×
Ad

ಕುಂದಾಪುರ ಆಸ್ಪತ್ರೆಗೆ ನುಗ್ಗಿ ನಗದು ಕಳವು: ಸಿಸಿಟಿವಿಯಲ್ಲಿ ದೃಶ್ಯ ದಾಖಲು

Update: 2018-01-20 20:40 IST

ಕುಂದಾಪುರ, ಜ.20: ಕುಂದಾಪುರದ ಖಾಸಗಿ ಆಸ್ಪತ್ರೆಯ ಮೆಡಿಕಲ್ ವಿಭಾಗಕ್ಕೆ ನುಗ್ಗಿದ ಹೆಲ್ಮೆಟ್ ಧರಿಸಿದ ದುಷ್ಕರ್ಮಿಯೋರ್ವ ಕ್ಯಾಶ್ ಕೌಂಟರ್‌ನಲ್ಲಿದ್ದ ಸಾವಿರಾರು ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಇಂದು ಬೆಳಗಿನ ಜಾವ 6:30ರ ಸುಮಾರಿಗೆ ನಡೆದಿದೆ.

ಈ ಎಲ್ಲ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ವೀಡಿಯೊ ಫುಟೇಜ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆತ ಬಿಳಿ ಬಣ್ಣದ ಹೆಲ್ಮೆಟ್ ಧರಿಸಿರುವುದರಿಂದ ಆತನ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆಸ್ಪತ್ರೆಯ ಮೆಡಿಕಲ್ ವಿಭಾಗದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೆಲ್ಮೆಟ್ ಧರಿಸಿಕೊಂಡು ಬಂದ ಆತ ಏಕಾಏಕಿ ಆಸ್ಪತ್ರೆಗೆ ನುಗ್ಗಿ ಮೆಡಿಕಲ್ ವಿಭಾಗದ ಒಳಗೆ ಜಿಗಿದನು. ಅದನ್ನು ನೋಡಿದ ಉದ್ಯೋಗಿ ಬೊಬ್ಬೆ ಹಾಕಿಕೊಂಡು ಹಿಂಬದಿಗೆ ಓಡಿ ಹೋದರು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ನೊಬ್ಬಳು ಉದ್ಯೋಗಿ ಜೊತೆ ಬಾಗಿಲು ತೆರೆದು ಹೊರಗೆ ಓಡಿ ಹೋದರು. 

ಈ ಸಂದರ್ಭ ಆತ ಮೆಡಿಕಲ್ ವಿಭಾಗದ ಕ್ಯಾಶ್ ಕೌಂಟರನ್ನು ತೆರೆದು ಅದರಲ್ಲಿದ್ದ ಹಣ ತೆಗೆದು ಬಂದ ಬೈಕಿನಲ್ಲಿಯೇ ಪರಾರಿಯಾಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳವಾದ ಹಣದ ಮೊತ್ತ 4,900 ರೂ. ಎಂದು ತಿಳಿದುಬಂದಿದೆ. ಜರ್ಕಿನ್ ಧರಿಸಿದ್ದ ದುಷ್ಕರ್ಮಿಯ ಹೆಗಲಲ್ಲಿ ಬ್ಯಾಗ್ ಕೂಡ ಇರುವುದು ವೀಡಿಯೊದಲ್ಲಿ ಕಂಡುಬಂದಿದೆ. ಆದರೆ ಆತನ ಮುಖ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ಈ ಬಗ್ಗೆ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News