×
Ad

'ಪಾನ್, ಸಿಗರೇಟು, ಮದ್ಯ, ಮಾಂಸದಂತಹ ವ್ಯಸನದಿಂದ ಸಮಾಜಕ್ಕೆ ಹಾನಿ'

Update: 2018-01-20 22:12 IST

ಮಂಗಳೂರು, ಜ.20: ಪಾನ್, ಸಿಗರೇಟು, ಮದ್ಯ, ಮಾಂಸದಂತಹ ವ್ಯಸನಗಳಿಂದ ವ್ಯಕ್ತಿ ಮಾತ್ರವಲ್ಲ ಸಮಾಜಕ್ಕೂ ಹಾನಿಯಾಗಲಿದೆ. ಹಾಗಾಗಿ ಅದರಿಂದ ದೂರವಿರಬೇಕಿದೆ. ಯುವ ಜನಾಂಗ ಫ್ಯಾಶನ್‌ನ ಹಿಂದೆ ಬೀಳದೆ ಸಜ್ಜನರಾಗಬೇಕು. ಸಂಸ್ಕಾರಯುತ ಮತ್ತು ವೌಲ್ಯಯುತ ಶಿಕ್ಷಣ ಪಡೆಯುವ ಜತೆಗೆ, ಬದುಕು ಸುಭದ್ರಗೊಳಿಸಲು ಮಾದಕ ವ್ಯಸನ, ಫ್ಯಾಶನ್‌ಗಳಿಂದ ತಿಲಾಂಜಲಿ ಹಾಡುವುದು ಅನಿವಾರ್ಯ ಎಂದು ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲ ಹೇಳಿದರು.

ನಗರದ ಶಾರದಾ ವಿದ್ಯಾಲಯದ ರಜತ ಮಹೋತ್ಸವ ಸಮಾರಂಭದ ಲಾಂಛನವನ್ನು ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ಉನ್ನತ ಶಿಕ್ಷಣ ಇರಬಹುದು. ಆದರೆ ವಿನಯಶೀಲತೆಯನ್ನು ನಿರೀಕ್ಷಿಸಲಾಗದು. ಶಿಕ್ಷಣದಿಂದ ಸದ್ವಿಚಾರ, ವೈಚಾರಿಕತೆ ಬೆಳೆಯಬೇಕು. ಅದು ಭಾರತದ ಶಿಕ್ಷಣದಿಂದ ಲಭ್ಯವಿದೆ ಎಂದ ರಾಜ್ಯಪಾಲ ವಜುಭಾಯಿ ರೂಢಭಾಯಿ ವಾಲ, ಪ್ರಧಾನಿಯವರ ಬೇಟಿ ಬಚಾವೊ, ಬೇಟಿ ಪಢಾವೊ ಪೊಷಣೆಗೆ ಬೇಟಿ ಬಢಾವೊ ಸೇರಿಸಬೇಕು. ಇತ್ತೀಚೆಗೆ ವಿವಿಗಳಲ್ಲಿ ಅತೀ ಹೆಚ್ಚಿನ ಚಿನ್ನದ ಪದಕ ಪಡೆಯುವವರಲ್ಲಿ ವಿದ್ಯಾರ್ಥಿನಿಯರೇ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಮಹಿಳಾ ಸಶಕ್ತೀಕರಣ ಮಾಡಿದರೆ ಅದರ ಪ್ರತಿಲ 20 ವರ್ಷದ ನಂತರ ಕಾಣಲು ಸಿಗುತ್ತದೆ ಎಂದರು.

ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.

ಬೆಳ್ಳಿಹಬ್ಬ ಸಮಾರಂಭದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಭಾರತದ ಉನ್ನತ ಸಾಧನೆಗೆ ಶಿಕ್ಷಣ ಮಾತ್ರ ಕೀಲಿ ಕೈ. ಮಕ್ಕಳು ತಂತ್ರಜ್ಞಾನ ಕಲಿತರೆ ಸಾಲದು, ಅದರಲ್ಲಿ ಗುಣಮಟ್ಟ ಮತ್ತು ವೌಲ್ಯಯುವ ಶಿಕ್ಷಣವಿರಬೇಕು ಎಂದರು.
ನಿಟ್ಟೆ ವಿವಿ ಕುಲಪತಿ ಡಾ.ಎನ್. ವಿನಯ್ ಹೆಗ್ಡೆ ಶುಭ ಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್-ಸುನಂದಾ ಪುರಾಣಿಕ್ ದಂಪತಿಯನ್ನು ಎಸ್‌ಕೆಡಿಬಿ ಸದಸ್ಯರು ಸನ್ಮಾನಿಸಿದರು. ಪುರಾಣಿಕ್ ಅವರನ್ನು ಡಾ.ಲೀಲಾ ಉಪಾಧ್ಯಾಯ ಪರಿಚಯಿಸಿದರು.

ಶಾರದಾ ವಿದ್ಯಾಲಯದ ಟ್ರಸ್ಟಿ ಪ್ರದೀಪ ಕುಮಾರ್ ಕಲ್ಕೂರ್ ಸ್ವಾಗತಿಸಿದರು. ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ಸುನಿತಾ ವಿ.ಮಡಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News