ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 6.50 ಕೋಟಿ ರೂ. ಮಂಜೂರು-ಜೆ.ಆರ್.ಲೋಬೊ
ಮಂಗಳೂರು, ಜ. 20: ನಗರದ ಉರ್ವ ಮಾರಿಗುಡಿ ಬಳಿ ಇರುವ ಒಂದು ಎಕರೆ ಜಮೀನಿನಲ್ಲಿ 6.50 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಸರಕಾರ ಆರೂವರೆ ಕೋಟಿ ರೂಪಾಯಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಕ್ರೀಡಾಂಗಣವನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಮುಂದೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ , ಮಂಗಳೂರಿನಲ್ಲಿ ನಡೆಸಲು ಅನುಕೂಲವಾಗಲಿದೆ. ಕ್ರೀಡಾ ಕೂಟ ದ.ಕ ಜಿಲ್ಲಾ ಅಮೆಚೂರು ಅಸೋಸಿಯೇಶನ್‌ರವರು ಸರಕಾರಕ್ಕೆ ಸಲ್ಲಿಸಿದ ಮನವಿಯ ಪ್ರಕಾರ ಕರ್ನಾಟಕ ಸರಕಾರದ ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಕೋರ್ಟ್, ಲೈಟಿಂಗ್ ವ್ಯವಸ್ಥೆ, ಮಲ್ಟಿಜಿಮ್ ಹಾಗೂ ಡ್ರೆಸಿಂಗ್ ಕೊಠಡಿಯೊಂದಿಗೆ ಬ್ಯಾಡ್ಮಿಂಟನ್, ಕಬಡ್ಡಿ ಕ್ರೀಡಾಂಗಣದೊಂದಿಗೆ ಆಡಳಿತ ಕಚೇರಿ, ಸಭಾಂಗಣ, ಅತಿಥಿ ಗೃಹ, ಕ್ಯಾಫೆಟೇರಿಯ ಹಾಗೂ 750 ಜನರ ಹಾಗೂ 1000 ಜನರು ಕುಳಿತುಕೊಳ್ಳಲು ಸಾಧ್ಯವಿರುವ ಬೃಹತ್ ಗ್ಯಾಲರಿ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳ ಕ್ರೀಡಾಪಟುಗಳ ಕ್ರೀಡಾಚಟುವಟಿಕೆ ವೃದ್ಧಿ ಸಲು ಸಹಕಾರಿಯಾಗಲಿದೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.
ಎಮ್ಮೆ ಕೆರೆಯಲ್ಲಿ ಫುಟ್‌ಬಾಲ್ ಕ್ರೀಡಾಂಗಣ ಮತ್ತು ಸ್ವಿಮ್ಮಿಂಗ್ ಫೋಲ್ ಅಭಿವೃದ್ಧಿ
ಎಮ್ಮೆ ಕೆರೆಯಲ್ಲಿ ಫುಟ್‌ಬಾಲ್ ಕ್ರೀಡಾಂಗಣ ಮತ್ತು ಸ್ವಿಮ್ಮಿಂಗ್ ಫೋಲ್ ಅಭಿವೃದ್ಧಿ ಪಡಿಸಲು ಕ್ರಮ ಕಯಗೊಳ್ಳಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಎಕ್ಕೂರಿನಲ್ಲಿ ಕ್ರೀಡಾಂಗಣ ಅಭಿವೃದ್ಧಿ
ಬೆಳೆಯುತ್ತಿರುವ ಮಂಗಳೂರು ಅಭಿವೃದ್ಧಿಗೆ ಪೂರಕವಾಗಿ ಮಂಗಳ ಕ್ರೀಡಾಂಗಣದ ಮಾದರಿಯಲ್ಲಿ ಎಕ್ಕೂರಿನಲ್ಲಿ ಪರ್ಯಾಯ ಕ್ರೀಡಾಂಗಣದ ವೃದ್ಧಿಗೆ ಸರಕಾರದಿಂದ 3 ಕೋಟಿ ಮಂಜೂರಾತಿ ನೀಡಿದೆ.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಗ್ರಾಮದ ಅಭಿವೃದ್ಧಿಯ ಚಿಂತನೆ
-ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಗ್ರಾಮವನ್ನು ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ದ.ಕ ಜಿಲ್ಲಾ ಬ್ಯಾಡ್ಮಿಂಟನ್ ಎಸೋಸಿಯೇಶನ್‌ನ ಅಧ್ಯಕ್ಷ ಸದಾನಂದ ಶೆಟ್ಟಿ ,ದ.ಕ ಜಿಲ್ಲಾ ಕಬಡ್ಡಿ ಎಸೋಸಿಯೇಶನ್‌ನ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಮಂಗಳಾ ಬ್ಯಾಡ್ಮಿಂಟನ್ ಎಸೋಸಿಯೇಶನ್‌ನ ಅಧ್ಯಕ್ಷ ವೆಂಕಟೇಶ್,ಆಳ್ವಾಸ್ ಎಸೋಸಿಯೇಟ್ಸನ ಸುಪ್ರೀತ್ ಆಳ್ವಾ, ಸಂತೋಷ್ ಶಟ್ಟಿ, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.