×
Ad

'ಬದ್ಧತೆಯೊಂದಿಗೆ ಸೇವೆ ನಿರ್ವಹಿಸುವ ನರ್ಸಿಂಗ್ ಪದವೀಧರರಿಗೆ ಜಾಗತಿಕವಾಗಿ ಮನ್ನಣೆ ಇದೆ'

Update: 2018-01-20 21:43 IST

ಮಂಗಳೂರು, ಜ. 20: ಬದ್ಧತೆಯೊಂದಿಗೆ ನರ್ಸಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ನರ್ಸಿಂಗ್ ಪದವೀಧರರಿಗೆ ಜಾಗತಿಕವಾಗಿ ಬೇಡಿಕೆ ಇದೆ ಎಂದು ಅತೀ ವಂ.ಡಾ.ಬಿಷಪ್ ಅಲೊಶಿಯಸ್ ಪಾವ್ಲ್ ಡಿ ಸೋಜ ತಿಳಿಸಿದ್ದಾರೆ.

ನಗರದ ಫಾದರ್ ಮುಲ್ಲಾರ್ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಸಮ್ಮೇಳನವನ್ನು ಇಲ್ಲಿನ ಸಮ್ಮೇಳನ ಸಭಾಂಗಣದಲ್ಲಿ  ಉದ್ಘಾಟಿಸಿ ಮಾತನಾಡುತ್ತಿದ್ದರು.

ಫಾದರ್ ಮುಲ್ಲಾರ್ ಸಂಸ್ಥೆಯ ನರ್ಸಿಂಗ್ ಶಿಕ್ಷಣದ ಗುಣಮಟ್ಟದ ಬಗ್ಗೆ ಜಾಗತಿಕವಾಗಿ ಮೆಚ್ಚುಗೆ ಇದೆ.ಇದನ್ನು ಮುಂದುವರಿಸಿಕೊಂಡು ಬರಲು ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಬಿಷಪ್ ತಿಳಿಸಿದರು. ಫಾದರ್ ಮುಲ್ಲಾರ್ ಸ್ಕೂಲ್ ಆಫ್ ನರ್ಸಿಂಗ್ ಸಂಸ್ಥೆಯ ವಿಶ್ರಾಂತ ಪ್ರಾಂಶುಪಾಲ ಎಡ್ಮಂಡ್ ಡಿ ಸೋಜ ಮಾತನಾಡುತ್ತಾ ಸಂಸ್ಥೆಯಲ್ಲಿ ತಾನು 41ವರ್ಷ ಸೇವೆ ಸಲ್ಲಿಸಿದ ಸಂದರ್ಭದ ಅನುಭವವನ್ನು ಸ್ಮರಿಸಿ ಕೊಂಡರು.

ಸಮಾರಂಭದಲ್ಲಿ ಫಾದರ್ ಮುಲ್ಲಾರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಬಿಷಪ್ ಸನ್ಮಾನಿಸಿದರು. ಕತಾರ್‌ನ ಸಾರ್ವಜನಿಕ ಆರೋಗ್ಯ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಪ್ರಥಮ ಬ್ಯಾಚ್‌ನ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಮರ್ಲಿನ್ ತಾವ್ರೋ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಫಾದರ್ ಮುಲ್ಲಾರ್ ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜಿನ 60ನೆ ವರ್ಷಾಚರಣೆ,ಬಿಎಸ್‌ಸಿ ಮತ್ತು ಪಿಬಿಬಿಎಸ್‌ಸಿ ನರ್ಸಿಂಗ್ ವಿಭಾಗದ 25ನೆ ವರ್ಷಾಚರಣೆಯನ್ನು ಹಾಗೂ ನರ್ಸಿಂಗ್ ವಿಭಾಗ ಹಳೆ ವಿದ್ಯಾರ್ಥಿಗಳ ಸಂಘಟನೆಯ ವತಿಯಿಂದ ತುರ್ತು ಸಂದರ್ಭದಲ್ಲಿನ ನರ್ಸಿಂಗ್ ಸೇವೆಯ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. 

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಮಿಳುನಾಡಿನ ನರ್ಸಿಂಗ್ ಮತ್ತು ಮಿಡ್‌ವೈಫ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಡಾ.ಆ್ಯನಿ ಗ್ರೇಸಿ ಕಲೈಮತ್ತಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ವಂ,ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಚಾನ್ಸಿಲರ್ ಹೆನ್ರಿ ಸಿಕ್ವೇರಾ,ಫಾ.ಮುಲ್ಲಾರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜೆಸಿಂತ ಡಿ ಸೋಜ, ನರ್ಸಿಂಗ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡೆರಿಲ್ ಅರ್ಹಾನ ಮೊದಲಾದವರು ಉಪಸ್ಥಿತರಿದ್ದರು.

ಫಾದರ್ ಮುಲ್ಲಾರ್ ಚ್ಯಾರಿಟೇಬಲ್ ಇನ್ಸ್‌ಟ್ಯೂಟ್‌ನ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ ಸ್ವಾಗತಿಸಿದರು.ನರ್ಸಿಂಗ್ ಸ್ಕೂಲ್‌ನ ಪ್ರಾಂಶುಪಾಲೆ ಜಾಸ್ಮಿನ್ ಸರಿತಾ ವಾಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News