×
Ad

ನರಿಂಗಾನ: ಒಳನಾಡು, ಅಲಕಾರಿಕ ಮೀನು ಕೃಷಿ ಕಾರ್ಯಾಗಾರ ಉದ್ಘಾಟನೆ

Update: 2018-01-20 20:25 IST

ಕೊಣಾಜೆ, ಜ. 20: ನೆಲ, ಜಲ ಸೇರಿದಂತೆ ಸೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಬೆಳೆಸಿ ಮುನ್ನಡೆಸುವಲ್ಲಿ ಹಾಗೂ ಮುಂದಿನ ಪೀಳಿಗೆಗೂ ವಿಸ್ತರಿಸುವಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದು ದ.ಕ. ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ‘ಮಂಗಳ ಯೋಜನೆ’ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂ. ಮೀನುಗಾರಿಕೆ ಇಲಾಖೆ ಹಾಗೂ ನರಿಂಗಾನ ಗ್ರಾಮ ಪಂ. ಇದರ ಸಹಯೋಗದೊಂದಿಗೆ ನರಿಂಗಾನದ ಸರ್ಕಾರಿ ಪ್ರೌಢಶಾಲೆ ಮೊಂಟೆಪದವಿನಲ್ಲಿ ಶನಿವಾರ ನಡೆದ ‘ಒಳನಾಡು ಮತ್ತು ಅಲಂಕಾರಿಕ ಮೀನು ಕೃಷಿ ಕಾರ್ಯಾಗಾರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರಿಂಗಾನ ಗ್ರಾಮವು ಕೂಡಾ ಜಲಸಂರಕ್ಷಣೆಯ ಪ್ರಮುಖ ಭಾಗವಾಗಿದ್ದರೂ ಇಲ್ಲಿ ನೀರಿನ ಸಂರಕ್ಷಣೆಯ ಮಾಡುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಈಗಾಗಲೇ ಗ್ರಾಮದ ಹಲವಾರು ಕಡೆ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ಜಲ ಸಂರಕ್ಷಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆ. ಹಾಗೆಯೆ ಜಿಲ್ಲೆಯಲ್ಲಿ ಈಗಾಗಲೇ 365 ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಟ್ಟು 1000 ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ನೀರಿನ ಸಂರಕ್ಷಣೆಯನ್ನು ಮಾಡುವ ಯೋಜನೆ ರೂಪಿಸಲಾಗಿದೆ. ವಿವಿಯ ಮೂಲಕ ನಡೆಯುವ ಈ ಕಾರ್ಯಾಗಾರವು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲ ಕರವಾಗಿದ್ದು ಇದರ ಪ್ರಯೋಜನವನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಭೈರಪ್ಪ ಅವರು, ವಿಶ್ವವಿದ್ಯಾಲಯ ಮತ್ತು ಗ್ರಾಮದ ಜನರ ಸಂಬಂಧವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಗ್ರಾಮದ ಸಂಸ್ಕೃತಿ, ಕೃಷಿ, ಸಮಸ್ಯೆಗಳನ್ನು ಅರಿಯುವ ನಿಟ್ಟಿನಲ್ಲಿ ಈಗಾಗಲೇ ಐದು ಗ್ರಾಮಗಳನ್ನು ದತ್ತು ಸ್ವೀಕಾರ ಮಾಡಿ ಯೋಜನೆಗಳನ್ನು ರೂಪಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಗ್ರಾಮದ ಜನರಿಗೂ ಅನುಕೂಲವಾಗುತ್ತದೆ ಜೊತೆಗೆ ವಿದ್ಯಾರ್ಥಿಗಳಲ್ಲಿಯೂ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಕೃಷಿ ಪ್ರಧಾನ ದೇಶವಾಗಿರುವುದರಿಂದ ಯುವ ಸಮುದಾಯವು ಕೃಷಿಯತ್ತ ಒಲವು ಮೂಡಿಸುವ ಪ್ರಯತ್ನಗಳು ಕೂಡಾ ನಡೆಯಬೇಕಿದ್ದು ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಮೀನಂಕೋಡಿ, ಮೀನು ಗಾರಿಕಾ ವಿದ್ಯಾಲಯದ ಉಪಾಧ್ಯಕ್ಷೆ ನಳಿನಾಕ್ಷಿ, ಮೊಂಟೆಪದವು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರಲೀಧರ ಶೆಟ್ಟಿ, ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಶ್ರೀ ಪಾದ, ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾ.ಶಿವಕುಮಾರ್ ಮಗದ, ಮಂಗಳೂರು ವಿವಿ ಸಾಗರ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಗಂಗಾಧರ್ ಭಟ್, ವಾಮಂಜೂರು ಅಕ್ವಾಟಿಕ್ ಬಯೋಸಿಸ್ಟಮ್‌ನ ರೊನಾಲ್ಡ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯ್ಕಾ ಅವರು ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೀಯ ನಾಯ್ಕಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News