×
Ad

ಪೇಜಾವರಶ್ರೀಗೆ ಬೆನ್ನುನೋವು; 15 ದಿನಗಳ ವಿಶ್ರಾಂತಿಗೆ ಸಲಹೆ

Update: 2018-01-20 21:51 IST

ಉಡುಪಿ, ಜ.20: ಎರಡು ದಿನಗಳ ಹಿಂದಷ್ಟೇ ಪರ್ಯಾಯ ಪೀಠದಿಂದ ಇಳಿದ ಕ್ಷಣದಿಂದ ಸಂಚಾರದಲ್ಲಿರುವ ಪೇಜಾವರ ಮಠದ 87ರ ಹರೆಯದ ಶ್ರೀ ವಿಶ್ವೇಶತೀರ್ಥ ಶ್ರೀ ದೇಶ ಸಂಚಾರಕ್ಕೆ ಬೆನ್ನುನೋವು ತಡೆಯೊಡ್ಡಿದೆ.

ಇದರಿಂದ ಆಂಧ್ರ ಪ್ರದೇಶದಲ್ಲಿದ್ದ ಪೇಜಾವರ ಶ್ರೀಗಳು ಅನಿವಾರ್ಯವಾಗಿ ಉಡುಪಿಗೆ ಹಿಂದಿರುಗಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಕನಿಷ್ಠ 15 ದಿನಗಳ ವಿಶ್ರಾಂತಿಯ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ಅವರು ರಥಬೀದಿಯಲ್ಲಿರುವ ಪೇಜಾವರ ಮಠದ ಬಳಿಯ ‘ವಿಜಯಧ್ವಜ’ದಲ್ಲಿ ವಿಶ್ರಾಂತಿ ಪಡೆಯುತಿದ್ದಾರೆ.

ತನ್ನ ಏರುತ್ತಿರುವ ವಯಸ್ಸಿನ ಹೊರತಾಗಿಯೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸದಾ ದೇಶ ಸಂಚಾರದಲ್ಲಿರುವ ಪೇಜಾವರ ಶ್ರೀ  ದಾಖಲೆಯ ಐದನೇ ಬಾರಿ ಪರ್ಯಾಯ ಪೀಠವನ್ನೇರಿದ ಬಳಿಕ ಎರಡು ವರ್ಷಗಳ ಕಾಲ ಮಠದಲ್ಲೇ ಇದ್ದು, ಶ್ರೀಕೃಷ್ಣನ ಪೂಜೆಯಲ್ಲೇ ವ್ಯಸ್ತರಾಗಿದ್ದರು.

ಆದರೆ ಕಳೆದ ಗುರುವಾರ ಮುಂಜಾನೆ ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ಪಲಿಮಾರು ಶ್ರೀಗಳಿಗೆ ಹಸ್ತಾಂತರಿಸಿದ ಕ್ಷಣದಿಂದ ಅವರು ಮತ್ತೆ ನಿತ್ಯಸಂಚಾರಿ ಯಾಗಿದ್ದರು. ಗುರುವಾರ ಉಡುಪಿ, ಮಣಿಪಾಲ, ಕಾಪು ಹೀಗೆ ಹಲವೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಶ್ರೀಗಳು, ಶುಕ್ರವಾರ ಸೋಂದೆಯಲ್ಲಿರುವ ಸೋದೆ ವಾದಿರಾಜ ಮಠ, ಗದಗ ಹಾಗೂ ಮಂತ್ರಾಲಯಗಳಿಗೆ ತೆರಳಿದ್ದರು.

ಮಂತ್ರಾಲಯ ಭೇಟಿಯನ್ನು ಮುಗಿಸಿ ರಾತ್ರಿ 11 ಗಂಟೆಗೆ ಮಂತ್ರಾಲಯ ದಿಂದ ಹೈದರಾಬಾದಿನತ್ತ ಪ್ರಯಾಣಿಸುತಿದ್ದಾಗ ಕರ್ನೂಲ್ ಬಳಿ ಪೇಜಾವರಶ್ರೀ ಗಳು ಪ್ರಯಾಣಿಸುತಿದ್ದ ಕಾರು ಹಂಪ್‌ನ್ನು ನಿಭಾಯಿಸುವ ವೇಳೆ ಜಂಪ್ ಆಗಿತ್ತು. ಇದರಿಂದ ಪೇಜಾವರಶ್ರೀಗಳ ಬೆನ್ನು ಜಖಂಗೊಂಡು ಉಳುಕಿದ್ದು, ತೀವ್ರವಾದ ನೋವು ಕಾಣಿಸಿಕೊಂಡಿತ್ತು.

ಕೂಡಲೇ ಕರ್ನೂಲ್‌ನಲ್ಲಿ ವೈದ್ಯರ ಬಳಿ ತಪಾಸಣೆಗೊಳಗಾದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೈದರಾಬಾದ್‌ನಿಂದ ವಿಮಾನದಲ್ಲಿ ಮುಂಜಾನೆ ಮಂಗಳೂರಿಗೆ ಕರೆತರಲಾಗಿತ್ತು. ಅಲ್ಲಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೂಳೆ ತಜ್ಞರಿಂದ ತಪಾಸಣೆ, ಸಿಟಿ ಸ್ಕಾನ್‌ಗೊಳಗಾಗಿದ್ದರು. ಬೆನ್ನುನೋವಿನಿಂದ ನಡೆದಾಡಲು ಆಗದ ಸ್ಥಿತಿಯಲ್ಲಿದ್ದ ಸ್ವಾಮೀಜಿಯವರನ್ನು ಎತ್ತಿಕೊಂಡೇ ಕರೆತರಲಾಗಿತ್ತು ಎಂದು ಸಹಾಯಕರು ತಿಳಿಸಿದರು.

ಇದೀಗ ಆಸ್ಪತ್ರೆಯಿಂದ ಪೇಜಾವರ ಮಠದ ವಿಜಯಧ್ವಜದಲ್ಲಿ ವಿಶ್ರಾಂತಿಯ ಲ್ಲಿರುವ ಶ್ರೀಗಳಿಗೆ ಒಂದು ವಾರ ನಡೆದಾಡದಂತೆ ಕಟ್ಟುನಿಟ್ಟಿನ ಸೂಚನೆಯನ್ನು ವೈದ್ಯರು ನೀಡಿದ್ದಾರೆ.

‘ನನಗೆ ಬೆನ್ನು ನೋವಿದ್ದು, ನಡೆದಾಡಲು ಸಾಧ್ಯವಾಗುತ್ತಿಲ್ಲ. ಇನ್ನು 15 ದಿನ ಎಲ್ಲೂ ಓಡಾಡದೇ ಸಂಪೂರ್ಣ ವಿಶ್ರಾಂತಿ ಪಡೆಯುತ್ತೇನೆ. ವೈದ್ಯರು ಸ್ಕಾನ್ ಮಾಡಿ ಔಷಧಿ ಸೂಚಿಸಿದ್ದಾರೆ.’ ಎಂದು ಪೇಜಾವರ ಶ್ರೀ  ಸುದ್ದಿಗಾರರಿಗೆ ತಿಳಿಸಿದರು.

‘ಮಂತ್ರಾಲಯದಿಂದ ನಿನ್ನೆ ರಾತ್ರಿ ಹೈದರಾಬಾದ್‌ಗೆ ಬರುತಿದ್ದಾಗ, ರಸ್ತೆ ಮಧ್ಯೆ ಕಾರು ಏಕಾಏಕಿ ಹಾರಿತು. ಈ ಸಂದರ್ಭದಲ್ಲಿ ನನ್ನ ಬೆನ್ನಿಗೆ ಏಟು ಬಿದ್ದಿದೆ’ ಎಂದವರು ಘಟನೆಯನ್ನು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News