳನ್ನು ಮಾಡುತ್ತಿದೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.

ರಖೈನ್ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ವಾಪಸಾತಿ ಶಿಬಿರಗಳಿಗೆ ಶುಕ್ರವಾರ ಭೇಟಿ ನೀಡಿದ ಆ ರಾಜ್ಯದ ಮುಖ್ಯಮಂತ್ರಿ ನಯಿ ಪು, ವಸತಿ ಕಟ್ಟಡಗಳು, ವೈದ್ಯಕೀಯ ಕ್ಲಿನಿಕ್‌ಗಳು ಮತ್ತು ಶೌಚ ಮೂಲಸೌಕರ್ಯಗಳಿಗೆ ಅಂತಿಮ ಸ್ಪರ್ಶವನ್ನು ನೀಡಲಾಗುತ್ತಿದೆ ಎಂದು ಹೇಳಿದರು ಎಂದು ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ ಪತ್ರಿಕೆ ಹೇಳಿದೆ.

ಮಾಂಗ್‌ಟವ್ ಪಟ್ಟಣದ ಸಮೀಪದಲ್ಲಿರುವ ಶಿಬಿರದಲ್ಲಿ ರೊಹಿಂಗ್ಯಾ ಮುಸ್ಲಿಮರ ವಾಸಕ್ಕಾಗಿ ಬಳಸುವ ಉದ್ದದ ಮರದ ಮನೆಯ ಬಳಿ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ನಿಂತಿರುವ ಚಿತ್ರವೊಂದನ್ನು ಪತ್ರಿಕೆ ಪ್ರಕಟಿಸಿದೆ. ಕಟ್ಟಡದ ಹಿಂಭಾಗದಲ್ಲಿ ಮುಳ್ಳು ತಂತಿ ಬೇಲಿ ಕಾಣುತ್ತದೆ.

ರೊಹಿಂಗ್ಯಾ ಬಂಡುಕೋರರು ಆಗಸ್ಟ್ 25ರಂದು ರಖೈನ್ ರಾಜ್ಯದಲ್ಲಿನ ಭದ್ರತಾ ಪಡೆಗಳ ನೆಲೆಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮ್ಯಾನ್ಮಾರ್ ಸೇನೆ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನ ಕಾರ್ಯಾಚರಣೆ ನಡೆಸಿದಂದಿನಿಂದ 6,55,500ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅದೇ ವೇಳೆ, ಅಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯು ‘ಜನಾಂಗೀಯ ನಿರ್ಮೂಲನೆ’ಯಾಗಿದೆ ಎಂಬುದಾಗಿಯೂ ವಿಶ್ವಸಂಸ್ಥೆ ಬಣ್ಣಿಸಿದೆ.

ಸ್ವೀಕಾರ ಕೇಂದ್ರಗಳಲ್ಲಿ ನಿರಾಶ್ರಿತರ ಸ್ವೀಕಾರ

ಬಾಂಗ್ಲಾದೇಶದಿಂದ ವಾಪಸ್ ಬರುವ ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್ ಮಂಗಳವಾರದಿಂದ ವಾಪಸ್ ಕರೆಸಿಕೊಳ್ಳಲಿದೆ. ಅವರನ್ನು ಮಾಂಗ್‌ಟವ್ ಪಟ್ಟಣದ ಸಮೀಪವಿರುವ 2 ಸ್ವೀಕಾರ ಕೇಂದ್ರಗಳು ಮತ್ತು ತಾತ್ಕಾಲಿಕ ಶಿಬಿರಗಳಲ್ಲಿ ಸ್ವೀಕರಿಸಲಾಗುವುದು.

ಈ ವಾರ ಉಭಯ ದೇಶಗಳು ಸಹಿ ಹಾಕಿದ ಒಪ್ಪಂದದನ್ವಯ ರೊಹಿಂಗ್ಯ ನಿರಾಶ್ರಿತರ ವಾಪಸಾತಿಯು 2 ವರ್ಷಗಳವರೆಗೆ ನಡೆಯಲಿದೆ.

ವಾಪಸಾಗುವವರ ಪಟ್ಟಿಯನ್ನು ಮ್ಯಾನ್ಮಾರ್‌ನಲ್ಲಿನ ಅವರ ವಾಸ್ತವ್ಯ ಪ್ರಮಾಣಪತ್ರಗಳೊಂದಿಗೆ ಬಾಂಗ್ಲಾದೇಶ ಮುಂಚಿತವಾಗಿಯೇ ಮ್ಯಾನ್ಮಾರ್‌ಗೆ ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News